ಮಡಿಕೇರಿ, ಅ. ೭: ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಯುನೈಟೆಡ್ ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್ ವತಿಯಿಂದ ತಾ. ೧೧ ರಂದು ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಆದರೆ ಕೊಡಗಿನಲ್ಲಿ ಮಾತ್ರ ಪ್ರತಿಭಟನೆ ನಡೆಸಲು ಅನುಮತಿ ನೀಡಲು ನಿರಾಕರಿಸಲಾಗಿದ್ದು, ಇದು ವಿಷಾದನೀಯ ಎಂದು ಯೂನಿಯನ್ ಜಿಲ್ಲಾಧ್ಯಕ್ಷ ಹೆಚ್.ಎಂ. ಸೋಮಪ್ಪ ಹೇಳಿದರು.

ಪತ್ರಿಕಾಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ಲಾಂಟೇಷನ್ ಕಾರ್ಮಿಕರ ಕನಿಷ್ಟ ವೇತನವನ್ನು ಹೆಚ್ಚಳ ಮಾಡಬೇಕು. ಕಾರ್ಮಿಕರಿಗೆ ವಸತಿ ಸೌಲಭ್ಯ ಒದಗಿಸಬೇಕು. ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆಗೆ ತೀರ್ಮಾನಿಸಲಾಗಿದೆ. ಆದರೆ ಕೊಡಗಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲು ಅನುಮತಿ ಕೋರಿದರೂ ಅನುಮತಿ ನೀಡಿಲ್ಲ.

ಜಿಲ್ಲಾಡಳಿತದ ಸೂಚನೆಯಂತೆ ಐದು ಮಂದಿ ತಾ. ೧೧ ರಂದು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸುವುದಾಗಿ ತಿಳಿಸಿದರು. ಗೋಷ್ಠಿಯಲ್ಲಿ ಯೂನಿಯನ್‌ನ ಜಿಲ್ಲಾ ಪದಾಧಿಕಾರಿಗಳಾದ ಮಣಿ, ಪಿ.ಟಿ. ಸುಂದರ್, ಕುಮಾರ್ ಉಪಸ್ಥಿತರಿದ್ದರು.