ಮಡಿಕೇರಿ, ಅ. ೧೫: ಚೆಟ್ಟಳ್ಳಿಯ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ವಿದ್ಯಾಸೇತು ಮಾರ್ಗದರ್ಶಿ ಪುಸ್ತಕಗಳನ್ನು ನೀಡಲಾಯಿತು.

ಶಾಲಾ ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ವಿದ್ಯಾಸೇತು ಮಾರ್ಗದರ್ಶಿ ಪುಸ್ತಕಗಳನ್ನು ವಿತರಿಸಿ ಮಾತನಾಡಿದ ರೋಟರಿ ಉಪರಾಜ್ಯಪಾಲ ಅನಿಲ್ ಎಚ್.ಟಿ., ರೋಟರಿ ಸಂಸ್ಥೆಗಳ ವತಿಯಿಂದ ಈ ವರ್ಷ ಮಹತ್ವದ ಶೈಕ್ಷಣಿಕ ಯೋಜನೆಯಾಗಿ ವಿದ್ಯಾಸೇತು ಹೆಸರಿನ ಮಾರ್ಗದರ್ಶಿ ಪುಸ್ತಕಗಳನ್ನು ೧೦ನೇ ತರಗತಿ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿದೆ. ಕೊಡಗು ಜಿಲ್ಲೆಯ ವಿವಿಧ ಶಾಲೆಗಳ ೩ ಸಾವಿರ ವಿದ್ಯಾರ್ಥಿಗಳು ವಿದ್ಯಾಸೇತು ಪ್ರಯೋಜನ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ಚೆಟ್ಟಳ್ಳಿ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾಸೇತು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ ಚೆಟ್ಟಳ್ಳಿಯ ಚೇತನ ಸಂಘದ ಸದಸ್ಯರಿಗೆ ಅನಿಲ್ ಅಭಿನಂದನೆ ಸಲ್ಲಿಸಿದರು. ಈ ಮಾರ್ಗದರ್ಶಿ ಪುಸ್ತಕದ ಪ್ರಯೋಜನ ಪಡೆದ ವಿದ್ಯಾರ್ಥಿಗಳು ಇದೇ ಪುಸ್ತಕಗಳನ್ನು ಮುಂದಿನ ವರ್ಷದ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಬೇಕಾಗಿದೆ ಎಂದೂ ಅವರು ಮನವಿ ಮಾಡಿದರು.

ಚೆಟ್ಟಳ್ಳಿ ಚೇತನ ಸಂಘದ ಅಧ್ಯಕ್ಷ ಸುರೇಶ್ ಬಾಬು ಮಾತನಾಡಿ, ಚೆಟ್ಟಳ್ಳಿಯಲ್ಲಿ ಚೇತನ ಸಂಘವು ಸಾಮಾಜಿಕ ಸೇವಾ ಕಾರ್ಯಗಳಿಗಾಗಿ ಅನೇಕ ಯೋಜನೆ ರೂಪಿಸಿದ್ದು, ಈ ನಿಟ್ಟಿನಲ್ಲಿ ರೋಟರಿ ಸಹಯೋಗದಲ್ಲಿ ವಿದ್ಯಾಸೇತು ಪುಸ್ತಕಗಳನ್ನೂ ಶಾಲೆಯ ವಿದ್ಯಾರ್ಥಿಗಳಿಗೆ ನೀಡಲಾಗಿದೆ ಎಂದರು. ಚೇತನ ಸಂಘದ ಕಾರ್ಯದರ್ಶಿ ಪ್ರವೀಣ್, ಸಂಚಾಲಕರಾದ ಉಮೇಶ್, ರವಿ, ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ, ರೋಟರಿ ಮಿಸ್ಟಿ ಹಿಲ್ಸ್ ನಿರ್ದೇಶಕ ಕ್ಯಾರಿ ಕಾರ್ಯಪ್ಪ ಹಾಜರಿದ್ದರು. ಅಧ್ಯಾಪಕಿ ಸುನಂದ ಸ್ವಾಗತಿಸಿದರು.