ಮಡಿಕೇರಿ, ಅ. ೧೧: ಬಹು ನಿರೀಕ್ಷಿತ ಮಡಿಕೇರಿ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ನಿಗದಿಯಾಗಿದ್ದ ಚುನಾವಣೆ ಕೊನೆಗಳಿಗೆಯಲ್ಲಿ ಮುಂದೂಡಲ್ಪಟ್ಟ ಘಟನೆ ನಡೆಯಿತು. ಚುನಾವಣೆಗೆ ಸಂಬAಧಿಸಿದAತೆ ಮತದಾನದ ಹಕ್ಕು ಹೊಂದಿರುವ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರಿಗೆ ನೋಟೀಸ್ ಜಾರಿಯಾಗದ ಹಿನ್ನೆಲೆಯಲ್ಲಿ ಇಂದಿನ ಚುನಾವಣಾ ಪ್ರಕ್ರಿಯೆಯನ್ನು ರದ್ದುಗೊಳಿಸಿ ಮುಂದೂಡಿರುವುದಾಗಿ ಘೋಷಿಸಿದ ಚುನಾವಣಾಧಿಕಾರಿಯಾದ ಉಪವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು ಬಿಜೆಪಿ ಸದಸ್ಯರ ವಿರೋಧದ ನಡುವೆಯೇ ಸಭೆಯಿಂದ ಹೊರ ನಡೆದರು.
ಸಲ್ಲಿಕೆಯಾಗಿದ್ದ ನಾಲ್ಕು ನಾಮಪತ್ರಗಳು
ನಗರಸಭೆ ಚುನಾವಣೆ ನಡೆದು ೬ ತಿಂಗಳ ಬಳಿಕ ಇಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಬಿಸಿಎ ಮಹಿಳೆಗೆ ಮೀಸಲಾಗಿತ್ತು. ನಗರಸಭೆಯಲ್ಲಿ ೧೬ ಸದಸ್ಯರುಗಳ ಬಹುಮತ ಸಾಧಿಸಿರುವ ಭಾರತೀಯ ಜನತಾ ಪಾರ್ಟಿಯ ಅನಿತಾ ಪೂವಯ್ಯ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಸವಿತಾ ರಾಕೇಶ್ ಉಪಾಧ್ಯಕ್ಷ ಸ್ಥಾನಕ್ಕೆ ಪಕ್ಷದ ಪ್ರಮುಖರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದರು. ಐದು ಸ್ಥಾನಗಳೊಂದಿಗೆ ನಗರಸಭೆಯಲ್ಲಿ ವಿಪಕ್ಷವಾಗಿರುವ ಸೋಷಿಯಲ್ ಡೆಮಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಮೇರಿ ವೇಗಸ್, ಉಪಾಧ್ಯಕ್ಷ ಸ್ಥಾನಕ್ಕೆ ನೀಮಾ ಅರ್ಷದ್ ಉಮೇದುವಾರಿಕೆಯನ್ನು ಇತರ ಸದಸ್ಯರುಗಳೊಂದಿಗೆ ತೆರಳಿ ಸಲ್ಲಿಸಿದ್ದರು.
ಹುಸಿಯಾದ ನಿರೀಕ್ಷೆ : ನಾಮಪತ್ರ ಸಲ್ಲಿಕೆ ಬಳಿಕ ಮಧ್ಯಾಹ್ನ ೨ ಗಂಟೆಗೆ ಚುನಾವಣಾ ಸಭೆ ನಿಗದಿಯಾಗಿತ್ತು. ನಗರಸಭೆಯಲ್ಲಿ ಬಹುಮತ ಹೊಂದಿರುವ ಬಿಜೆಪಿ ಸದಸ್ಯರು, ಎಸ್‌ಡಿಪಿಐ, ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರುಗಳೆಲ್ಲರೂ ನಗರಸಭಾ ಸಭಾಂಗಣದಲ್ಲಿ ಸೇರಿ ಚುನಾವಣೆ ನಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ, ಸಭೆಯ ಆರಂಭದಲ್ಲಿ ಮಾತನಾಡಿದ
(ಮೊದಲ ಪುಟದಿಂದ) ಚುನಾವಣಾಧಿಕಾರಿ ಈಶ್ವರ್ ಕುಮಾರ್ ಖಂಡು ಅವರು ಇಂದು ನಿಗದಿಯಾಗಿದ್ದ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣಾ ಸಂಬAಧ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರಿಗೆ ನೋಟೀಸ್ ಜಾರಿಯಾಗದೆ ಇರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಇಂದಿನ ಚುನಾವಣಾ ಪ್ರಕ್ರಿಯೆಯನ್ನು ರದ್ದುಗೊಳಿಸಿ ಮುಂದೂಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಪ್ರಕಟಿಸಿದ್ದರಿಂದ ಚುನಾವಣೆ ನಡೆಯುವ ನಿರೀಕ್ಷೆ ಹುಸಿಯಾಯಿತು.
ಬಿಜೆಪಿ ಸದಸ್ಯರ ವಿರೋಧ
ಚುನಾವಣಾಧಿಕಾರಿ ಈಶ್ವರ್ ಕುಮಾರ್ ಖಂಡು ಅವರು ಇಂದಿನ ಚುನಾವಣಾ ಪ್ರಕ್ರಿಯೆಯನ್ನು ರದ್ದುಗೊಳಿಸಿ ಮುಂದೂಡಿರುವುದಾಗಿ ಪ್ರಕಟಿಸುತ್ತಿದ್ದಂತೆ ಬಿಜೆಪಿ ಸದಸ್ಯರುಗಳಾದ ಮಹೇಶ್ ಜೈನಿ, ಉಮೇಶ್ ಸುಬ್ರಮಣಿ, ಅರುಣ್ ಶೆಟ್ಟಿ ಇವರುಗಳು ಸಭೆಗೆ ಅಗತ್ಯವಾದ ಕೋರಂ ಇದ್ದು, ವೀಣಾ ಅಚ್ಚಯ್ಯ ಅವರಿಗೆ ನೋಟೀಸ್ ಜಾರಿಯಾಗದಿರುವುದಕ್ಕೆ ನಿಮ್ಮ ಪ್ರಮಾದವೇ ಕಾರಣ; ಯಾವ ಆಧಾರದಲ್ಲಿ ಇಂದಿನ ಚುನಾವಣೆಯನ್ನು ರದ್ದು ಮಾಡುತ್ತೀರಿ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.
ವೀಣಾ ಅಚ್ಚಯ್ಯ ಅವರಿಗೆ ನೋಟೀಸ್ ಜಾರಿಯಾಗಿದೆಯೋ ಇಲ್ಲವೋ ಎಂಬ ಬಗ್ಗೆ ನಿನ್ನೆ ದಿನ ಮಾಹಿತಿ ಪಡೆದುಕೊಂಡು ರದ್ದು ಮಾಡಬೇಕಿತ್ತು. ಅದನ್ನು ಬಿಟ್ಟು ಇಂದು ನಾಮಪತ್ರ ಸಲ್ಲಿಕೆಯಾದ ಬಳಿಕ ಏಕೆ ರದ್ದು ಮಾಡುತ್ತಿದ್ದೀರ ಎಂದು ಬಿಜೆಪಿಯ ಕೆಲ ಸದಸ್ಯರುಗಳು ಪ್ರಶ್ನಿಸಿದರು. ಚುನಾವಣಾಧಿಕಾರಿಗಳ ತೀರ್ಮಾನ ಸರಿಯಾಗಿದೆ ಎಂದು ಎಸ್‌ಡಿಪಿಐ ಸದಸ್ಯರುಗಳು ಹೇಳಿದರು.
ನಾನು ಚುನಾವಣಾಧಿಕಾರಿಯಾಗಿದ್ದು, ಚುನಾವಣೆಯನ್ನು ಸರಿಯಾಗಿ ನಡೆಸಬೇಕಾದದ್ದು ನನ್ನ ಜವಾಬ್ದಾರಿ. ಚುನಾವಣೆ ಎಂದ ಮೇಲೆ ಅದರ ಪ್ರಕ್ರಿಯೆಗಳನ್ನು ಸಮರ್ಪಕವಾಗಿ ಪಾಲಿಸಬೇಕಾಗುತ್ತದೆ ಎಂದು ಈಶ್ವರ್ ಕುಮಾರ್ ಖಂಡು ಹೇಳಿದರೂ, ಸಮಾಧಾನಗೊಳ್ಳದ ಬಿಜೆಪಿ ಸದಸ್ಯರು ಚುನಾವಣೆ ನಡೆಸಲೇಬೇಕೆಂದು ಪಟ್ಟು ಹಿಡಿದರು. ಅಲ್ಲದೆ, ಸಭಾಂಗಣದ ಒಳಗೆ ಪೊಲೀಸ್ ಸಿಬ್ಬಂದಿ ನಿಯೋಜನೆಗೊಂಡಿದ್ದ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದರು.
ಸಂಸದ-ಎAಎಲ್‌ಸಿ ಒತ್ತಾಯ
ಸಂಸದ ಪ್ರತಾಪ್ ಸಿಂಹ ಮಾತನಾಡಿ, ನೋಟೀಸ್ ಜಾರಿ ಮಾಡುವುದು, ಅದು ತಲುಪಿದೆಯೋ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಬೇಕಾದದ್ದು ನಿಮ್ಮ ಜವಾಬ್ದಾರಿ. ಅದನ್ನು ನಿಭಾಯಿಸದೆ ಚುನಾವಣೆ ಮುಂದೂಡುವ ಅಧಿಕಾರವನ್ನು ನಿಮಗೆ ಯಾರು ಕೊಟ್ಟಿದ್ದಾರೆ ಎಂಬದನ್ನು ತೋರಿಸಿ. ನಿಮ್ಮ ತಪ್ಪಿಗೆ ಚುನಾವಣೆಯನ್ನು ರದ್ದು ಮಾಡುವುದು ಸರಿಯಲ್ಲ. ಚುನಾವಣೆ ನಡೆಯಲೇಬೇಕೆಂದು ಆಗ್ರಹಿಸಿದರಲ್ಲದೆ, ಸಭಾಂಗಣದೊಳಕ್ಕೆ ಪೊಲೀಸರು ಬರುವಂತಿಲ್ಲ ಎಂದು ಹೇಳಿದ್ದರಿಂದ ಪೊಲೀಸರು ಅಲ್ಲಿಂದ ಹೊರ ನಡೆದರು.
ಎಸ್‌ಡಿಪಿಐನ ಅಮೀನ್ ಮೊಹ್ಸಿನ್ ಮಾತನಾಡಿ, ಚುನಾವಣಾಧಿಕಾರಿಗಳು ತಮ್ಮ ತೀರ್ಮಾನವನ್ನು ಪ್ರಕಟಿಸಿದ್ದು, ಅದಕ್ಕೆ ನಾವು ಬದ್ಧವಾಗಿರಬೇಕು ಎಂದರು. ಇದಕ್ಕೆ ಮನ್ಸೂರ್, ಬಷಿರ್ ಅಹ್ಮದ್ ಧನಿಗೂಡಿಸಿದರು. ಬಿಜೆಪಿ ಸದಸ್ಯ ಕೆ.ಎಸ್. ರಮೇಶ್, ಚುನಾವಣೆ ನಡೆಸದಿದ್ದರೆ ನಮ್ಮ ಶಾಸಕರು, ಸಂಸದರು ನಿಮ್ಮ ಮೇಲೆ ಹಕ್ಕು ಚ್ಯುತಿ ಮಂಡನೆ ಮಾಡುತ್ತಾರೆ ಎಂದು ಚುನಾವಣಾಧಿಕಾರಿಗೆ ಹೇಳಿದರು. ನಿಮ್ಮ ಶಾಸಕರು, ಸಂಸದರು ಹಕ್ಕು ಚ್ಯುತಿ ಮಂಡನೆ ಮಾಡಿದರೆ ವೀಣಾ ಅಚ್ಚಯ್ಯ ಅವರು ಕೂಡ ಹಕ್ಕು ಚ್ಯುತಿ ಮಂಡಿಸುತ್ತಾರೆ. ಕಾನೂನು ಅವರಿಗೂ ಇದೆ ಎಂದು ಅಮೀನ್ ಮೊಯ್ಸಿನ್ ನುಡಿದರು.
ಈ ವಿಚಾರದಲ್ಲಿ ಬಿಜೆಪಿ ಹಾಗೂ ಎಸ್‌ಡಿಪಿಐ ಸದಸ್ಯರುಗಳ ನಡುವೆ ಚುನಾವಣಾಧಿಕಾರಿ ಮೇಜಿನ ಎದುರು ವಾಗ್ಯುದ್ಧ ನಡೆಯಿತು. ಕಾಂಗ್ರೆಸ್ ಸದಸ್ಯ ರಾಜೇಶ್ ಯಲ್ಲಪ್ಪ ಮಾತನಾಡಿ, ವಿಧಾನ ಪರಿಷತ್ ಸದಸ್ಯರಿಗೆ ಅವರದ್ದೇ ಆದ ಗೌರವವಿದೆ. ಅವರನ್ನು ಹೊರಗಿಟ್ಟು ಚುನಾವಣೆ ನಡೆಸುವುದು ಕಾನೂನು ಬಾಹಿರವಾಗುತ್ತದೆ ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಚುನಾವಣೆಯನ್ನು ಮುಂದೂಡಬೇಡಿ; ಅವರು ಹಕ್ಕು ಚ್ಯುತಿ ಮಂಡನೆ ಮಾಡಿದರೆ ನಾವೂ ಅದನ್ನೇ ಮಾಡುತ್ತೇವೆ. ಈಗಾಗಲೇ ಪ್ರಕ್ರಿಯೆ ಆರಂಭಿಸಿದ್ದೀರಿ, ನೀವು ಅಡಕತ್ತರಿಯಲ್ಲಿ ಸಿಲುಕಿದ ಅಡಿಕೆಯಂತಾಗಬೇಡಿ, ಮುಂದುವರಿಸಿ ಎಂದು ಚುನಾವಣಾಧಿಕಾರಿ ಬಳಿ ಮನವಿ ಮಾಡಿದರು. ಶಾಸಕ ಅಪ್ಪಚ್ಚು ರಂಜನ್ ಗೈರಾಗಿದ್ದರು.
ನಿರ್ಧಾರ ಬದಲಿಸದ ಅಧಿಕಾರಿ
ಬಿಜೆಪಿ ಸದಸ್ಯರು, ಶಾಸಕರು, ಸಂಸದರು, ಕಾಂಗ್ರೆಸ್, ಎಸ್‌ಡಿಪಿಐ ಸದಸ್ಯರೆಲ್ಲರ ಮಾತನ್ನೂ ಆಲಿಸಿದ ಚುನಾವಣಾಧಿಕಾರಿ ಈಶ್ವರ್ ಕುಮಾರ್ ಖಂಡು, ತಮ್ಮ ನಿರ್ಧಾರವನ್ನು ಬದಲಿಸದೆ ಚುನಾವಣಾ ಸಂಬAಧ ನಮ್ಮಿಂದ ಪ್ರಮಾದವಾಗಿದೆ. ಇವೆಲ್ಲದರ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರಲ್ಲದೆ, ಇಂದಿನ ಚುನಾವಣಾ ಪ್ರಕ್ರಿಯೆಯನ್ನು ರದ್ದು ಗೊಳಿಸಿದ್ದೇನೆ ಎಂದು ಮತ್ತೊಮ್ಮೆ ತೀರ್ಮಾನವನ್ನು ಪ್ರಕಟಿಸಿ ಸಭೆಯಿಂದ ಹೊರ ನಡೆದರು.
ಈ ಸಂದರ್ಭ ಬಿಜೆಪಿ ಸದಸ್ಯರುಗಳು ಚುನಾವಣಾಧಿಕಾರಿ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರೆ; ಎಸ್‌ಡಿಪಿಐ ಸದಸ್ಯರು ಜೈಕಾರದ ಘೋಷಣೆಗಳನ್ನು ಕೂಗಿದರು.
ಕಾನೂನು ಹೋರಾಟ: ಪ್ರತಾಪ್ ಸಿಂಹ
ಇAದಿನ ಬೆಳವಣಿಗೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಕಾಂಗ್ರೆಸ್ ಎಂಎಲ್‌ಸಿಯವರಿಗೆ ನೋಟೀಸ್ ಜಾರಿಯಾಗಿಲ್ಲವೆಂದು ಚುನಾವಣೆಯನ್ನು ಮುಂದೂಡಿರುವುದು ದುರಾದೃಷ್ಟಕರ. ಇದು ಚುನಾವಣಾಧಿಕಾರಿಗಳ ಏಕಪಕ್ಷೀಯ ತೀರ್ಮಾನವಾಗಿದ್ದು, ಕಾಂಗ್ರೆಸ್ ಇದನ್ನು ಮಾಡಿಸಿದೆ. ಚುನಾವಣಾಧಿಕಾರಿಯ ಈ ನಿರ್ಧಾರದ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದರು.
ಧೋರಣೆ ಖಂಡನೀಯ: ಸುನಿಲ್
ಅಧಿಕಾರಿಗಳ ಲೋಪಕ್ಕೆ ಚುನಾವಣೆಯನ್ನು ಮುಂದೂಡಿದ್ದು ಸರಿಯಲ್ಲ. ಇದರ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು. ಅಧಿಕಾರಿಗಳ ಈ ಧೋರಣೆ ಖಂಡನೀಯ ಎಂದು ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಹೇಳಿದರು.