ಮಡಿಕೇರಿ, ಅ. ೧೦: ಮುದ್ರಿತ ಪತ್ರಿಕೆಗಳ ಓದುವಿಕೆಯಿಂದ ದೊರಕುವ ಜ್ಞಾನ ಆಧುನಿಕ ಡಿಜಿಟಲ್ ತಂತ್ರಜ್ಞಾನದ ಮಾಹಿತಿಗಳಿಂದ ದೊರಕದು. ಹೀಗಾಗಿ ವಿದ್ಯಾರ್ಥಿಗಳು ಮುದ್ರಿತ ಪತ್ರಿಕೆಗಳನ್ನು ಓದುವ ಅಭ್ಯಾಸವನ್ನು ಬಿಡಬಾರದು ಎಂದು ಖ್ಯಾತ ಇತಿಹಾಸಕಾರರಾಗಿದ್ದ ದಿ.ಡಿ.ಎನ್. ಕೃಷ್ಣಯ್ಯ ಅವರ ಪುತ್ರಿ ಇಂದಿರಾ ಸತ್ಯನಾರಾಯಣ ಕರೆ ನೀಡಿದ್ದಾರೆ.

ಮಾದಾಪುರದ ಶ್ರೀಮತಿ ಡಿ. ಚೆನ್ನಮ್ಮ ಶಾಲೆಯ ಎಸ್.ಎಸ್.ಎಲ್. ಸಿ. ವಿದ್ಯಾರ್ಥಿಗಳಿಗೆ ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ವಿದ್ಯಾಸೇತು ಮಾರ್ಗದರ್ಶಿ ಪುಸ್ತಕಗಳನ್ನು ನೀಡಿ ಮಾತನಾಡಿದ ಅವರು ಮುದ್ರಿತ ಪತ್ರಿಕೆಗಳ ಓದುವಿಕೆಯಿಂದಲೇ ನಾಡಿನ ಸಾಹಿತಿಗಳು, ಮೇಧಾವಿಗಳು ಅತ್ಯಂತ ಹೆಚ್ಚಿನ ಜ್ಞಾನವನ್ನು ತಮ್ಮದಾಗಿಸಿಕೊಂಡರು. ಪತ್ರಿಕೆಗಳ ಸುದ್ದಿಗಳು, ಲೇಖನಗಳು, ಸಾಹಿತ್ಯಗಳು ಒದಗಿಸುವ ಜ್ಞಾನವನ್ನು ಆಧುನಿಕ ತಂತ್ರಜ್ಞಾನದ ಮಾಧ್ಯಮಗಳಿಂದ ನೀಡುವುದು ಕಷ್ಟ ಸಾಧ್ಯ ಎಂದರು

ಶಾಲಾ ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ವಿದ್ಯಾಸೇತು ಮಾರ್ಗದರ್ಶಿ ಪುಸ್ತಕಗಳನ್ನು ವಿತರಿಸಿ ಮಾತನಾಡಿದ ರೋಟರಿ ಉಪರಾಜ್ಯಪಾಲ ಅನಿಲ್ ಎಚ್.ಟಿ., ಕೋವಿಡ್ ಸಂಕಷ್ಟದಿAದಾಗಿ ಶಿಕ್ಷಣ ಕ್ಷೇತ್ರವೂ ಸಾಕಷ್ಟು ಸಮಸ್ಯೆ ಎದುರಿಸಿದ್ದು, ಈ ಹಿನ್ನೆಲೆಯಲ್ಲಿ ರೋಟರಿ ಸಂಸ್ಥೆಗಳು ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ವಿದ್ಯಾಸೇತು ಹೆಸರಿನ ಮಾರ್ಗದರ್ಶಿ ಪುಸ್ತಕಗಳನ್ನು ಅನೇಕ ಶಾಲೆಗಳಿಗೆ ನೀಡುತ್ತಿದೆ ಎಂದರು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷೆ ಅನಿತಾಪೂವಯ್ಯ ಮಾತನಾಡಿ, ಮಿಸ್ಟಿ ಹಿಲ್ಸ್ ಹಲವಾರು ವರ್ಷಗಳಿಂದ ಶಿಕ್ಷಣ ಸಂಸ್ಥೆಗಳಿಗೆ ಕಂಪ್ಯೂಟರ್, ಶಾಲಾ ಕೊಠಡಿ, ಶೌಚಾಲಯ, ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಯಂತಹ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಈ ವರ್ಷವೂ ೧೦ ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಸೇತು ಮಾರ್ಗದರ್ಶಿ ಪುಸ್ತಕಗಳನ್ನು ನೀಡುತ್ತಿದೆ. ಶಿಕ್ಷಣ ತಜ್ಞರು ರೂಪಿಸಿದ ವಿದ್ಯಾಸೇತು ೧೦ ನೇ ತರಗತಿ ವಿದ್ಯಾರ್ಥಿಗಳಿಗೆ ನೆರವಾಗಬಲ್ಲದು ಎಂದು ಹೇಳಿದರು.

ಶ್ರೀಮತಿ ಡಿ. ಚೆನ್ನಮ್ಮ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ನಿವೃತ್ತ ಕರ್ನಲ್ ಬಿ.ಜಿ.ವಿ. ಕುಮಾರ್ ಮಾತನಾಡಿ, ಶಾಲೆಗೆ ನೆರವು ನೀಡುತ್ತಾ ಬಂದಿರುವ ರೋಟರಿ ಸಂಸ್ಥೆಯ ಸೇವಾ ಕಾರ್ಯವನ್ನು ಪ್ರಶಂಸಿಸಿದರು.

ಶಾಲಾ ಪ್ರಾಂಶುಪಾಲ ಮಂದಪ್ಪ, ಕ್ಯಾಪ್ಟನ್ ಜಿ.ಎಸ್. ರಾಜಾರಾಮ್, ರೋಟರಿ ಮಿಸ್ಟಿಹಿಲ್ಸ್ ಕಾರ್ಯದರ್ಶಿ ಪಿ.ಆರ್. ರಾಜೇಶ್, ಮಿಸ್ಟಿಹಿಲ್ಸ್ ನಿರ್ದೇಶಕ ಕ್ಯಾರಿ ಕಾರ್ಯಪ್ಪ ಹಾಜರಿದ್ದರು.

ಇದೇ ಸಂದರ್ಭ ಮಿಸ್ಟಿಹಿಲ್ಸ್ ವತಿಯಿಂದ ದಾನಿಗಳಾದ ಇಂದಿರಾ ಸತ್ಯನಾರಾಯಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.