ಮಡಿಕೇರಿ, ಅ. ೭: ತಲಕಾವೇರಿ ವಿಚಾರಕ್ಕೆ ಸಂಬAಧಿಸಿದAತೆ ಗೊಂದಲಮಯವಾದ ಸನ್ನಿವೇಶಗಳು ಸೃಷ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತಾಗಿ ಆಚರಣೆಯ ಹಿನ್ನೆಲೆ ಮಹತ್ವ ಆಗಬೇಕಾದ ವಾಸ್ತವತೆಗಳ ಕುರಿತಾಗಿ ನಿನ್ನೆ ಜಿಲ್ಲಾಧಿಕಾರಿಗಳು ಕೊಡವ ಪ್ರಮುಖರನ್ನು ಒಳಗೊಂಡ ವಿಶೇಷ ಸಭೆಯೊಂದನ್ನು ನಡೆಸುವ ಮೂಲಕ ಅಭಿಪ್ರಾಯ ಕ್ರೋಢೀಕರಿಸಿರುವ ಕುರಿತು ತಿಳಿದು ಬಂದಿದೆ.

ಜಿಲ್ಲಾ ಉಸ್ತುವಾರಿ ಸಚಿವರ ಸಭೆಗೂ ಮುನ್ನ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅಧ್ಯಕ್ಷತೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಜಿಲ್ಲೆಯ ಪ್ರಮುಖ ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಕೊಡವ ಜನಾಂಗದ ಕೆಲವು ಪ್ರಮುಖ ಸಂಸ್ಥೆಗಳು, ಪ್ರಮುಖರುಗಳಾದ ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಎಂ. ಮೊಣ್ಣಪ್ಪ, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ರಾಜೀವ್ ಬೋಪಯ್ಯ, ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ವಾಂಚಿರ ನಾಣಯ್ಯ, ಮಡಿಕೇರಿ ಸಮಾಜದ ಉಪಾಧ್ಯಕ್ಷ ಚೋವಂಡ ಕಾಳಪ್ಪ,

(ಮೊದಲ ಪುಟದಿಂದ) ಪದಾಧಿಕಾರಿ ಮಾದೇಟಿರ ಬೆಳ್ಯಪ್ಪ, ಯುಕೋ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಕೊಡಗು ಏಕೀಕರಣ ರಂಗದ ಪ್ರಮುಖರಾದ ಎ.ಎ. ತಮ್ಮು ಪೂವಯ್ಯ, ತೇಲಪಂಡ ಪ್ರಮೋದ್, ಅ.ಕೊ.ಸ ಯೂತ್ ವಿಂಗ್‌ನ ಅಧ್ಯಕ್ಷ ಚಮ್ಮಟ್ಟೀರ ಪ್ರವೀಣ್, ಕೊಡಗು ರಕ್ಷಣಾ ವೇದಿಕೆ ಅಧ್ಯಕ್ಷ ಅಚ್ಚಾಂಡಿರ ಪವನ್ ಪೆಮ್ಮಯ್ಯ, ಬೆಂಗಳೂರು ಕೊಡವ ಸಮಾಜ, ಯೂತ್‌ವಿಂಗ್, ಕನೆಕ್ಟಿಂಗ್ ಕೊಡವಾಸ್‌ನ ಪ್ರಮುಖರು ಸೇರಿದಂತೆ ಹಲವರ ಪಾಲ್ಗೊಳ್ಳುವಿಕೆಯಲ್ಲಿ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಈ ಸಮಾಲೋಚನಾ ಸಭೆ ಜರುಗಿದೆ.

ಸಭೆಯಲ್ಲಿ ಪ್ರಮುಖವಾಗಿ ವರ್ಷಂಪ್ರತಿ ತಲಕಾವೇರಿ ತೀರ್ಥೋದ್ಭವ ಸಂದರ್ಭದಲ್ಲಿ ಎದುರಾಗುತ್ತಿರುವ ಗೊಂದಲಮಯ ವಿಚಾರಗಳು ಭವಿಷ್ಯದಲ್ಲಿ ಮರುಕಳಿಸಬಾರದೆಂಬ ಕುರಿತು ಪ್ರಮುಖರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಆರಂಭದಲ್ಲಿ ಮಾತನಾಡಿದ ಮಾತಂಡ ಮೊಣ್ಣಪ್ಪ ಅವರು ಪ್ರಮುಖವಾಗಿ ಸಮಿತಿ ರಚನೆಯಾಗದಿರುವದು, ಮುಂಚಿತವಾಗಿ ಭಕ್ತಾದಿಗಳ ಅಭಿಪ್ರಾಯ ಸಂಗ್ರಹಿಸದಿರುವದು, ಅಗತ್ಯತೆಗಳೇನು, ಮಹತ್ವಗಳ ವಿಚಾರವೇನು ಎಂಬದನ್ನು ಅರ್ಥೈಸಿಕೊಳ್ಳದಿರುವದು, ಎಲ್ಲದಕ್ಕೂ ಮಿಗಿಲಾಗಿ ರಾಜಕೀಯ ಪ್ರೇರಿತವಾದಂತೆ ಕಾಣುವ ಕೆಲವಾರು ಬೆಳವಣಿಗೆಗಳಿಂದಾಗಿ ಸಮಸ್ಯೆ ಎದುರಾಗುತ್ತಿದೆ.

ಇಂತಹ ಗೊಂದಲಗಳು ಮುಂದೆ ನಡೆಯದಂತೆ ಎಚ್ಚರ ವಹಿಸಬೇಕಾಗಿದೆ. ಆಗಾಗ್ಗೆ ಬದಲಾಗುವ ಅಧಿಕಾರಿಗಳಿಗೆ ಇಲ್ಲಿನ ವಾಸ್ತವವೇನು ಆಚರಣೆ ಹೇಗೆ ಎಂಬದು ಅರಿವು ಇರುವುದಿಲ್ಲ. ಈ ಹಿಂದೆ ಸ್ಥಳೀಯ ಅಧಿಕಾರಿಗಳು ಹೆಚ್ಚಿರುತ್ತಿದ್ದ ಹಿನ್ನೆಲೆಯಲ್ಲಿ ಎಲ್ಲವೂ ಸುಸೂತ್ರವಾಗಿ ನಡೆದುಕೊಂಡು ಬರುತ್ತಿತ್ತು. ಇದೀಗ ಈ ಪರಿಸ್ಥಿತಿ ಇಲ್ಲ. ಇದರಿಂದಾಗಿ ಶಾಶ್ವತವಾಗಿ ಇಲ್ಲಿನ ವ್ಯವಸ್ಥೆಗಳೇನು ಎಂಬದನ್ನು ತಯಾರಿಸಿ ಇಡಬೇಕು. ಇದು ಹೊಸದಾಗಿ ಬರುವ ಅಧಿಕಾರಿಗಳಿಗೆ ಮಾಹಿತಿಗೆ ಉಪಯುಕ್ತವಾಗಲಿದೆ. ಇದಾದಲ್ಲಿ ವರ್ಷಂಪ್ರತಿ ಗೊಂದಲಗಳಿಗೆ ಎಡೆಯಾಗುವುದಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾರ್ಯೋನ್ಮುಖವಾಗಬೇಕೆಂಬ ಸಲಹೆ ನೀಡಿದರು. ದಸರಾ ಆಚರಣೆ ವಿಚಾರದಲ್ಲೂ ಈ ಕ್ರಮ ಅಗತ್ಯವಿದೆ ಎಂದರು. ತಲಕಾವೇರಿಯ ಭಕ್ತರು ಪ್ರಜ್ಞಾವಂತರಾಗಿದ್ದು, ಜವಾಬ್ದಾರಿಯುತವಾಗಿಯೇ ನಡೆದುಕೊಳ್ಳುತ್ತಾರೆ ಎಂಬದನ್ನು ಅವರು ಗಮನಕ್ಕೆ ತಂದರು.

ರಾಜೀವ್ ಬೋಪಯ್ಯ, ಮಂಜು ಚಿಣ್ಣಪ್ಪ, ಮಾದೇಟಿರ ಬೆಳ್ಯಪ್ಪ, ಚಮ್ಮಟ್ಟೀರ ಪ್ರವೀಣ್, ವಾಂಚಿರ ನಾಣಯ್ಯ, ಚೋಕಂಡ ಸೂರಜ್ ಮತ್ತಿತರು ಮಾತನಾಡಿ, ಕ್ಷೇತ್ರಕ್ಕೆ ಭಕ್ತಾದಿಗಳನ್ನು ನಿರ್ಬಂಧಿಸುವದು, ಸಲ್ಲದ ನಿಯಮಗಳ ಹೇರಿಕೆಯಿಂದ ಸಂಘರ್ಷಕ್ಕೆ ಎಡೆಯಾಗುತ್ತದೆ. ಇಂತಹ ಪ್ರಯತ್ನಗಳನ್ನು ವಿರೋಧಿಸುವದಾಗಿ ತಿಳಿಸಿದರು. ಇನ್ನಿತರ ಹಲವು ವಿಚಾರಗಳ ಬಗ್ಗೆ ಪರಂಪರೆಯ ಬಗ್ಗೆಯೂ ಪ್ರಮುಖರು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು. ಕಾವೇರಿ, ಕೊಡಗು, ಕೊಡವರ ಸಂಬAಧದ ಬಗ್ಗೆ ವಿವರಿಸಲಾಯಿತು. ನೆರವಂಡ ಉಮೇಶ್, ಪುಟ್ಟಿಚಂಡ ಡಾನ್ ದೇವಯ್ಯ, ಕೊಕ್ಕಲೇರ ಶ್ಯಾಮ್, ಅಪ್ಪಚ್ಚೀರ ಕಮಲ, ನೆಲ್ಲಮಕ್ಕಡ ಮಾದಯ್ಯ, ಅಣ್ಣೀರ ಹರೀಶ್ ಮಾದಪ್ಪ, ಹಿಂದೂ ಮಹಾಸಭಾದ ಶ್ರೀನಿವಾಸ್ ರೈ ಮತ್ತಿತರರು ಹಾಜರಿದ್ದರು. ಎಲ್ಲಾ ವಿವರಗಳನ್ನು ಪಡೆದ ಜಿಲ್ಲಾಧಿಕಾರಿಗಳು ಈ ಬಗ್ಗೆ ಸರಕಾರದ ಗಮನಕ್ಕೆ ತಂದು ವ್ಯವಹರಿಸುವುದಾಗಿ ತಿಳಿಸಿದರು. ಎಸ್‌ಪಿ ಕ್ಷಮಾಮಿಶ್ರ, ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಮತ್ತಿತರ ಅಧಿಕಾರಿಗಳು ಹಾಜರಿದ್ದರು.