ಮಡಿಕೇರಿ, ಅ. ೧೧: ಇತ್ತೀಚೆಗೆ ಜರುಗಿದ ಟೋಕಿಯೋ ಒಲಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳನ್ನು ಕರ್ನಾಟಕದ ರಾಜ್ಯಪಾಲರಾದ ತಾವರ್‌ಚಂದ್ ಗೆಹ್ಲೋಟ್ ಅವರು ಇಂದು ರಾಜಭವನದಲ್ಲಿ ಸನ್ಮಾನಿಸಿ ಗೌರವಿಸಿದರು.

ಪ್ಯಾರಾಲಿಂಪಿಕ್ಸ್ನಲ್ಲಿ ಪಾಲ್ಗೊಂಡಿದ್ದ ಕ್ರೀಡಾಪಟುಗಳೊಂದಿಗೆ ರಾಜ್ಯಪಾಲರು ನೀಡಿದ ಸನ್ಮಾನದಲ್ಲಿ ಈ ಹಿಂದೆ ರಾಜ್ಯ ಸರಕಾರದಿಂದ ನೀಡಿದ್ದ ಸನ್ಮಾನದಲ್ಲಿ ಒಳಪಡದಿದ್ದ ಒಲಂಪಿಕ್ಸ್ ಪಟುಗಳಾದ ಕೊಡಗು ಜಿಲ್ಲೆಯವರಾದ ಭಾರತ ಬಾಕ್ಸಿಂಗ್ ತಂಡದ ಕೋಚ್ ಚೇನಂಡ ಎ. ಕುಟ್ಟಪ್ಪ ಹಾಗೂ ಸೇಯ್ಲಿಂಗ್ ಪಟು ಕೇಳಪಂಡ ಸಿ. ಗಣಪತಿ ಅವರುಗಳನ್ನು ಪರಿಗಣಿಸಲಾಗಿತ್ತು.

(ಮೊದಲ ಪುಟದಿಂದ) ಈ ಎಲ್ಲಾ ಕ್ರೀಡಾಪಟುಗಳಿಗೆ ರಾಜ್ಯಪಾಲರು ತಮ್ಮ ವಿವೇಚನಾ ನಿಧಿಯಿಂದ ತಲಾ ರೂ. ಒಂದು ಲಕ್ಷ ಹಣವನ್ನು ನೀಡಿ ಗೌರವಿಸಿದರು.

ಈ ಹಿಂದೆ ಸೆ. ೩ ರಂದು ರಾಜಭವನದಲ್ಲಿ ನಡೆದಿದ್ದ ಸಮಾರಂಭದಲ್ಲಿ ಟೋಕಿಯೋ ಒಲಂಪಿಕ್ಸ್ನಲ್ಲಿ ಪಾಲ್ಗೊಂಡಿದ್ದ ರಾಜ್ಯದ ಕ್ರೀಡಾಪಟುಗಳನ್ನು ರಾಜ್ಯಪಾಲರು ಸನ್ಮಾನಿಸಿದ್ದು, ಇವರಲ್ಲಿ ಕೊಡಗಿನವರಾದ ಭಾರತ ಮಹಿಳಾ ಹಾಕಿ ತಂಡದ ಸಹಾಯಕ ಕೋಚ್ ಬಿ.ಎಸ್. ಅಂಕಿತಾ ಅವರು ಪುರಸ್ಕಾರ ಪಡೆದಿದ್ದರು.

ಟೋಕಿಯೋ ಒಲಂಪಿಕ್ಸ್ನಲ್ಲಿ ಪಾಲ್ಗೊಂಡಿದ್ದ ರಾಜ್ಯದ ಕ್ರೀಡಾಪಟುಗಳಿಗೆ ಈ ಹಿಂದೆ ಕರ್ನಾಟಕ ರಾಜ್ಯ ಸರಕಾರದಿಂದಲೂ ೧೦ ಲಕ್ಷ ನೀಡಲಾಗಿದೆ. ಇದರಲ್ಲಿ ಕೊಡಗಿನವರಾದ ಕುಟ್ಟಪ್ಪ ಹಾಗೂ ಗಣಪತಿ ಸೇರ್ಪಡೆಯಾಗಿರಲಿಲ್ಲ. ಇದೀಗ ರಾಜ್ಯಪಾಲರು ನೀಡಿದ ಗೌರವದಲ್ಲಿ ಇವರಿಬ್ಬರನ್ನು ಪರಿಗಣಿಸಿ ಗೌರವಿಸಿರುವುದು ವಿಶೇಷವಾಗಿದೆ. ಆದರೆ ಸರಕಾರದ ಗೌರವದಿಂದ ಇವರು ಇನ್ನೂ ಹೊರತಾಗಿದ್ದಾರೆ.

ಇಂದು ನಡೆದ ಸಮಾರಂಭದಲ್ಲಿ ಕುಟ್ಟಪ್ಪ ಅವರು ಭಾಗವಹಿಸಿದ್ದರೆ ಗಣಪತಿ ಅವರ ಪರವಾಗಿ ತಾಯಿ ರೇಷ್ಮಾ ಗೌರವ ಸ್ವೀಕರಿಸಿದರು.