ಕಣಿವೆ, ಅ. ೭ : ಕಾಡಾನೆಗಳಿಂದ ಜೋಳದ ಬೆಳೆಯನ್ನು ಕಾಯಲು ಕಾಡಂಚಿನ ಗ್ರಾಮಗಳ ಜನರು ಮದ್ಯದ ಖಾಲಿ ಬಾಟಲಿಗಳನ್ನು ಬೇಲಿಯ ಸಾಲಿನುದ್ದಕ್ಕೂ ಕಟ್ಟಿ ಹರ ಸಾಹಸ ಪಡುವ ಚಿತ್ರಣ ಅತ್ತೂರು ಮೀಸಲು ಅರಣ್ಯದಂಚಿನ ಚಿಕ್ಕತ್ತೂರು, ಯಡವನಾಡು ಹಾಗೂ ಅತ್ತೂರು ಗ್ರಾಮಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿದೆ.

ಜೋಳವನ್ನು ಬೆಳೆದಿರುವ ಕೃಷಿಕರು ಫಸಲನ್ನು ಕಾಡಾನೆಗಳಿಂದ ರಕ್ಷಿಸಲು ಹಗಲು ಪಕ್ಷಿಗಳಿಗಾಗಿ ಕಾವಲು ಕಾದರೆ, ಕಾಡಂಚಿನ ಜಮೀನುಗಳಲ್ಲಿ ಇರುವ ಮರಗಳ ಮೇಲೆ ಗುಡಿಸಲು ಕಟ್ಟಿಕೊಂಡು ರಾತ್ರಿ ಕಾಡಾನೆಗಳಿಗಾಗಿ ಕಾವಲು ಕಾಯುತ್ತಾರೆ. ಅಂದರೆ ಕಾಡಿನೊಳಗಿ ನಿಂದ ಕಾಡಾನೆಗಳು ಬೆಳೆಯೊಳಗೆ ಧಾವಿಸುವಾಗ ಕಾಡಂಚಿನ ಬೇಲಿಯುದ್ದಕ್ಕೂ ತಂತಿಯ ಸಹಾಯದಿಂದ ತಂತಿಯ ಬೇಲಿಗೆ ಕಟ್ಟಿರುವ ಮದ್ಯದ ಖಾಲಿ ಗಾಜಿನ ಬಾಟಲಿಗಳು ಒಂದಕ್ಕೊAದು ತಾಗಿಕೊಂಡು ಟಿಣ್ ಟಿಣ್ ಎಂಬ ಸದ್ದು ಮಾಡುತ್ತವೆ. ಅಂದರೆ ಕಾಡಾನೆಗಳು ಯಾವುದೇ ತೆರನ ಬೇಲಿಯನ್ನು ದಾಟುವ ಸಂದರ್ಭ ಮೊದಲು ಸೊಂಡಿಲು ಹಾಕಿ ಆ ಬೇಲಿಯ ತೀವ್ರತೆ ಅಥವಾ ಆ ಬೇಲಿಯ ಪರಿಣಾಮದ ಬಗ್ಗೆ ತಿಳಿದುಕೊಳ್ಳುತ್ತದೆ. ಹಾಗಾಗಿ ಬೇಲಿಯುದ್ದಕ್ಕೂ ಕಟ್ಟಿರುವ ತಂತಿಗೆ ಸೊಂಡಿಲನ್ನು ಹಾಕಿ ಎಳೆದಾಗ ಗಾಜಿನ ಬಾಟಲಿಗಳು ಮಾಡುವ ಸದ್ದಿಗೆ ಜಮೀನಿನ ಮರಗಳ ಮೇಲಿನ ಗುಡಿಸಲಿನಲ್ಲಿ ಇರುವ ರೈತರಿಗೆ ಕಾಡಾನೆಗಳ ಆಗಮನದ ಅರಿವಾಗುತ್ತದೆ. ಆವಾಗ ತಕ್ಷಣ ಕಾರ್ಯಪ್ರವೃತ್ತರಾಗುವ ರೈತರು ಕಾಡಾನೆಗಳಿರುವ ಕಡೆ ಟಾರ್ಚ್ ನ ಬೆಳಕು ಹಾಕಿ ಕೂಗು ಹಾಕುತ್ತಾರೆ. ಅಥವಾ ಕೆಲವರು ಪಟಾಕಿಗಳನ್ನು ಹಚ್ಚಿ ಸದ್ದು ಮಾಡಿ ಕಾಡಾನೆಗಳನ್ನು ಓಡಿಸುವ ಸಾಹಸ ಮಾಡುತ್ತಾರೆ.

ಕೆಲವೊಮ್ಮೆ ಕೆಲವೊಂದು ಕಾಡಾನೆಗಳು ರೈತರ ಕೂಗಿಗೆ ಅಥವಾ ಘರ್ಜನೆಗೆ ಅಪಾಯದ ಸೂಚನೆ ಅರಿತು ಮರಳುತ್ತವೆ. ಇನ್ನು ಕೆಲವೊಂದು ಒಂಟಿ ಸಲಗಗಳು ರೈತರ ಕೂಗಿಗಲ್ಲ, ಪಟಾಕಿ ಸದ್ದಿಗೂ ಕ್ಯಾರೇ ಅನ್ನದೇ ಬಂದ ಕೆಲಸ ಮಾಡಿಕೊಂಡೇ ಕಾಡಿಗೆ ಮರಳುತ್ತವೆ ಎಂದು ಕಾಡಂಚಿನಲ್ಲಿ ಕಾಡಾನೆಗಳ ಕಾಯುವ ರೈತರು ಹೇಳುತ್ತಾರೆ.

ಅತ್ತೂರಿನ ರೈತ ನರೇಂದ್ರ ಮಣಿ ಹಾಗೂ ಚಿಕ್ಕತ್ತೂರಿನ ರಾಮಣ್ಣ, ಮಾದಯ್ಯ, ರೈತ ಮಹಿಳೆ ಸಂಗೀತ ಮೊದಲಾದವರು ಸ್ಥಳಕ್ಕೆ ತೆರಳಿದ್ದ ‘ಶಕ್ತಿ'ಯೊಂದಿಗೆ ಕಾಡಾನೆಗಳ ಉಪಟಳ ಗಳ ಬಗ್ಗೆ ವಿವರಿಸಿದರು.

ಅತ್ತೂರಿನ ಅರಣ್ಯದೊಳಗೆ ದೈತ್ಯ ಸಲಗವೊಂದಿದೆ. ಅದಕ್ಕೆ ವಿದ್ಯುತ್ ಪ್ರವಹಿಸುವ ಸೋಲಾರ್ ತಂತಿ ಬೇಲಿಯೂ ಕೂಡ ಲೆಕ್ಕಕ್ಕಿಲ್ಲ. ಅಂದರೆ ಸೋಲಾರ್ ತಂತಿ ಅಳವಡಿಸಿರುವ ಬೇಲಿಯನ್ನು ಸೊಂಡಿಲಲ್ಲಿ ಅರಿಯುವ ಈ ಭಯಾನಕ ಸಲಗ, ಒಣಗಿದ ಮರದ ತುಂಡೊAದನ್ನು ಸೊಂಡಿಲಲ್ಲಿ ತಂದು ಸೋಲಾರ್ ತಂತಿಯ ಮೇಲೆ ಹಾಕಿ ಸೊಂಡಿಲಿನಿAದ ತಳ್ಳುತ್ತದೆ. ಕೊನೆಗೆ ಕಾಲಿನಿಂದ ನಿಧಾನಕ್ಕೆ ಒದ್ದು ಒಮ್ಮೆಗೆ ಒಂದೇ ಬಾರಿಗೆ ತಳ್ಳಿ ಸೋಲಾರ್ ತಂತಿಯ ಕಂಬಗಳನ್ನು ಕೆಳಕ್ಕುರುಳಿಸಿ ಬೇಲಿ ದಾಟುತ್ತದೆ. ನಂತರ ತನಗೆ ತೋಚಿದ ಫಸಲನ್ನೆಲ್ಲಾ ತಿಂದು ಹೋದ ಜಾಗದಲ್ಲೇ ಕಾಡಿಗೆ ಮರಳುತ್ತದೆ. ನಾವು ಅದನ್ನು ಓಡಿಸಲು ಏನೆಲ್ಲಾ ಸರ್ಕಸ್ ಮಾಡಿದರೂ ಕೂಡ ನಮ್ಮನ್ನೇ ಅದು ಓಡಿಸುತ್ತದೆ. ಮರದ ಮೇಲಿನ ಗುಡಿಸಲಿನವರೆಗೂ ಕೋಪದಿಂದ ಓಡೋಡಿ ಬಂದು ಮರದ ಬುಡವನ್ನು ಸೊಂಡಿಲಿನಿAದ ತಿವಿದು ಹೋಗುತ್ತದೆ. ಒಂದು ವೇಳೆ ಅದರ ಕೋಪಕ್ಕೆ ನಾವೇನಾದರೂ ಸಿಲುಕಿದರೆ ಹಣೆಬರಹ ಮುಗಿಯುತ್ತದೆ. ಏನು ಮಾಡೋದು ಹೇಳಿ. ಅವಕ್ಕು ಕಾಡಿನೊಳಗೆ ಆಹಾರವಿಲ್ಲ. ಏನೋ ಸಾವಿರಾರು ರೂ, ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆ ಮಾಡಿದ ಸಂಕಟಕ್ಕೆ ಕಾಡಾನೆಗಳಿಂದ ಉಳಿಸಿಕೊಳ್ಳಲು ನಾವು ಹೀಗೆಲ್ಲಾ ಸರ್ಕಸ್ ಮಾಡುತ್ತೇವೆ. ಅರಣ್ಯ ಇಲಾಖೆಯವರು ಕಾಡಂಚಿನ ಗ್ರಾಮಗಳ ರೈತರಿಗೆ ಖಾಯಂ ಆಗಿ ಪ್ರತೀ ವರ್ಷ ಇಂತಿಷ್ಟು ಅಂತಾ ಬೆಳೆ ಪರಿಹಾರ ಕೊಟ್ಟು ಬಿಟ್ಟರೆ ಸಾಕು. ಅವರು ಅದನ್ನೂ ಕೊಡಲ್ಲ... ನಾವು ಬೆಳೆ ಮಾಡಿ ಕೈ ಸುಟ್ಟುಕೊಳ್ಳೋದು ಬಿಡಲ್ಲ..ಕಾಡಂಚಿನಲ್ಲಿ ಕಾಡಾನೆಗಳು ಬಂದು ಬೆಳೆ ಹಾನಿ ಮಾಡೋದು ತಪ್ಪಿಲ್ಲ.

ಕಾಡಾನೆಗಳು ಕಾಡಿನಿಂದ ನಾಡಿಗೆ ಬರದಂತೆ ತಡೆಯುತ್ತೇವೆ ಅಂತಾ ಇಲಾಖೆಯವರು ಪ್ರತೀ ವರ್ಷ ವ್ಯಯ ಮಾಡುವ ಅಪಾರ ಪ್ರಮಾಣದಲ್ಲಿ ಕಂದಕ ತೆರೆಯುವಂತಹ ಯೋಜನೆಗಳು ನಿಂತಿಲ್ಲ. ಒಟ್ಟಿನಲ್ಲಿ "ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ" ಎಂಬAತೆ ಸರ್ಕಾರದ ಅಧಿಕಾರಿಗಳು ಕಾಡಂಚಿನ ರೈತರಿಗೆ ಮಾಡಬೇಕಾದ್ದು ಮಾಡ್ತಿಲ್ಲ. ಅವರಿಗೆ ಪ್ರಯೋಜನ ವಾಗುವಂತಹ ಕೆಲಸಗಳು ನಿಂತಿಲ್ಲ ಎನ್ನುತ್ತಾರೆ ಅತ್ತೂರಿನ ನರೇಂದ್ರ.

ಕೆಲವು ಬಾರಿ ಬೆಳೆ ಬೆಳೆಯಲು ಖರ್ಚು ಮಾಡುವ ಹಣ ಇರಲೀ, ಹೊಲದ ಸುತ್ತ ಬೇಲಿಗೆ ವ್ಯಯಿಸುವ ಹಣವೂ ಸಿಗಲ್ಲ. ಇಂತಹ ದಯನೀಯ ಪರಿಸ್ಥಿತಿಯಲ್ಲಿ ಕಾಡಂಚಿನ ಕೃಷಿಕರು ಇದ್ದರೂ ಕೂಡ ನಮ್ಮ ಬಳಿ ಖುದ್ದಾಗಿ ಬಂದು ನಮ್ಮಗಳ ಸಂಕಟವನ್ನು ಅರಿತು ಸರ್ಕಾರದ ಗಮನಕ್ಕೆ ತಂದು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವ ಜನಪ್ರತಿನಿಧಿಗಳು ಅಥವಾ ರಾಜಕಾರಣಿಗಳು ನಮ್ಮೊಳಗಿಲ್ಲವಲ್ಲ. ಏನು ಮಾಡೋದು ಎಲ್ಲಾ ನಮ್ಮ ಹಣೆ ಬರಹ ಅಂತಾರೆ ಬಹುತೇಕ ಕೃಷಿಕರು.

ಕಾಡಾನೆಗಳಿಗೆ ಸಿಲುಕಿ ಯಾರಾದರೂ ಅಮಾಯಕರು ಸಾವನ್ನಪ್ಪಿದರೆ ಸರ್ಕಾರ ಘೋಷಿಸಿರುವ ಪರಿಹಾರ ಕೊಡಲು ಓಡೋಡಿ ಬರುವ ಅಧಿಕಾರಿಗಳು ಹಾಗೂ ಶಾಸಕರು ಕಾಡಂಚಿನ ಕೃಷಿಕರ ಬವಣೆಯನ್ನು ಪ್ರಾಮಾಣಿಕವಾಗಿ ಅರಿತು ಅದಕ್ಕೆ ಪರಿಹಾರೋಪಾಯ ಗಳನ್ನು ಕಂಡು ಹಿಡಿಯಲು ಇನ್ನಾದರೂ ಮುಂದಾಗಬೇಕಿದೆ.

-ಕೆ.ಎಸ್. ಮೂರ್ತಿ