ಸೋಮವಾರಪೇಟೆ, ಅ. ೧೧: ಇಲ್ಲಿನ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾಗಿ ವಾರ್ಡ್ ೨ರ ಬಿಜೆಪಿ ಸದಸ್ಯ ಪಿ.ಕೆ. ಚಂದ್ರು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪ.ಪಂ. ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಚಂದ್ರು ಅವರೋರ್ವರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆ ನಡೆಯಿತು. ಪರಿಶಿಷ್ಟ ಜಾತಿ ಮೀಸಲು ಹೊಂದಿದ್ದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಚಂದ್ರು ಹಾಗೂ ಮೋಹಿನಿ ಅವರುಗಳು ಅರ್ಹರಾಗಿದ್ದರೂ, ಈ ಹಿಂದೆ ನಡೆದಿದ್ದ ಒಡಂಬಡಿಕೆಯAತೆ ಚಂದ್ರು ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು.
ಹಿಂದಿನ ಅಧ್ಯಕ್ಷೆ ನಳಿನಿ ಗಣೇಶ್ ಅವರ ನಿಧನದಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣಾ ಪ್ರಕ್ರಿಯೆ ನಡೆಯಿತು. ಚುನಾವಣಾಧಿಕಾರಿಯಾಗಿ ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜು ಕಾರ್ಯನಿರ್ವಹಿಸಿದರು.
ಪರಿಶಿಷ್ಟ ಜಾತಿ ಮೀಸಲಾತಿಯನ್ವಯ ಬಿಜೆಪಿಯ ಪಿ.ಕೆ. ಚಂದ್ರು ನಾಮಪತ್ರ ಸಲ್ಲಿಸಿದರು. ಮಧ್ಯಾಹ್ನ ೨ ಗಂಟೆಗೆ ಚುನಾವಣಾ ಸಭೆ ನಡೆದು, ಸದಸ್ಯೆ ಮೋಹಿನಿ ಅವರು ಚಂದ್ರು ಅವರ ಹೆಸರನ್ನು ಸೂಚಿಸಿದರೆ, ಮೃತ್ಯುಂಜಯ ಅವರು ಅನುಮೋದಿಸಿದರು.
(ಮೊದಲ ಪುಟದಿಂದ) ನಂತರ ಚಂದ್ರು ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿಗಳು ಘೋಷಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ಚುನಾವಣೆ ಸಂದರ್ಭ ಮಾತ್ರ ಪಕ್ಷ ರಾಜಕೀಯ; ನಂತರದ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕು. ಜಿಲ್ಲೆಯಲ್ಲಿಯೇ ಅತೀ ಹೆಚ್ಚು ವಾಣಿಜ್ಯ ಸಂಕೀರ್ಣಗಳನ್ನು ಹೊಂದಿರುವ ಪಟ್ಟಣ ಪಂಚಾಯಿತಿ ಎಂಬ ಹೆಗ್ಗಳಿಕೆ ಸೋಮವಾರಪೇಟೆಗಿದ್ದು, ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಬೇಕು ಎಂದರು.
ಮುAದಿನ ದಿನಗಳಲ್ಲಿ ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ ಒತ್ತಿಕೊಂಡಿರುವ ಗ್ರಾ.ಪಂ.ಗಳನ್ನು ಸೇರಿಸಿಕೊಂಡು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮ ವಹಿಸಲಾಗುವುದು. ಪಟ್ಟಣದ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ನೂತನ ಅಧ್ಯಕ್ಷ ಪಿ.ಕೆ. ಚಂದ್ರು ಮಾತನಾಡಿ, ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸಲಾಗುವುದು. ಮೂಲಭೂತ ಸೌಕರ್ಯಗಳೊಂದಿಗೆ ಕುಡಿಯುವ ನೀರು ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಅಭಿವೃದ್ಧಿಗೆ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಶಾಸಕರು ಹಾಗೂ ಸಹ ಸದಸ್ಯರ ಮಾರ್ಗದರ್ಶನ ಹಾಗೂ ಸಹಕಾರ ಪಡೆದು ಕಾರ್ಯನಿರ್ವಹಿಸಲಾಗುವುದು ಎಂದರು.
ಪ್ರಭಾರ ಅಧ್ಯಕ್ಷರಾಗಿದ್ದ ಪ.ಪಂ. ಉಪಾಧ್ಯಕ್ಷ ಬಿ. ಸಂಜೀವ ಮಾತನಾಡಿ, ಕಳೆದ ೨೦ ವರ್ಷಗಳಿಂದಲೂ ಶಾಸಕರು ಪಟ್ಟಣದ ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದಾರೆ. ವಾಣಿಜ್ಯ ಮಳಿಗೆ, ರಸ್ತೆಗಳು, ಕುಡಿಯುವ ನೀರು, ಸಿದ್ಧಲಿಂಗಪುರದಲ್ಲಿ ನಿರ್ಮಾಣ ವಾಗುತ್ತಿರುವ ತ್ಯಾಜ್ಯವಿಲೇವಾರಿ ಘಟಕ ಸೇರಿದಂತೆ ಎಲ್ಲಾ ಕಾಮಗಾರಿಗಳಿಗೂ ಶಾಸಕರು ಸಹಕಾರ ನೀಡಿದ್ದಾರೆ. ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳಿಗೆ ನಾವುಗಳೂ ಸಹ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ ಎಂದರು.
ಚುನಾವಣೆ ಪ್ರಕ್ರಿಯೆ ಸಂದರ್ಭ ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಸದಸ್ಯರುಗಳಾದ ಶೀಲಾ ಡಿಸೋಜ, ಮೋಹಿನಿ, ನಾಗರತ್ನ, ಮೃತ್ಯುಂಜಯ, ಬಿ.ಆರ್. ಮಹೇಶ್, ಶುಭಕರ್, ವೆಂಕಟೇಶ್, ಜೀವನ್, ನಾಮನಿರ್ದೇಶಿತ ಸದಸ್ಯರುಗಳಾದ ಎಸ್.ಮಹೇಶ್, ಶರತ್‌ಚಂದ್ರ, ಎಸ್.ಆರ್. ಸೋಮೇಶ್, ಮುಖ್ಯಾಧಿಕಾರಿ ನಾಚಪ್ಪ ಸೇರಿದಂತೆ ತಾಲೂಕು ಕಚೇರಿಯ ಚುನಾವಣಾ ಶಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವಿಜಯೋತ್ಸವ: ಅಧ್ಯಕ್ಷರಾಗಿ ಪಿ.ಕೆ. ಚಂದ್ರು ಅವರು ಆಯ್ಕೆಯಾದ ಹಿನ್ನೆಲೆ ಬಿಜೆಪಿ ವತಿಯಿಂದ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ವಿಜಯೋತ್ಸವ ಆಚರಿಸಲಾಯಿತು. ಪಟ್ಟಣ ಪಂಚಾಯಿತಿಯಿAದ ಖಾಸಗಿ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಪುಟ್ಟಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭ ಬಿಜೆಪಿ ಮಂಡಲ ಅಧ್ಯಕ್ಷ ಮನುಕುಮಾರ್ ರೈ, ಯುವ ಮೋರ್ಚಾ ಅಧ್ಯಕ್ಷ ಚಂದ್ರಶೇಖರ್ ಹೇರೂರು, ಪಕ್ಷದ ಮುಖಂಡರಾದ ಲೋಕೇಶ್ವರಿ ಗೋಪಾಲ್, ಅಭಿಮನ್ಯುಕುಮಾರ್, ಕಿಬ್ಬೆಟ್ಟ ಮಧು, ಗೌತಮ್, ಜಗನ್ನಾಥ್, ನೇಗಳ್ಳೆ ಜೀವನ್, ಟಿ.ಕೆ. ರಮೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.
ನೂತನ ಅಧ್ಯಕ್ಷರನ್ನು ಪಕ್ಷದ ಮುಖಂಡರು, ಕಾರ್ಯಕರ್ತರು ಹೂ ಹಾರ ಹಾಕಿ ಅಭಿನಂದಿಸಿದರು. ಜಿಲ್ಲಾ ಮೊಗೇರ ಸಮಾಜದ ಅಧ್ಯಕ್ಷ ಗೌತಮ್ ಶಿವಪ್ಪ, ಗೌರವಾಧ್ಯಕ್ಷ ರವಿ, ತಾಲೂಕು ಅಧ್ಯಕ್ಷ ದಾಮೋಧರ್ ಅವರುಗಳು ಸಮಾಜದ ವತಿಯಿಂದ ಪಿ.ಕೆ. ಚಂದ್ರು ಅವರನ್ನು ಅಭಿನಂದಿಸಿದರು.
ದೇವಾಲಯದಲ್ಲಿ ಪೂಜೆ
ಇದಕ್ಕೂ ಮುನ್ನ ಪಟ್ಟಣದ ವಿದ್ಯಾಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸಂಸದ ಪ್ರತಾಪ್ ಸಿಂಹ ಅವರು ಭಾಗಿಯಾಗಿದ್ದರು. ನಾಮಪತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಪಟ್ಟಣ ಪಂಚಾಯಿತಿಗೆ ತೆರಳಿ ನಾಮಪತ್ರ ಸಲ್ಲಿಸಲಾಯಿತು.