ಮಡಿಕೇರಿ, ಅ. ೮: ಗುತ್ತಿಗೆದಾರರೊಬ್ಬರಿಂದ ಲಂಚಕ್ಕಾಗಿ ಬೇಡಿಕೆ ಇರಿಸಿದ್ದ ಆರೋಪದಂತೆ ಭಷ್ಟಾಚಾರ ನಿಗ್ರಹದಳ (ಎಸಿಬಿ)ದಿಂದ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ಅಧಿಕಾರಿಗಳಿಗೆ ಇದೀಗ ಜಾಮೀನು ಮಂಜೂರಾಗಿದೆ.

ಗುತ್ತಿಗೆದಾರ ನಂದಕುಮಾರ್ ಅವರ ದೂರಿನಂತೆ, ಸೆ. ೧೮ ರಂದು ಎಸಿಬಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಪಂಚಾಯತ್‌ರಾಜ್ ಇಂಜಿನಿಯರಿAಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ಶ್ರೀಕಂಠಯ್ಯ, ಕಚೇರಿಯ ತಾಂತ್ರಿಕ ಸಹಾಯಕ ತೌಸಿಫ್, ಕಂಪ್ಯೂಟರ್ ಆಪರೇಟರ್ ಕವನ್, ದ್ವಿತೀಯ ದರ್ಜೆ ಸಹಾಯಕ ರಮೇಶ್ ಹಾಗೂ ಚಾಲಕ ಸಂತೋಷ್ ಬಂಧಿತರಾಗಿದ್ದರು. ಬಳಿಕ ಇವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಇದೀಗ ಈ ಆರೋಪಿತರಿಗೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಜಿನರಾಳ್‌ಕರ್ ಅವರು ಷರತ್ತು ಬದ್ಧ ಜಾಮೀನು ನೀಡಿದ್ದಾರೆ. ತಾ. ೪ ರಂದು ಜಾಮೀನು ಮಂಜೂರಾಗಿದ್ದು, ಇವರು ತಾ. ೫ ರಂದು ಬಿಡುಗಡೆಗೊಂಡಿದ್ದಾರೆ. ಆರೋಪಿತರ ಪರವಾಗಿ ವಕೀಲ ಕಾರೆರ ಕವನ್ ವಾದಿಸಿದ್ದರು.

ಎಸಿಬಿಯಿಂದ ಬಂಧಿತರಾಗಿ ಜೈಲು ಸೇರಿದ್ದ ಅಧಿಕಾರಿ ಶ್ರೀಕಂಠಯ್ಯ ಹಾಗೂ ಇತರರನ್ನು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಆರೋಪದಂತೆ, ತಮಗಿರುವ ಅಧಿಕಾರದಂತೆ ಈಗಾಗಲೇ ಸೇವೆಯಿಂದ ಅಮಾನತುಗೊಳಿಸಿದ್ದಾರೆ.

ಪ್ರಭಾರ ಅಧಿಕಾರಿ

ಶ್ರೀಕಂಠಯ್ಯ ಅವರ ಸ್ಥಾನಕ್ಕೆ ಆರ್.ಡಿ.ಪಿ.ಆರ್ ಇಲಾಖೆಯ ಪೊನ್ನಂಪೇಟೆಯ ಅಧಿಕಾರಿ ಎಇಇ ಮಹದೇವ್ ಅವರನ್ನು ನಿಯೋಜಿಸಲಾಗಿದ್ದು, ಇವರು ಪ್ರಸ್ತುತ ಪ್ರಭಾರವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.