ಭಾಗಮಂಡಲ, ಅ. ೭: ಕೋವಿಡ್ ನಿಯಮಗಳ ಪಾಲನೆ ಮಾಡುವುದರ ಜೊತೆಗೆ ತೀರ್ಥೋದ್ಭವ ಸಂದರ್ಭ ತಲಕಾವೇರಿಗೆ ಬನ್ನಿ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮನವಿ ಮಾಡಿದರು.
ಭಾಗಮಂಡಲದಲ್ಲಿ ಅಧಿಕಾರಿಗಳ ಹಾಗೂ ಸ್ಥಳೀಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊಡಗಿನ ಧಾರ್ಮಿಕ ನಂಬಿಕೆ ಯಾಗಿರುವ ತೀರ್ಥೋದ್ಭವ ಸಂದರ್ಭ ಕ್ಷೇತ್ರಕ್ಕೆ ಪ್ರವೇಶಿಸಲು ಕೆಲವೊಂದು ನಿಯಮಗಳನ್ನು ವಿಧಿಸಲಾಗಿತ್ತು. ಭಕ್ತರ ಒತ್ತಾಯಕ್ಕೆ ಮಣಿದು ನಿಯಮಗಳನ್ನು ಸಡಿಲಿಸಿದ್ದು, ಭಕ್ತರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ತೀರ್ಥರೂಪಿಣಿಯಾಗಿ ದರ್ಶನ ನೀಡುವ ಕಾವೇರಿಯನ್ನು ಕಣ್ತುಂಬಿ ಕೊಳ್ಳಬೇಕೆಂದು ಕೋರಿಕೊಂಡರು.
ಅನ್ನಸಂತರ್ಪಣೆ ವ್ಯವಸ್ಥೆ
ತೀರ್ಥೋದ್ಭವ ಸಂದರ್ಭ ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಲು ನಿರ್ಧಾರ ಕೈಗೊಳ್ಳಲಾಯಿತು. ಅನ್ನಸಂತರ್ಪಣೆಯ ಜವಾಬ್ದಾರಿ ಯನ್ನು ಕೊಡಗು ಏಕೀಕರಣ ರಂಗ ವಹಿಸಿಕೊಂಡಿತು.
ತಾ. ೧೬ ರ ರಾತ್ರಿ ಸ್ವಯಂ ಸೇವಕರಿಗೆ, ದೇವಾಲಯ ಸಿಬ್ಬಂದಿಗಳಿಗೆ, ಪೊಲೀಸರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತದೆ. ತಾ. ೧೭ ರಂದು ತೀರ್ಥೋದ್ಭವ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಲು ನಿರ್ಧರಿಸಲಾಯಿತು. ಈ ಬಗ್ಗೆ ಅಖಿಲ ಕೊಡವ ಸಮಾಜದ ಯೂತ್ ವಿಂಗ್
(ಮೊದಲ ಪುಟದಿಂದ) ಅಧ್ಯಕ್ಷ ಚಮ್ಮಟ್ಟೀರ ಪ್ರವೀಣ್ ಮಾತನಾಡಿ, ಭಕ್ತಾಧಿಗಳು ದರ್ಶನ, ಪಿಂಡ ಪ್ರದಾನಕ್ಕಾಗಿ ಆಗಮಿಸಿರುತ್ತಾರೆ. ಆ ಸಂದರ್ಭ ಖಾಲಿ ಹೊಟ್ಟೆಯಲ್ಲಿರುತ್ತಾರೆ. ಹಾಗಾಗಿ ಊಟದ ವ್ಯವಸ್ಥೆ ಬೇಕೆಂದು ಮನವಿ ಮಾಡಿದರು.
ಕೊಡಗು ಏಕೀಕರಣ ರಂಗದ ಪ್ರಮುಖ ತೇಲಪಂಡ ಪ್ರಮೋದ್ ಮಾತನಾಡಿ, ಅನ್ನಸಂತರ್ಪಣೆ ವ್ಯವಸ್ಥೆಯನ್ನು ಕಲ್ಪಿಸಲು ಯಾವುದೇ ತೊಂದರೆ ಇಲ್ಲ. ನಿಯಾಮನುಸಾರ ಮಾಡುತ್ತೇವೆ ಎಂದು ತಿಳಿಸಿದರು. ಇದಕ್ಕೆ ಜಿಲ್ಲಾಡಳಿತ ತಕಾರರು ಎತ್ತಿದರೆ ಏನು ಮಾಡೋದು ಎಂಬ ಸ್ಥಳೀಯರ ಪ್ರಶ್ನೆಗೆ ಉತ್ತರಿಸಿದ ಕೆ.ಜಿ.ಬೋಪಯ್ಯ, ಈ ಬಗ್ಗೆ ಉಸ್ತುವಾರಿ ಸಚಿವರೊಂದಿಗೆ ಮಾತನಾಡುತ್ತೇನೆ. ಅವರು ಒಪ್ಪದಿದ್ದಲ್ಲಿ ಮುಖ್ಯಮಂತ್ರಿ ಗಮನ ಸೆಳೆಯುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದರು.
ಗೊಂದಲವಾಗದAತೆ ಎಚ್ಚರ ವಹಿಸಿ
ಯಾವುದೇ ಗೊಂದಲಗಳಿಗೆ ಎಡೆಮಾಡಿ ಕೊಡದೆ ವ್ಯವಸ್ಥಿತವಾಗಿ ಧಾರ್ಮಿಕ ಕಾರ್ಯ ನಡೆಯಬೇಕು ಎಂದು ಅಧಿಕಾರಿಗಳಿಗೆ ಕೆ.ಜಿ.ಬೋಪಯ್ಯ ಸೂಚಿಸಿದರು. ಶೌಚಾಲಯ, ಕುಡಿಯುವ ನೀರು ಸೌಲಭ್ಯ ಸಮರ್ಪಕವಾಗಿರಬೇಕು. ರಸ್ತೆ ಬದಿಯಲ್ಲಿರುವ ಮರದ ಕೊಂಬೆಗಳ ತೆರವು ಕಾರ್ಯ ಮಾಡಬೇಕು. ಪಾರ್ಕಿಂಗ್ ವ್ಯವಸ್ಥೆ ಕೈಗೊಳ್ಳಬೇಕು. ಗುಂಡಿ ಬಿದ್ದ ರಸ್ತೆಗಳನ್ನು ಮುಚ್ಚಬೇಕು. ವಿದ್ಯುತ್ ವ್ಯವಸ್ಥೆ ಇರಬೇಕು. ಕಸದ ಬುಟ್ಟಿಗಳನ್ನು ಅಲ್ಲಲ್ಲಿ ಇಡಬೇಕೆಂದು ಸೂಚಿಸಿದರು.
ಭಕ್ತಾದಿಗಳಿಗೆ ಯಾವುದೇ ಸಮಸ್ಯೆ ತಲೆದೋರಬಾರದು. ಎಚ್ಚರಿಕೆಯಿಂದ ಅಧಿಕಾರಿಗಳು ಕೆಲಸ ಮಾಡಬೇಕು ಎಂದ ಅವರು, ವ್ಯವಸ್ಥಾಪನ ಸಮಿತಿ ಇಲ್ಲದೆ ಮೊದಲ ಬಾರಿ ತೀರ್ಥೋದ್ಭವ ನಡೆಯುತ್ತಿರುವುದರಿಂದ ಗೊಂದಲಕ್ಕೆ ಆಸ್ಪದ ನೀಡಬಾರದು. ವ್ಯವಸ್ಥಿತವಾಗಿ ನಡೆಸುವ ಜವಾಬ್ದಾರಿ ಅಧಿಕಾರಿಗಳ ಕೈಯ್ಯಲ್ಲಿದೆ. ಕೋವಿಡ್ ನಿಯಮ ಉಲ್ಲಂಘನೆಯಾಗದ ರೀತಿಯಲ್ಲಿ ಎಚ್ಚರವಹಿಸಬೇಕೆಂದರು.
ಭಾಗಮಂಡಲ-ಮಡಿಕೇರಿ, ವೀರಾಜಪೇಟೆ-ಭಾಗಮಂಡಲ ರಸ್ತೆಯನ್ನು ತ್ವರಿತವಾಗಿ ಸರಿಪಡಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಕೆ.ಜಿ.ಬೋಪಯ್ಯ ಸೂಚಿಸಿದರು. ಪಿಡಬ್ಲೂö್ಯಡಿ ಅಧಿಕಾರಿ ಸಭೆಗೆ ತಡವಾಗಿ ಬಂದಿದಕ್ಕೆ ಸ್ಥಳೀಯರಿಂದ ಆಕ್ಷೇಪ ವ್ಯಕ್ತವಾಯಿತು. ಗ್ರಾಮ ಪಂಚಾಯ್ತಿಯ ಸಲಹೆಗಳನ್ನು ಅಧಿಕಾರಿಗಳು ಸ್ವೀಕರಿಸಿ ಮೂಲಭೂತ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಶೌಚಾಲಯ ವ್ಯವಸ್ಥೆ
ಭಾಗಮಂಡಲದಲ್ಲಿ ೮ ತಾತ್ಕಾಲಿಕ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಗ್ರಾ.ಪಂ ಉಪಾಧ್ಯಕ್ಷ ಹೊಸೂರು ಸತೀಶ್ ಕುಮಾರ್ ವಿವರಿಸಿದರು. ಹೆಚ್ಚುವರಿ ಟ್ಯಾಂಕ್ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ತಲಕಾವೇರಿಯಲ್ಲಿ ಅಗತ್ಯ ಶೌಚಾಲಯಗಳಿವೆ. ತಲಕಾವೇರಿಯಲ್ಲಿ ಪ್ರಾಕೃತಿಕ ವಿಕೋಪ ಸಂದರ್ಭ ಬೋರ್ವೆಲ್ ಕುಸಿದ ಹಿನ್ನೆಲೆ ಪರ್ಯಾಯ ವ್ಯವಸ್ಥೆ ಮಾಡಬೇಕಾಗಿದೆ. ಸದ್ಯಕ್ಕೆ ತೆರೆದ ಬಾವಿ ಇದ್ದು, ಅಲ್ಲಿಂದ ನೀರಿನ ವ್ಯವಸ್ಥೆ ಮಾಡಬಹುದು ಎಂದು ಗಮನ ಸೆಳೆದರು.
ಈ ಬಾರಿ ಅಂಗಡಿಗಳು ತೆರೆಯಲು ಟೆಂಡರ್ ಕರೆದಿಲ್ಲ. ಭಾಗಮಂಡಲ ರಸ್ತೆ ಹದಗೆಟ್ಟಿದ್ದು, ಕಾವೇರಿ ನೀರಾವರಿ ನಿಗಮದ ಮೂಲಕ ಇದನ್ನು ದುರಸ್ತಿಪಡಿಸಬೇಕು. ಬೀದಿ ದೀಪ ದುರಸ್ತಿ ಕಾರ್ಯ ನಡೆಯುತ್ತಿದೆ ಎಂದರು.
ನೆಗೆಟಿವ್ ವರದಿ ಕಡ್ಡಾಯವಲ್ಲ
ತೀರ್ಥೋದ್ಭವ ದರ್ಶನಕ್ಕೆ ನೆಗೆಟಿವ್ ವರದಿ ಕಡ್ಡಾಯವಲ್ಲ ಎಂದು ಶಾಸಕ ಕೆ.ಜಿ.ಬೋಪಯ್ಯ ಸ್ಪಷ್ಟಪಡಿಸಿದರು. ಮಾಸ್ಕ್ ಧರಿಸಿ, ನಿಯಮ ಪಾಲನೆ ಪ್ರತಿಯೊಬ್ಬರು ಮಾಡಬೇಕು ಎಂದರು. ತಾಲೂಕು ವೈದ್ಯಾಧಿಕಾರಿ ಡಾ.ಮಂಜುನಾಥ್ ಈ ಬಗ್ಗೆ ಮಾತನಾಡಿ, ೪ ಮೆಡಿಕಲ್ ತಂಡಗಳನ್ನು ರಚಿಸಲಾಗಿದೆ. ೪ ಕಡೆಗಳಲ್ಲಿ ಕೋವಿಡ್ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗುತ್ತದೆ. ತಾ. ೧೪ ರಂದು ಪತ್ರಕರ್ತರಿಗೆ, ದೇವಾಲಯಗಳ ಸಿಬ್ಬಂದಿಗಳಿಗೆ ಕೋವಿಡ್ ಪರೀಕ್ಷೆ ನಡೆಸಲಾಗುವುದು. ಸ್ವಯಂ ಸೇವಕರು ಬೇಕಾದರೂ ಪರೀಕ್ಷೆ ಮಾಡಿಸಿಕೊಳ್ಳಬಹುದು. ನೀರಿನ ಪರೀಕ್ಷೆಗೂ ಕ್ರಮವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಬಗ್ಗೆ ಮಾತನಾಡಿದ ಶಾಸಕ ಬೋಪಯ್ಯ, ಸ್ವಯಂ ಸೇವಕರಿಗೆ ವ್ಯವಸ್ಥೆ ಇದ್ದಲ್ಲಿ ಸ್ಥಳೀಯ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಿ. ಜೊತೆಗೆ ಕೇಶಮುಂಡನ ಮಾಡುವವರಿಗೆ ಪರೀಕ್ಷೆ ನಡೆಸಬೇಕು. ಥರ್ಮಲ್ ಸ್ಕಾö್ಯನಿಂಗ್ ವ್ಯವಸ್ಥೆ ಇರಬೇಕು. ಕೊಡಗು ಕೇರಳ ಗಡಿ ಹಂಚಿಕೊAಡಿರುವುದರಿAದ ಬಿಗಿನಿಯಮ ಅನಿವಾರ್ಯ ಎಂದರು.
೬ ಗಂಟೆ ಮೇಲೆ ದರ್ಶನವಿಲ್ಲ
ಸಾಂಪ್ರದಾಯಿಕ ಹಿನ್ನೆಲೆಯಲ್ಲಿ ೬ ಗಂಟೆಯ ಮೇಲೆ ತಲಕಾವೇರಿ ಕ್ಷೇತ್ರಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ಕೆ.ಜಿ.ಬೋಪಯ್ಯ ಹೇಳಿದರು. ತೀರ್ಥೋದ್ಭವ ನಂತರ ತೀರ್ಥ ವಿತರಣೆಗೆ ೩೫ ಸ್ವಯಂ ಸೇವಕರು ಇರುತ್ತಾರೆ. ಅವರ ಮೂಲಕ ವಿತರಣೆ ನಡೆಯಲಿದೆ. ಬೇರೆ ಕಡೆಗಳಿಗೆ ತೀರ್ಥ ಹಂಚಿಕೆ ಮಾಡುವ ಉದ್ದೇಶದಿಂದ ಬರುವ ವಾಹನವನ್ನು ನಿಗದಿತ ಕಾಲಮಿತಿಗೆ ಬಂದು ತೀರ್ಥ ಪಡೆದುಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ತಲಕಾವೇರಿಯ ಕುಂಡಿಕೆ ಮುಂಭಾಗದ ಕೊಳಕ್ಕೆ ಇಳಿಯಲು ಭಕ್ತಾಧಿಗಳಿಗೆ ಪ್ರವೇಶವಿಲ್ಲ. ಭಾಗಮಂಡಲದ ತ್ರಿವೇಣಿ ಸಂಗಮಕ್ಕೆ ಇಳಿಯಲು ಅವಕಾಶವಿದೆ ಎಂದು ಬೋಪಯ್ಯ ಮಾಹಿತಿ ನೀಡಿದರು.
ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ
ಸದ್ಯಕ್ಕೆ ೧೫೦ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಹೆಚ್ಚುವರಿ ವಾಹನ ನಿಲುಗಡೆಗೆ ಕ್ರಮವಹಿಸಲಾಗುವುದು ಎಂದು ಮಡಿಕೇರಿ ಡಿ.ವೈ.ಎಸ್.ಪಿ. ಗಜೇಂದ್ರ ಪ್ರಸಾದ್ ತಿಳಿಸಿದರು. ವಾಹನ ದಟ್ಟಣೆ, ಅಪರಾಧ ತಡೆಯಲು ಕ್ರಮವಹಿಸಲಾಗುವುದು. ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು. ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಮುತುವರ್ಜಿ ವಹಿಸಲಾಗುವುದು ಎಂದರು.
ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಮಡಿಕೇರಿ, ವೀರಾಜಪೇಟೆ ಮೂಲಕ ರಸ್ತೆಯಲ್ಲದೆ ತಣ್ಣಿಮಾನಿಯ ಪಾಂಡಿಬಾಣೆ ರಸ್ತೆಯನ್ನು ಬಳಕೆ ಮಾಡಿಕೊಂಡು ವಾಹನ ದಟ್ಟಣೆ ನಿಯಂತ್ರಿಸಬೇಕು. ಪರಿಸ್ಥಿತಿಯನ್ನು ಅವಲೋಕಿಸಿ ತೀರ್ಥೋದ್ಭವದಂದು ಪೊಲೀಸ್ ಇಲಾಖೆ ನಿರ್ಧಾರ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದ ಅವರು, ವಿಶೇಷ ಬಸ್ ವ್ಯವಸ್ಥೆ ಇರುವುದಿಲ್ಲ ಎಂದು ಹೇಳಿದರು.
ಸ್ವಯಂ ಸೇವಕ ಸೂರಜ್ ಮಾತನಾಡಿ, ಮೋಜು ಮಸ್ತಿಗೆಂದು ಬರುವ ಪ್ರವಾಸಿಗರ ಕಡಿವಾಣಕ್ಕೆ ಪೊಲೀಸರು ಕ್ರಮಕೈಗೊಳ್ಳಬೇಕು. ವಸ್ತç ಸಂಹಿತೆಯನ್ನು ಕಠಿಣವಾಗಿ ಜಾರಿ ಮಾಡಬೇಕು. ಮದ್ಯ ಸೇವಿಸಿ ಬರುವವರಿಗೆ ಪ್ರವೇಶ ನಿರ್ಬಂಧಿಸಬೇಕು. ವಾಹನ ಪರಿಶೀಲನೆ ನಡೆಸಬೇಕು ತಲಕಾವೇರಿ ಸೇರಿದಂತೆ ಕೊಡಗಿನ ಧಾರ್ಮಿಕ ಕೇಂದ್ರಗಳು ಪ್ರವಾಸಿ ತಾಣಗಳ ಪಟ್ಟಿಯಲ್ಲಿದ್ದು, ಅದನ್ನು ಕೈ ಬಿಡಬೇಕೆಂದು ಗಮನ ಸೆಳೆದರು.
ಪ್ರವಾಸಿಗರು ಮಾಂಸಾಹಾರ, ಮದ್ಯ ಸೇವಿಸಿ ಬರುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ ಎಂದು ಬೋಪಯ್ಯ ಹೇಳಿದರು. ಈ ಹಿಂದೆ ವಾರಾಂತ್ಯದಲ್ಲಿ ಡಿ.ಎ.ಆರ್. ತುಕಡಿಯನ್ನು ನಿಯೋಜಿಸಲು ಸೂಚಿಸಿದ್ದೆ. ಆದರೆ, ಅದು ಕಾರ್ಯಗತವಾಗಿಲ್ಲ. ಇದರಿಂದ ಪ್ರವಾಸಿಗರಿಗೆ ಬಿಸಿ ಮುಟ್ಟುತ್ತದೆ. ಧಾರ್ಮಿಕ ಕ್ಷೇತ್ರವನ್ನು ಪ್ರವಾಸಿ ತಾಣ ಪಟ್ಟಿಯಿಂದ ಕೈ ಬಿಡಲು ಕ್ರಮ ವಹಿಸಲಾಗುವುದು ಎಂದರು. ಆತಿಥ್ಯ ಕೇಂದ್ರದಲ್ಲಿ ಉಳಿಯುವವರಿಗೆ ಅಲ್ಲಿನ ಮಾಲೀಕರು ಇಲ್ಲಿನ ನೀತಿ ನಿಯಮಗಳನ್ನು ತಿಳಿ ಹೇಳಬೇಕು. ವಸ್ತçಸಂಹಿತೆಯ ಬಗ್ಗೆ, ಪರಿಶುದ್ಧವಾಗಿ ಬರುವಂತೆ ತಿಳಿಸಬೇಕು. ಇಲ್ಲಿನ ವಿಧಿವಿಧಾನವನ್ನು ವಿವರಿಸಿ ಕ್ರಮಗಳ ಬಗ್ಗೆ ಮಾಹಿತಿ ನೀಡಿದರೆ ಉತ್ತಮ ಎಂದರು.
ಸಭೆಗೆ ಆಹ್ವಾನವಿಲ್ಲದ ಬಗ್ಗೆ ಆಕ್ಷೇಪ
ಶಾಸಕರ ಅಧ್ಯಕ್ಷತೆಯ ಸಭೆಗೆ ಆಹ್ವಾನವಿಲ್ಲದ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದರು. ಈ ರೀತಿ ತಪ್ಪು ಆಗದಂತೆ ಎಚ್ಚರವಹಿಸಬೇಕೆಂದು ಅಧಿಕಾರಿಗಳಿಗೆ ಸಲಹೆ ನೀಡಿದರು. ತಲಕಾವೇರಿ-ಭಾಗಮಂಡಲ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಮನುಮುತ್ತಪ್ಪ, ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ, ಫೆಡರೇಷನ್ ಆಫ್ ಕೊಡವ ಸಮಾಜದ ಅಧ್ಯಕ್ಷರು ಸೇರಿದಂತೆ ಇನ್ನೂ ಅನೇಕ ಸಂಘಟನೆ ಪ್ರಮುಖರಿಗೆ ಆಹ್ವಾನ ಕಳುಹಿಸಿಲ್ಲದ ಬಗ್ಗೆ ಪ್ರಸ್ತಾಪವಾಯಿತು.
ಮನು ಮುತ್ತಪ್ಪ ಮಾತನಾಡಿ, ಸಂಘಟನೆಗಳ ಪ್ರಮುಖರಿಗೆ ಆಹ್ವಾನ ತಲುಪಿಸಬೇಕು. ನನಗೂ ಈ ಬಗ್ಗೆ ತಿಳಿದು ಬಂದಿಲ್ಲ. ಇದು ತನಗೆ ಬೇಸರ ಮೂಡಿಸಿತು ಎಂದರು. ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಮಾತನಾಡಿ, ಭಕ್ತಾದಿಗಳು ನಿಯಮಗಳನ್ನು ಪಾಲಿಸಬೇಕು. ಪ್ರತಿಯೊಬ್ಬರು ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ರಾಜ್ಯ ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ, ಮೂಡ ಅಧ್ಯಕ್ಷ ರಮೇಶ್ ಹೊಳ್ಳ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಶಾಹಿನ ಬಾನು, ಜಿ.ಪಂ. ಉಪನಿರ್ದೇಶಕಿ ಲಕ್ಷಿö್ಮ, ಮಡಿಕೇರಿ ತಾಲೂಕು ತಹಶೀಲ್ದಾರ್ ಮಹೇಶ್, ಗ್ರಾ.ಪಂ. ಅಧ್ಯಕ್ಷೆ ಪಮಿತ, ತಲಕಾವೇರಿ ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ, ಭಾಗಮಂಡಲ ಭಗಂಡೇಶ್ವರ ದೇವಾಲಯದ ತಕ್ಕರು ಬಳ್ಳಡ್ಕ ಅಪ್ಪಾಜಿ, ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ, ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಅಧ್ಯಕ್ಷ ಗಿರೀಶ್ ಗಣಪತಿ ಸೇರಿದಂತೆ ಗ್ರಾ.ಪಂ. ಸದಸ್ಯರು, ಗ್ರಾಮದ ಪ್ರಮುಖರು, ಜಿಲ್ಲೆಯ ವಿವಿಧ ಸಂಘಟನೆ ಪ್ರಮುಖರು ಹಾಜರಿದ್ದರು.