ಮಡಿಕೇರಿ, ಅ. ೧೫: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಯುನೈಟೆಡ್ ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್‌ನÀ ಕೊಡಗು ಜಿಲ್ಲಾ ಘಟಕ "ಪ್ಲಾಂಟೇಷನ್ ಉದ್ಯಮ ಉಳಿಸಿ, ಕಾರ್ಮಿಕರನ್ನು ರಕ್ಷಿಸಿ" ಘೋಷವಾಕ್ಯದೊಂದಿಗೆ ಹೆಚ್ಚುವರಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿತು.
ಈ ಸಂದರ್ಭ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ಹೆಚ್.ಎಂ. ಸೋಮಪ್ಪ ಸರ್ಕಾರ ಬೆಳೆಗಾರರು ಹಾಗೂ ಕಾರ್ಮಿಕರ ನೆರವಿಗೆ ಬರಬೇಕೆಂದು ಒತ್ತಾಯಿಸಿದರು.
ರಾಜ್ಯದಲ್ಲಿ ಕಾಫಿ ಬೆಳೆಯುವ ಪ್ರದೇಶಗಳಾದ ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆ ಆರ್ಥಿಕ ಕ್ಷೇತ್ರದ ಬೆಳವಣಿಗೆ ಹಾಗೂ ಉದ್ಯೋಗ ಒದಗಿಸುವ ಮೂಲವು ಆಗಿದೆ. ಆದರೆ ಕಳೆದ ಕೆಲವು ವರ್ಷಗಳಿಂದ ಪ್ರಾಕೃತಿಕ ವಿಕೋಪ ಮತ್ತು ಬೆಲೆ ಹೆಚ್ಚಳದಿಂದಾಗಿ ತೋಟಗಳ ನಿರ್ವಹಣೆ ದುಬಾರಿಯಾಗಿದೆ. ಬೆಲೆ ಏರಿಕೆಗೆ ಅನುಗುಣವಾಗಿ ವೇತನ ಹೆಚ್ಚಳವಾಗದೇ ಇರುವುದರಿಂದ ಕಾರ್ಮಿಕರು ಕೂಡ ಸಂಕಷ್ಟದ ಬದುಕು ಸಾಗಿಸುತ್ತಿದ್ದಾರೆ. ಆದ್ದರಿಂದ ಸರ್ಕಾರ ಕಾರ್ಮಿಕರ ಕನಿಷ್ಟ ವೇತನ ಹೆಚ್ಚಳಗೊಳಿಸಲು ಪರಿಹಾರದ ಪ್ಯಾಕೇಜ್ ಘೋಷಿಸಬೇಕೆಂದು ಆಗ್ರಹಿಸಿದರು.
ಬೇಡಿಕೆಗಳು: ಕಾರ್ಮಿಕರ ಕನಿಷ್ಟ ವೇತನವನ್ನು ೬೦೦ ರೂ.ಗಳಿಗೆ ಏರಿಕೆ ಮಾಡಬೇಕು, ತೋಟದ ಲೈನ್ ಮನೆಗಳಲ್ಲಿ ಮತ್ತು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ಕಾರ್ಮಿಕರಿಗೆ ಸ್ವಂತ ನಿವೇಶನ ಅಥವಾ ವಸತಿ ಸೌಲಭ್ಯವನ್ನು ಕಲ್ಪಿಸಬೇಕು, ವನ್ಯಜೀವಿ ಉಪಟಳವನ್ನು ನಿಯಂತ್ರಿಸಬೇಕು, ಕಾಡು ಪ್ರಾಣಿಗಳ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ರೂ. ೨೫ ಲಕ್ಷ ಪರಿಹಾರ ನೀಡಬೇಕು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾರ್ಮಿಕ ವಿರೋಧಿ ನೀತಿಗಳನ್ನು ಹಿಂಪಡೆಯಬೇಕು, ತೈಲೋತ್ಪನ್ನ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು, ಅತಿವೃಷ್ಟಿಯಿಂದ ಸೋಮವಾರಪೇಟೆ ತಾಲೂಕಿನಲ್ಲಿ ಮನೆಗಳನ್ನು ಕಳೆದುಕೊಂಡಿರುವ ಸಾವಿರಕ್ಕೂ ಅಧಿಕ ಕಾರ್ಮಿಕರಿಗೆ ಸೂರು ಒದಗಿಸಿ ಕೊಡಬೇಕು, ಮನೆ ನಿರ್ಮಾಣಕ್ಕೆ ಜಂಬೂರು ಬಾಣೆಯಲ್ಲಿ ಜಾಗ ಗುರುತಿಸಬೇಕು ಎಂದು ಸೋಮಪ್ಪ ಒತ್ತಾಯಿಸಿದರು.
ಈ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದಲ್ಲಿ ಜಿಲ್ಲೆಯಾದ್ಯಂತ ಹೋರಾಟ ರೂಪಿಸುವುದಾಗಿ ಎಚ್ಚರಿಕೆ ನೀಡಿದರು. ಮನವಿ ಸಲ್ಲಿಸುವ ಸಂದರ್ಭ ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ಎನ್. ಮಣಿ, ಸೋಮವಾರಪೇಟೆ ತಾಲೂಕು ಕಾರ್ಯದರ್ಶಿ ಪಿ.ಟಿ. ಸುಂದರ್, ವೀರಾಜಪೇಟೆ ತಾಲೂಕು ಸಂಚಾಲಕ ಕುಮಾರ್, ಕಾರ್ಯದರ್ಶಿ ರಮೇಶ್, ಪ್ರಮುಖರಾದ ಎಂ.ಎ. ಕೃಷ್ಣ ಹಾಗೂ ಆನಂದ ಹಾಜರಿದ್ದರು.