ಕಣಿವೆ, ಅ. ೧೧: ಬಾಣಾವರ ವ್ಯಾಪ್ತಿಯಲ್ಲಿ ಹಗಲು ವೇಳೆಯಲ್ಲೇ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಮಿತಿಮೀರಿರುವ ಕಾಡಾನೆಗಳ ಹಾವಳಿಯಿಂದಾಗಿ ಈ ಭಾಗದ ಗ್ರಾಮೀಣ ಪ್ರದೇಶಗಳ ಜನರು ಹೈರಾಣಾಗಿ ಹೋಗಿದ್ದಾರೆ.
ಎರಡು ದಿನದ ಹಿಂದಷ್ಟೇ ಹಾಡ ಹಗಲು - ಸೂರ್ಯಾಸ್ತದ ಮುನ್ನವೇ ಅಂದರೆ ಸಂಜೆ ೬-೩೦ ರ ಸಮಯದಲ್ಲಿ ಶನಿವಾರಸಂತೆ - ಕುಶಾಲನಗರ ಹೆದ್ದಾರಿಯ ಆಲದ ಮರದ ಬಳಿ ಕಾಡಾನೆ ಪ್ರತ್ಯಕ್ಷವಾಗಿದೆ. ಇದೇ ವೇಳೆ ಬೈಕ್ ಸವಾರನೊಬ್ಬ ಎದುರುಗೊಂಡಾಗ ಕಾಡಾನೆ ಬೈಕ್ ಕಂಡು ಸಿಡಿಮಿಡಿಗೊಂಡಿದೆ. ಇತ್ತ ಸವಾರನೂ ಕೂಡ ಗಡಿಬಿಡಿಯಾಗಿದ್ದಾನೆ. ನಂತರ ಬೇಲಿಯಿಂದ ಸೀದಾ ರಸ್ತೆಗೆ ಬಂದ ಕಾಡಾನೆ ಬೈಕ್‌ನಲ್ಲಿದ್ದ ಕಣಗಾಲು ಗ್ರಾಮದ ಬಿಪಿನ್ ಎಂಬಾತನಿಗೆ ಒಂದು ಒದೆತ ಕೊಟ್ಟೊಡನೆ ಎದ್ದೆನೋ ಬಿದ್ದೆನೋ ಎಂದು ಸವಾರ ರಸ್ತೆ ಬದಿ ಬಿದ್ದು ಒದ್ದಾಡಿದ್ದಾನೆ.
ಅಷ್ಟರಲ್ಲಿ ಈತನ ಅದೃಷ್ಟವೋ ಏನೋ ಹಿಂಬದಿಯಲ್ಲಿ ತಕ್ಷಣವೇ ಜನರನ್ನು ಹೊತ್ತ ವಾಹನವೊಂದು ಬಂದಿದ್ದು ಕಣ್ಣೆದುರು ಬೈಕ್ ಹಾಗೂ ಸವಾರ ಬಿಪಿನ್ ಎಂಬಾತ ಬಿದ್ದುದನ್ನು ಕಂಡ ಜನರು ಜೋರಾಗಿ ಒಂದೇ ಸಮನೆ ಬೊಬ್ಬೆ ಹೊಡೆದೊಡನೆ ಕಾಡಾನೆ ಕಾಲ್ಕಿತ್ತಿದೆ. ಇತ್ತ ಗಾಬರಿಗೊಂಡು ಒದ್ದಾಡುತ್ತಿದ್ದ ಸವಾರ ಬಿಪಿನ್, ಬದಿಕೊಂಡೆ ಬಡಜೀವ ಎಂದು ದೇವರ ರೂಪದಲ್ಲಿ ಬಂದ ಹಿಂಬದಿಯ ವಾಹನದ ಸವಾರರಿಗೆ ಕೈ ಮುಗಿದು ಮನೆ ಸೇರಿಕೊಂಡಿದ್ದಾನೆ. ಸಣ್ಣ ಪುಟ್ಟ ಗಾಯಗಳೊಂದಿಗೆ ಆತಂಕಕ್ಕೊಳಗಾದ ಈತ ಮರುದಿನ ಸೋಮವಾರಪೇಟೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾನೆ.
ಬಳಿಕ ಗ್ರಾಮಸ್ಥರೆಲ್ಲಾ ಸೇರಿಕೊಂಡು ಅರಣ್ಯ ಇಲಾಖೆಗೆ ಒಂದಷ್ಟು ಹಿಡಿ ಶಾಪ ಹಾಕುತ್ತಾ ಭಾನುವಾರ ಹಾಗೂ ಸೋಮವಾರ ಎರಡು ದಿನಗಳ ಕಾಲ ಆಲದ ಮರದ ಬಳಿಯ ಹೆದ್ದಾರಿಯ ಬದಿಯಲ್ಲಿ ಬೆಳೆದು ನಿಂತಿದ್ದ ಕಾಡುಗಿಡಗಳನ್ನು ಕಡಿದು ಶ್ರಮದಾನ ಮಾಡಿದ್ದಾರೆ.
ಒಟ್ಟಾರೆ ಇಲ್ಲಿನ ಸುತ್ತಲ ಗ್ರಾಮಗಳಾದ ದೊಡ್ಡಳ್ಳಿ, ಭುವಂಗಾಲ, ಕಣಗಾಲು, ಆಲೂರು ಸಿದ್ದಾಪುರ, ಬಾಣಾವರ, ಸಿದ್ದಲಿಂಗಪುರ, ಎರೆಪಾರೆ ಮೊದಲಾದ ಗ್ರಾಮಗಳ ಜನರು ಕಾಡಾನೆಗಳ ಕಾಟದಿಂದ ಬೇಸತ್ತಿದ್ದಾರೆ. ಒಂದೋ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಇಲ್ಲಿಗೆ ಆಗಮಿಸಿ ನಿತ್ಯವೂ ಗ್ರಾಮಸ್ಥರಾದ ನಾವುಗಳು ನಿತ್ಯವೂ ಅನುಭವಿಸುತ್ತಿರುವ ಕಾಡಾನೆಗಳ ಕೃಪಾಪೋಷಿತ ನರಕಯಾತನೆಯಿಂದ ನಮ್ಮನ್ನು ಮುಕ್ತಗೊಳಿಸಬೇಕು.
ಈಗಾಗಲೇ ಶಾಲಾ ಕಾಲೇಜು ತರಗತಿಗಳು ಆರಂಭಗೊAಡಿರುವುದರಿAದ ಮಕ್ಕಳು ನಿಶ್ಚಿಂತೆಯಿAದ ಓಡಾಡಲು ಆಗುತ್ತಿಲ್ಲ. ಅತ್ತ ಬೇರೆ ಬೇರೆ ಗ್ರಾಮಗಳಿಂದ ಬರುವ ಕೃಷಿ ಕೂಲಿ ಕಾರ್ಮಿಕ ಮಹಿಳೆಯರು ಕೂಡ ಕಾಡಾನೆಗಳ ಆರ್ಭಟಕ್ಕೆ ಹೆದರಿ ಕೂಲಿಗೆ ಬರುತ್ತಿಲ್ಲ.
ಮನೆಯ ಸದಸ್ಯರು ಕೆಲಸ ಕಾರ್ಯ ನಿಮಿತ್ತ ಮನೆಯಿಂದ ಹೊರಗೆ ತೆರಳಿದರೆ ಮನೆಗೆ ಬಂದು ಸೇರುವ ತನಕವೂ ಮನೆಯವರಿಗೆ ನೆಮ್ಮದಿ ಇಲ್ಲ. ಕೂಡಲೇ ಉಪಟಳ ಕೊಡುತ್ತಿರುವ ಕಾಡಾನೆಗಳನ್ನು ಹಿಡಿದು ದೂರ ಓಡಿಸಬೇಕು ಎಂದು ಸ್ಥಳೀಯ ಕೃಷಿಕರಾದ ರವೀಂದ್ರನಾಥ, ಮಣಿ, ರಾಜ, ದೊರೆ, ಮಂಜುಳ, ನಾಗರತ್ನ, ಗೌರಮ್ಮ ಮೊದಲಾದವರು ‘ಶಕ್ತಿ’ ಯೊಂದಿಗೆ ದೂರಿಕೊಂಡಿದ್ದಾರೆ.
- ಮೂರ್ತಿ