ಮಡಿಕೇರಿ, ಅ. ೭: ಗೋಣಿಕೊಪ್ಪ ಹಾಗೂ ವೀರಾಜಪೇಟೆಯಲ್ಲಿ ಕೆಲವೊಂದು ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಅಸ್ಸಾಂ ವ್ಯಾಪಾರಸ್ಥರನ್ನು ತೆರವುಗೊಳಿಸಿರುವ ಕ್ರಮವನ್ನು ಸೋಷಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಖಂಡಿಸುತ್ತದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಮುಸ್ತಫ ಮಡಿಕೇರಿಯಲ್ಲಿ ಹೇಳಿದರು.
ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಂವಿಧಾನದ ಪರಿಚ್ಛೇದ ೧೯ (೧ಎ) ಪ್ರಕಾರ ದೇಶದ ಯಾವುದೇ ಮೂಲೆಯಲ್ಲಿನ ವ್ಯಕ್ತಿಯು ಕೂಡ ದೇಶದ ಇನ್ಯಾವುದೇ ಮೂಲೆಯಲ್ಲಿ ವ್ಯಾಪಾರ ನಡೆಸಲು ಸ್ವತಂತ್ರನಾಗಿದ್ದು, ದಬ್ಬಾಳಿಕೆ ನಡೆಸಿ ತೆರವುಗೊಳಿಸಲು ಯಾರಿಗೂ ಅಧಿಕಾರವಿಲ್ಲ.
ಪೊಲೀಸ್ ಇಲಾಖೆಯು ಈಗಾಗಲೇ ಕೊಡಗಿನಲ್ಲಿ ವಿವಿಧ ಅಸ್ಸಾಮಿ ಕಾರ್ಮಿಕರುಗಳ ದಾಖಲೆಗಳನ್ನು ಪರಿಶೀಲಿಸಿ ದೃಢಪಡಿಸಿದ್ದು, ನಂತರದಲ್ಲಿ ಅಲ್ಲಿನ ಸ್ಥಳೀಯ ಪಂಚಾಯಿತಿಗಳ ಆಡಳಿತ ತಮ್ಮ ಜವಾಬ್ದಾರಿಯನ್ನು ಮರೆತು ವ್ಯಾಪಾರಕ್ಕೆ ಅಡ್ಡಿಪಡಿಸಿದ್ದು, ಕಾನೂನು ಬಾಹಿರವಾಗಿರುತ್ತದೆ ಎಂದು ಆರೋಪಿಸಿದರಲ್ಲದೆ, ಸಂಬAಧಪಟ್ಟ ಪೊಲೀಸ್ ಇಲಾಖೆ ಕೂಡ ಈ ಕೃತ್ಯವೆಸಗಿರುವವರ ವಿರುದ್ಧ ಕ್ರಮ ಜರುಗಿಸದೇ ಇರುವುದು ಸಂಶಯ ಮೂಡಿಸುವಂತಿದೆ ಎಂದರು.
ಕೊಡಗಿನಲ್ಲಿ ರಾಜಸ್ಥಾನ, ಗುಜರಾತ್, ಕೇರಳ, ತಮಿಳುನಾಡು ಸೇರಿದಂತೆ ಇತರೆ ರಾಜ್ಯಗಳಿಗೆ ಸೇರಿದ ವ್ಯಾಪಾರಿಗಳು ಹಲವು ದಶಕಗ ಳಿಂದಲೇ ವ್ಯಾಪಾರೋದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಇವರಂತೆಯೇ ಸಂತೆಯಲ್ಲಿ ಸಣ್ಣ ಮಟ್ಟದ ವ್ಯಾಪಾರ ನಡೆಸುವ ಅಸ್ಸಾಮಿ ಬಡ ವ್ಯಾಪಾರಿಗಳ ಮೇಲೆ ಈ ದರ್ಪವೇಕೆ ಎಂದು ಪ್ರಶ್ನಿಸಿದ ಅವರು, ಕೂಡಲೇ ಸಂಬAಧಪಟ್ಟ ಇಲಾಖೆಗಳು ಮುತುವರ್ಜಿ ವಹಿಸಿ ಬಡ ವ್ಯಾಪಾರಿಗಳ ಮೇಲಿನ ಶೋಷಣೆಯನ್ನು ಕೊನೆಗೊಳಿಸಬೇಕು. ತಪ್ಪಿದಲ್ಲಿ ಜಿಲ್ಲಾದ್ಯಂತ ಪಕ್ಷದ ವತಿಯಿಂದ ಹೋರಾಟ ರೂಪಿಸುವುದಾಗಿ ಮುಸ್ತಫ ಹೇಳಿದರು.
ಜಿಲ್ಲಾ ಸಮಿತಿ ಸದಸ್ಯ ಮನ್ಸೂರ್ ಮಾತನಾಡಿ, ಕೋವಿಡ್‌ನಿಂದ ಉಂಟಾಗಿರುವ ಸಂಕಷ್ಟದ ಹಿನ್ನೆಲೆಯಲ್ಲಿ ಜನರು ಸಣ್ಣಪುಟ್ಟ ವ್ಯಾಪಾರ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಹಕ್ಕುಗಳಿದ್ದು, ಅದನ್ನು ಕಸಿಯುವ ಪ್ರಯತ್ನ ಮಾಡಿದರೆ ಹೋರಾಟ ಮಾಡಬೇಕಾಗುತ್ತದೆ ಎಂದರು.
ಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಫಿ, ಉಪಾಧ್ಯಕ್ಷೆ ಮೇರಿ ವೆಗಸ್, ಕಾರ್ಯದರ್ಶಿ ಬಷೀರ್ ಅಹ್ಮದ್, ಜಿಲ್ಲಾ ಸಮಿತಿ ಸದಸ್ಯ ಕಲೀಲ್ ಉಪಸ್ಥಿತರಿದ್ದರು.