ಮುಳ್ಳೂರು, ಅ. ೭ : ಕೊಡಗು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಮತ್ತು ವರ್ತಕರ ಸಂಘದÀ ಸ್ಥಾನೀಯ ಸಮಿತಿಯ ಶನಿವಾರಸಂತೆ ವರ್ತಕರ ಸಂಘದ ೨೦೨೦-೨೧ನೇ ಸಾಲಿನ ಮಹಾಸಭೆ ಗುಡುಗಳಲೆ ಆರ್.ವಿ. ಕಲ್ಯಾಣ ಮಂಟಪದಲ್ಲಿ ಸಂಘದ ಅಧ್ಯಕ್ಷ ಸರ್ದಾರ್ ಅಹಮದ್ ಅಧ್ಯಕ್ಷತೆಯಲ್ಲಿ ನಡೆಯಿತು. ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಂ.ಬಿ.ದೇವಯ್ಯ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿ-ಕೊಡಗು ಜಿಲ್ಲೆಯ ವರ್ತಕರ ಸಂಘ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಸರಕಾರ ಮತ್ತು ಜಿಲ್ಲಾಡಳಿತದ ಜೊತೆಯಲ್ಲಿ ಕೈಜೋಡಿಸುತ್ತಿದ್ದು, ಈ ಮೂಲಕ ವರ್ತಕರ ಸಂಘಟನೆಯನ್ನು ಮತ್ತಷ್ಟು ಬಲಪಡಿಸುತ್ತಿದೆ ಎಂದರು. ಕೊಡಗು ಜಿಲ್ಲೆಯ ಜನರು, ವರ್ತಕರು, ಎಲ್ಲಾ ವರ್ಗದ ಜನರು ಕಳೆದ ೨ ವರ್ಷಗಳಿಂದ ಕೋವಿಡ್ ಪಿಡುಗುನಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ವರ್ತಕರ ಸಂಘವು ಕಾನೂನು ನಿಯಮದಂತೆ ಕಾರ್ಯನಿರ್ವಹಿಸುವುದರಿಂದ ಕೆಲವೊಮ್ಮೆ ಸರಕಾರ, ಅಧಿಕಾರಿಗಳಿಂದ ಲೋಪವಾದಾಗ ಅವರನ್ನು ಪ್ರಶ್ನಿಸುವ ಮತ್ತು ನೊಂದ ವರ್ತಕರಿಗೆ ನ್ಯಾಯ ದೊರಕಿಸುವ ಅಧಿಕಾರ ವರ್ತಕರ ಸಂಘಟನೆಗೆ ಇದ್ದು, ಈ ನಿಟ್ಟಿನಲ್ಲಿ ಸಂಘದ ಪದಾಧಿಕಾರಿಗಳು ಒಟ್ಟಾಗಿ ಮತ್ತು ಒಗ್ಗಟ್ಟಾಗಿ ಕಾರ್ಯ ನಿರ್ವಸುವಂತೆ ಸಲಹೆ ನೀಡಿದರು.

ವರ್ತಕರ ಸಂಘದ ಜಿಲ್ಲಾ ಕಾರ್ಯದರ್ಶಿ ಎ.ಕೆ.ನವೀನ್ ಅಂಬೆಕಲ್ ಮಾತನಾಡಿ-ವರ್ತಕರ ಸಂಘವು ಕೇವಲ ವರ್ತಕರ ಕ್ಷೇತ್ರದ ಶ್ರೇಯೋಭಿವೃದ್ಧಿಗಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲೂ ಸರಕಾರದ ಜೊತೆ ಕೈಜೋಡಿಸುತ್ತಿದೆ ಎಂದರು. ವರ್ತಕರು ತಮ್ಮ ಅಂಗಡಿ, ಹೊಟೇಲು, ಮುಂಗಟ್ಟುಗಳಲ್ಲಿ ತ್ಯಾಜ್ಯ ಬುಟ್ಟಿಗಳನ್ನಿಟ್ಟು ಶುಚಿತ್ವವನ್ನು ಕಾಪಾಡಿಕೊಳ್ಳಬೇಕು. ಇದರಿಂದ ಪಟ್ಟಣ, ನಗರ ಎಲ್ಲವೂ ಶುಚಿತ್ವಗೊಳ್ಳುತ್ತದೆ, ಕೊಡಗು ಜಿಲ್ಲೆಯಲ್ಲಿ ಶನಿವಾರಸಂತೆ ವರ್ತಕರ ಸಂಘವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಜಿಲ್ಲೆಗೆ ಮಾದರಿ ಸಂಘವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ವರ್ತಕರ ಸಂಘದ ಉಪಾಧ್ಯಕ್ಷ ನಾಗೇಂದ್ರ ಪ್ರಸಾದ್ ಮಾತನಾಡಿ-ಕೊಡಗು ಜಿಲ್ಲೆ ಪ್ರಕೃತಿ ವಿಕೋಪ, ಕಳೆದೆರಡು ವರ್ಷಗಳಿಂದ ಕೊರೊನಾ ಪಿಡುಗು ಹೀಗೆ ೪ ವರ್ಷಗಳಿಂದ ನಿರಂತರ ಸಂಕಷ್ಟ ಅನುಭವಿಸುತ್ತಿದ್ದು, ಜನರು ಆರ್ಥಿಕ ಮತ್ತು ನೈತಿಕವಾಗಿ ಕುಗ್ಗಿ ಹೋಗಿದ್ದಾರೆ. ಇಂಥಹ ಸಂದರ್ಭದಲ್ಲೂ ವರ್ತಕರ ಸಂಘಗಳು ವರ್ತಕರ ಶ್ರೇಯೋಭಿವೃದ್ಧಿಗಾಗಿ ಕಾರ್ಯ ಚಟುವಟಿಕೆಗಳನ್ನು ನಡೆಸಿದೆ ಎಂದರು. ವರ್ತಕರ ಸಂಘದಲ್ಲಿ ಅಜೀವ ಸದಸ್ಯತ್ವವನ್ನು ನೋಂದಾಯಿಸಿ ಕೊಳ್ಳುವುದರಿಂದ ಸಂಘಟನೆ ಬಲಗೊಳ್ಳುತ್ತದೆ ಎಂದರು.

ಮಹಾಸಭೆಯ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಸರ್ದಾರ್ ಅಹಮ್ಮದ್ ಮಾತನಾಡಿ-ಸಂಘದ ಪದಾಧಿಕಾರಿಗಳು ಮತ್ತು ಜಿಲ್ಲಾ ಸಂಘದ ಮುಖ್ಯಸ್ಥರ ಸಹಕಾರದಿಂದ ನಮ್ಮ ಸಂಘವು ಅಭಿವೃದ್ಧಿ ಹೊಂದಲು ಸಹಕಾರಿ ಯಾಗಿದೆ, ಜಿಲ್ಲೆಯಲ್ಲಿರುವ ವರ್ತಕರ ಸಂಘಗಳ ಪೈಕಿ ನಮ್ಮ ಸಂಘವು ಹೆಚ್ಚಿನ ಸಂಖ್ಯೆಯಲ್ಲಿ ವರ್ತಕರ ಅಜೀವ ಸದಸ್ಯತ್ವವನ್ನು ನೋಂದಾಯಿಸಿ ಕೊಂಡಿರುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ ಎಂದರು. ನಮ್ಮ ವರ್ತಕರ ಸಂಘದ ಸ್ವಂತ ಕಟ್ಟಡ ನಿರ್ಮಾಣಕ್ಕೆ ಜಾಗ ಮಂಜೂರಾಗಿದ್ದು ದಾಖಲಾತಿ ವಿಲೇವಾರಿ ಪ್ರಗತಿ ಮುಕ್ತಾಯಕ್ಕೆ ಬಂದಿದ್ದು ಶೀಘ್ರದಲ್ಲಿ ಕಟ್ಟಡ ಕಾಮಗಾರಿಯೂ ನಡೆಯಲಿದೆ ಎಂದರು.

ವೇದಿಕೆಯಲ್ಲಿ ಜಿಲ್ಲಾ ವರ್ತಕರ ಸಂಘದ ನಿರ್ದೇಶಕ ಮತ್ತು ಶನಿವಾರಸಂತೆ ಸಂಘದ ಖಜಾಂಜಿ ಶ್ರೀನಿವಾಸ್, ಶನಿವಾರಸಂತೆ ಗ್ರಾ.ಪಂ.ಅಧ್ಯಕ್ಷೆ ಸರೋಜ ಶೇಖರ್, ದುಂಡಳ್ಳಿ ಗ್ರಾ.ಪಂ.ಅಧ್ಯಕ್ಷೆ ಪೂರ್ಣಿಮಾ ಕಿರಣ್, ಹಂಡ್ಳಿ ಗ್ರಾ.ಪಂ.ಅಧ್ಯಕ್ಷೆ ಮಹಾದೇವಿ ಹಾಜರಿದ್ದರು. ಈ ಸಂದರ್ಭ ವರ್ತಕರ ಸಂಘದಿAದ ಕಳೆದ ಹತ್ತನೆ ತರಗತಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೨೫ ಅಂಕಗಳಿಸಿದ ಶನಿವಾರಸಂತೆ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಜನಿತ ಅವರ ಪರವಾಗಿ ಅವರ ಪೋಷಕರನ್ನು ಸನ್ಮಾನಿಸಲಾಯಿತು.