ವೀರಾಜಪೇಟೆ, ಅ. ೧೨: ಕೊಡಗಿನ ಸಾಂಪ್ರದಾಯಿಕ ಆಚರಣೆಗಳು ದೇಶದಲ್ಲೇ ವಿಶಿಷ್ಟವಾಗಿದ್ದು, ಇದನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕೆಂದು ವೀರಾಜಪೇಟೆ ನರ್ಸಿಂಗ್ ಹೋಂನ ವೈದ್ಯರಾದ ಡಾ. ಮುಕ್ಕಾಟೀರ ಸಿ. ಕಾರ್ಯಪ್ಪ ಕರೆ ನೀಡಿದರು.
ವೀರಾಜಪೇಟೆ ಕೊಡವ ಸಮಾಜ ಕೊಡವ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ಕೊಡವ ಸಮಾಜದ ಸಭಾಂಗಣದಲ್ಲಿ ಕೈಲ್ ಮುಹೂರ್ತ ಹಬ್ಬದ ಪ್ರಯುಕ್ತ ಅಯೋಜಿಸಿದ್ದ ಕೈಲ್ ಪೊಳ್ದ್ ನಮ್ಮೆಯ ಒತ್ತೋರ್ಮೆ ಕೂಟದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾವು ಮಕ್ಕಳಿಗೆ ಜೀವನದ ಮೌಲ್ಯಗಳನ್ನು ಕಲಿಸಬೇಕು, ದುಶ್ಚಟಗಳಿಗೆ ದಾಸರಾಗದಂತೆ ನೋಡಿಕೊಳ್ಳಬೇಕು ಎಂದರು.
ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಹೇಳಿದರು.
ಡಾ. ಫಾತೀಮಾ ಕಾರ್ಯಪ್ಪ ಮಾತನಾಡಿ ಪ್ರಕೃತಿ ರಮಣೀಯ ತಾಣವಾದ ಕೊಡಗು ತನ್ನದೇ ಆದ ವಿಶಿಷ್ಟ ಸಂಸ್ಕöÈತಿ, ಉಡುಗೆ-ತೊಡುಗೆ ಆಚಾರಗಳನ್ನು ಹೊಂದಿದೆ. ಇಲ್ಲಿಯ ಪದ್ಧತಿ, ಆಚಾರ, ವಿಚಾರ ದೇಶದ ಇತರ ರಾಜ್ಯಗಳಿಗಿಂತ ಭಿನ್ನವಾಗಿದೆ ಎಂದರು.
ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಉದ್ಯೋಗ, ಜೀವನ ನಿರ್ವಹಣೆ ಸೇರಿದಂತೆ ವಿವಿಧ ಕಾರಣಗಳಿಂದ ಹೆಚ್ಚಿನ ಕೊಡವರು ಇಂದು ಹೊರ ಭಾಗದಲ್ಲಿ ನೆಲೆಸಿದ್ದಾರೆ. ಕೊಡಗಿನವರು ಕೊಡಗಿನಲ್ಲಿಯೇ ನೆಲೆಗೊಳ್ಳುವಂತೆ ಆಗಬೇಕು. ಯುವಜನತೆ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದರು.
ಬೊಳ್ಳಕ್ಕ ಗ್ರೂಪಿನ ಅಧ್ಯಕ್ಷೆ ಪಟ್ರಪಂಡ ಗೀತಾ ಬೆಳ್ಯಪ್ಪ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಗೆಜ್ಜೆತಂಡ್ ಎನ್ನುವ ರೂಪಕವನ್ನು ಅಪ್ಪನೆರವಂಡ ಸೋನಿಯಾ ಮಂದಪ್ಪ ಹಾಗೂ ತಾತಂಡ ಜ್ಯೋತಿ ಪ್ರಕಾಶ್ ಪ್ರದರ್ಶಿಸಿದರು. ಬೊಳ್ಳಕ್ಕ ಗುಂಪಿನ ಸದಸ್ಯರು ಕೊಡವ ನೃತ್ಯಗಳನ್ನು ಪ್ರದರ್ಶಿಸಿದರು.
ಇದಕ್ಕೂ ಮೊದಲು ಆಯುಧಗಳಿಗೆ ಪೂಜೆ ಸಲ್ಲಿಸಿದ ಹಿರಿಯರಾದ ಕುಪ್ಪಂಡ ಪುಷ್ಪ ಮುತ್ತಣ್ಣ ಹಾಗೂ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಮುಖ್ಯ ಅತಿಥಿಗಳಾದ ಡಾ. ಮುಕ್ಕಾಟೀರ ಕಾರ್ಯಪ್ಪ ಹಾಗೂ ಡಾ. ಫಾತೀಮ ಕಾರ್ಯಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸಾಹಿತಿ ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ, ಕುಪ್ಪಂಡ ಪುಷ್ಪ ಮುತ್ತಣ್ಣ, ಖಜಾಂಚಿ ಪೊಯ್ಯೆಟ್ಟೀರ ಭಾನು ಭೀಮಯ್ಯ ಉಪಸ್ಥಿತರಿದ್ದರು.
ಪೊಮ್ಮಕ್ಕಡ ಕೂಟದ ಕಾರ್ಯದರ್ಶಿ ಬಯವಂಡ ಇಂದಿರಾ ಸ್ವಾಗತಿಸಿ ನಿರೂಪಿಸಿದರು. ವಿಮಲ ಪ್ರಾರ್ಥಿಸಿದರೆ ಮಾಳೇಟಿರ ಕವಿತಾ ಶ್ರೀನಿವಾಸ್ ವಂದಿಸಿದರು.