ಮಡಿಕೇರಿ, ಅ. ೧೧: ಐತಿಹಾಸಿಕ ನಾಡ ಹಬ್ಬ ಮಡಿಕೇರಿ ದಸರಾ ಹಾಗೂ ಗೋಣಿಕೊಪ್ಪ ದಸರಾ ಉತ್ಸವಕ್ಕೆ ಸರಕಾರದಿಂದ ಅನುದಾನ ಮಂಜೂರಾಗಿದೆ. ಮಡಿಕೇರಿ ದಸರಾಗೆ ರೂ. ೧ ಕೋಟಿ ಹಾಗೂ ಗೋಣಿಕೊಪ್ಪ ದಸರಾಗೆ ರೂ. ೧೫ ಲಕ್ಷ ಅನುದಾನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಮಂಜೂರಾಗಿದೆ.

ಮಡಿಕೇರಿ ದಸರಾಗೆ ರೂ. ೧ ಕೋಟಿ ಅನುದಾನ ಒದಗಿಸುವಂತೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು. ಪೂರಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು ಅನುದಾನ ಒದಗಿಸುವ ಭರವಸೆ ನೀಡಿದ್ದರು. ಅದರಂತೆ ಇದೀಗ ರೂ. ೧ ಕೋಟಿ ಅನುದಾನವನ್ನು ಷರತ್ತಿಗೆ ಒಳಪಟ್ಟು ಜಿಲ್ಲಾಧಿಕಾರಿಗಳ ಕಚೇರಿಗೆ ಬಿಡುಗಡೆ ಮಾಡಲು ಮಂಜೂರಾತಿ ದೊರೆತಿದೆ.

ಗೋಣಿಕೊಪ್ಪ ದಸರಾಗೂ ರೂ. ೧೫ ಲಕ್ಷ ಮಂಜೂರಾಗಿದೆ. ಶಾಸಕ ಕೆ.ಜಿ.ಬೋಪಯ್ಯ ಅವರ ಪ್ರಯತ್ನದಿಂದಾಗಿ ಗೋಣಿಕೊಪ್ಪ ದಸರಾಗೆ ಅನುದಾನ ಮಂಜೂರಾಗಿದೆ.

ಷರತ್ತುಗಳು: ದಸರಾಗೆ ಬಿಡುಗಡೆ ಮಾಡಲಾಗಿರುವ ಅನುದಾನವನ್ನು ಅದೇ ಉದ್ದೇಶಕ್ಕೆ ಬಳಸತಕ್ಕದ್ದು, ಅನುದಾನ ಸಮರ್ಪಕವಾಗಿ ಬಳಕೆಯಾದ ಬಗ್ಗೆ ಉಪಯುಕ್ತ ಪ್ರಮಾಣ ಪತ್ರ ಸಲ್ಲಿಸತಕ್ಕದ್ದು, ಕಾರ್ಯಕ್ರಮ ನಡೆದಿರುವ ಬಗ್ಗೆ ಜಿಲ್ಲಾಧಿಕಾರಿಗಳಿಂದ ಖಾತ್ರಿಪಡಿಸಿಕೊಳ್ಳತಕ್ಕದ್ದು, ಹಣ ಬಳಕೆ ಪ್ರಮಾಣ ಪತ್ರವನ್ನು ಜಿಲ್ಲಾಧಿಕಾರಿಗಳಿಂದ ಪಡೆಯತಕ್ಕದ್ದು, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ ೧೯೯೯-೨೦೦೦ ನಿಯಮ ಮತ್ತು ಸರಕಾರ ಆಗಿಂದಾಗ್ಗೆ ಹೊರಡಿಸಿದ ಸುತ್ತೋಲೆಗಳಲ್ಲಿನ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನ ಕಾರ್ಯದರ್ಶಿ ಕೆ. ವೆಂಕಟೇಶಪ್ಪ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಆದರೆ ಎಲ್ಲಿಯೂ ಮಡಿಕೇರಿ ದಸರಾಗೆ ಬಿಡುಗಡೆಯಾದ ಅನುದಾನದಲ್ಲಿ ದಸರಾಗೆ ರೂ. ೨೫ ಲಕ್ಷ ಹಾಗೂ ರಸ್ತೆ ಅಭಿವೃದ್ಧಿಗೆ ರೂ. ೭೫ ಲಕ್ಷ ಎಂದು ವಿಂಗಡಿಸಿ ಷರತ್ತುಗಳನ್ನು ವಿಧಿಸಿಲ್ಲ.