ಗೋಣಿಕೊಪ್ಪಲು, ಅ. ೧೨: ಮುಕ್ಕಾಟೀರ ಕುಟುಂಬದ ವತಿಯಿಂದ ೨೦೨೦ ರಲ್ಲಿ ೨೩ನೇ ಕೊಡವ ಹಾಕಿ ಕ್ರೀಡಾಕೂಟವನ್ನು ಬಾಳುಗೋಡುವಿನಲ್ಲಿ ಆಯೋಜಿಸಿದ ವೇಳೆ ಆತ್ಮೀಯರಾಗಿದ್ದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಬೆಂಗಳೂರಿನ ನಿವಾಸದಲ್ಲಿ ಭೇಟಿ ಮಾಡಿ ಇಲ್ಲಿನ ಕೊಡವ ಸಂಸ್ಕೃತಿಯ ಬಗ್ಗೆ ವಿವರ ನೀಡಿದ್ದೆ. ಅವರೊಂದಿಗಿನ ಆತ್ಮೀಯತೆಯಿಂದ ಬಾಳುಗೋಡುವಿನಲ್ಲಿ ಶಾಶ್ವತ ಸ್ಟೇಡಿಯಂ ನಿರ್ಮಾಣಗೊಳಿಸಲು ಅನುದಾನ ನೀಡುವಂತೆ ಮನವಿ ಮಾಡಿದ್ದೆ ಎಂದು ಮುಕ್ಕಾಟೀರ ಹಾಕಿ ಕುಟುಂಬದ ಅಧ್ಯಕ್ಷ ಹಾಗೂ ಕೊಡವ ಸಮಾಜಗಳ ಒಕ್ಕೂಟದ ನಿರ್ದೇಶಕರಾದ ಮುಕ್ಕಾಟೀರ ಉತ್ತಯ್ಯ ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮದೊಂದಿಗೆ ಅಭಿಪ್ರಾಯ ಹಂಚಿಕೊAಡ ಉತ್ತಯ್ಯ ಬಾಳುಗೋಡುವಿನಲ್ಲಿ ಶಾಶ್ವತ ಸ್ಟೇಡಿಯಂ ನಿರ್ಮಾಣ ಆಗಬೇಕು ಪ್ರತಿ ಕೊಡವ ಕುಟುಂಬಗಳು ಇಲ್ಲಿಯೇ ಹಾಕಿ ಕ್ರೀಡೆಯನ್ನು ಆಯೋಜಿಸಬೇಕು ಇದರಿಂದ ಹಾಕಿ ಕ್ರೀಡೆ ಜೊತೆಗೆ ಸಂಸ್ಕೃತಿ ಬೆಳೆಯಲು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಆತ್ಮೀಯರಾಗಿದ್ದ ಹೆಚ್.ಡಿ. ದೇವೇಗೌಡರ ಬಳಿ ವಿಷಯ ಮಂಡಿಸಿದ್ದೆ. ದೇವೇಗೌಡರು ಬಜೆಟ್‌ನಲ್ಲಿ ರೂ. ೧೦ ಕೋಟಿ ಅನುದಾನವನ್ನು ಮೀಸಲಿಡಲು ತಮ್ಮ ಔದಾರ್ಯ ತೋರಿದ್ದರು.
ಆದರೆ ಕೋವಿಡ್ ಹಿನ್ನೆಲೆ ಹಾಕಿ ಕ್ರೀಡೆಯನ್ನು ಮುಕ್ಕಾಟೀರ ಕುಟುಂಬದಿAದ ನಡೆಸಲು ಸಾಧ್ಯವಾಗಲಿಲ್ಲ. ದೇವೇಗೌಡರು ನೀಡಿದ ಮಾತಿನಂತೆ ಅನುದಾನವನ್ನು ಮೀಸಲಿಟ್ಟು ಬಜೆಟ್‌ನಲ್ಲಿ ಮಂಜೂರು ಮಾಡಿಸಿ ಇದೀಗ ಸರ್ಕಾರದಿಂದ ಅನುದಾನವೂ ಮಂಜೂರಾಗಿದೆ. ಮೂಲ ಉದ್ದೇಶದಂತೆ ಈ ಹಣವು ಸಂಪೂರ್ಣವಾಗಿ ಬಾಳುಗೋಡುವಿನಲ್ಲಿ ಸ್ಟೇಡಿಯಂ ನಿರ್ಮಾಣ ಮಾಡಲು ವಿನಿಯೋಗ ಮಾಡಲು ಫೆಡರೇಷನ್ ಆಫ್ ಕೊಡವ ಸಮಾಜ ತೀರ್ಮಾನ ಕೈಗೊಳ್ಳಬೇಕೆಂದು ಉತ್ತಯ್ಯ ಮನವಿ ಮಾಡಿದ್ದಾರೆ.
ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಆಡಳಿತಾವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಬಜೆಟ್‌ನಲ್ಲಿ ಹತ್ತು ಕೋಟಿಯನ್ನು ತಮ್ಮ ತಂದೆಯ ನಿರ್ದೇಶನದಂತೆ ಮಂಜೂರು ಮಾಡಿದ್ದರು. ಈ ಅನುದಾನವು ಮೂಲ ಉದ್ದೇಶಕ್ಕೆ ಬಳಕೆಯಾಗಬೇಕು ಎಂದು ತಿಳಿಸಿದ್ದಾರೆ.
-ಹೆಚ್.ಕೆ. ಜಗದೀಶ್