ಮಡಿಕೇರಿ, ಅ. ೮: ಶುಂಠಿ ಸಾಗಾಟದ ನೆಪದಲ್ಲಿ ೧೦ ಚಕ್ರದ ಲಾರಿಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬೀಟೆ ಮರದ ನಾಟಗಳನ್ನು ಸಾಗಾಟ ಮಾಡುತ್ತಿದ್ದ ಸಂದರ್ಭ ಅರಣ್ಯ ಇಲಾಖೆ ದಾಳಿ ನಡೆಸಿ, ರೂ. ೬ ಲಕ್ಷ ಮೌಲ್ಯದ ಮಾಲು ವಶಪಡಿಸಿಕೊಂಡಿದ್ದು, ಆರೋಪಿಗಳು ಅರಣ್ಯ ಅಧಿಕಾರಿಗಳನ್ನು ಕಂಡು ಪರಾರಿಯಾಗಿದ್ದಾರೆ.

ಮೂರ್ನಾಡು ರಸ್ತೆ ಮೂಲಕ ಮರದ ನಾಟಗಳ ಸಾಗಾಟ ನಡೆಯುತ್ತಿದ್ದೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡ ಅರಣ್ಯ ಇಲಾಖೆ ಬೋಯಿಕೇರಿ ಸಮೀಪದ ಸಿಂಕೋನದಲ್ಲಿ ವಾಹನವನ್ನು ಅಡ್ಡಗಟ್ಟಿದೆ. ಪೊಲೀಸರ ಜೀಪು ಕಂಡ ಲಾರಿ ಚಾಲಕ ಮತ್ತು ಲಾರಿಯಲ್ಲಿದ್ದ ಇನ್ನೋರ್ವ ಲಾರಿಯನ್ನು ಅಲ್ಲಿಯೇ ನಿಲ್ಲಿಸಿ ಪರಾರಿಯಾಗಿದ್ದಾರೆ.

ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಲಾರಿಯನ್ನು ಪರಿಶೀಲಿಸಿದಾಗ ಶುಂಠಿ ಚೀಲದ ಕೆಳ ಭಾಗದಲ್ಲಿ ಭಾರಿ ಗಾತ್ರದ ೩೪ ಬೀಟೆ ನಾಟ ಪತ್ತೆಯಾಗಿದೆ. ಲಾರಿಯನ್ನು ವಶಪಡಿಸಿಕೊಂಡ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದೆ.

ಮಡಿಕೇರಿ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಎ.ಟಿ.ಪೂವಯ್ಯ, ಮಡಿಕೇರಿ ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದಯಾನಂದ್, ಮಡಿಕೇರಿ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಮಧುಸೂದನ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿ.ಆರ್.ಎಫ್.ಓ.ಗಳಾದ ಬಾಬು ರತೋಡ್, ಮಲ್ಲಯ್ಯ ಹಿರೇಮಠ್, ಉಮೇಶ್, ಅರಣ್ಯ ರಕ್ಷಕರಾದ ಭವ್ಯ, ಸಂದೀಶ್, ಯತೀಶ್, ವೀಕ್ಷಕರಾದ ವಾಸುದೇವ್, ಶರತ್, ನಿಖಿಲ್, ಚಂದ್ರ, ವಿಕ್ಕಿನ್, ತಿಮ್ಮಯ್ಯ, ಸುತನ್, ವೆಂಕಟರಮಣ, ಪ್ರವೀಣ ಹಾಗೂ ಚಾಲಕ ಮೋಹನ್, ಕುಶ, ಬಿದ್ದಪ್ಪ ಇದ್ದರು.