ಗೋಣಿಕೊಪ್ಪ ವರದಿ, ಅ. ೭: ಗಿರಿಜನರ ಹಾಡಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ನಿರ್ಲಕ್ಷö್ಯ, ಗಿರಿಜನರಿಗೆ ಮನೆ ನಿರ್ಮಾಣದ ಬಗ್ಗೆ ಮಾಹಿತಿ ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಒತ್ತಾಯಿಸಿ ತಿತಿಮತಿ ಗ್ರಾಮ ಪಂಚಾಯಿತಿ ಎದುರು ತಾ.೧೧ ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಕಾಂಗ್ರೆಸ್ ಎಸ್ಟಿ ಘಟಕ ಅಧ್ಯಕ್ಷೆ ಪಿ. ಆರ್. ಪಂಕಜ ತಿಳಿಸಿದ್ದಾರೆ.

ಬುಡಕಟ್ಟು ಕೃಷಿಕರ ಸಂಘ, ದಲಿತ ಸಂಘರ್ಷ ಸಮಿತಿ, ಪ್ರಗತಿಪರ ಹೋರಾಟ ಸಮಿತಿ ಸಹಯೋಗದಲ್ಲಿ ಅಂದು ಪ್ರತಿಭಟನೆ ಮೆರವಣಿಗೆ ಮೂಲಕ ಪಂಚಾಯಿತಿ ಎದುರು ಸೇರಿ ಪ್ರತಿಭಟನೆ ನಡೆಸಲಾಗುವುದು. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಬರುವಂತೆ ಒತ್ತಾಯಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಾಡಿಗಳಿಗೆ ರಸ್ತೆ, ವಿದ್ಯುತ್, ಮನೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ನಿರಂತರ ಅಡ್ಡಿ ಮಾಡುತ್ತಿದೆ. ಈ ಬಗ್ಗೆ ಅಧಿಕಾರಿಗಳು ಆದಿವಾಸಿಗಳ ಪರವಾಗಿ ನಿಲ್ಲುತ್ತಿಲ್ಲ. ಹಕ್ಕುಪತ್ರದಿಂದ ಯಾವ ಪ್ರಯೋಜನವೂ ಆಗುತ್ತಿಲ್ಲ. ಸುಮಾರು ೭೦೦ ಮನೆ ಆದಿವಾಸಿಗಳಿಗೆ ನಿರ್ಮಿಸಲಾಗಿದೆ ಎಂದು ಶಾಸಕ ಕೆ. ಜಿ. ಬೋಪಯ್ಯ ಹೇಳಿಕೆ ನೀಡಿದ್ದಾರೆ. ಎಲ್ಲಿ ಮನೆ ನಿರ್ಮಿಸಲಾಗಿದೆ ಎಂಬುದು ಗಿರಿಜನರಿಗೆ ಮಾಹಿತಿ ಇಲ್ಲ. ಈ ಬಗ್ಗೆ ತಕ್ಷಣ ಮಾಹಿತಿ ನೀಡಬೇಕು ಎಂದು ಒತ್ತಾಯಿಸಲಾಗುವುದು ಎಂದರು.

ದಲಿತ ಸಂಘರ್ಷ ಸಮಿತಿ ಸಂಚಾಲಕ ಶಿವಕುಮಾರ್ ಮಾತನಾಡಿ, ಜಲಜೀವನ್ ಮಿಷನ್ ಯೋಜನೆ ಬಗ್ಗೆ ತಿತಿಮತಿ ಗ್ರಾಮ ಪಂಚಾಯಿತಿಗೆ ಸರಿಯಾದ ಮಾಹಿತಿ ಇಲ್ಲ. ಇದರಿಂದ ಸಾರ್ವಜನಿಕರು ಕೂಡ ಗೊಂದಲದಲ್ಲಿದ್ದು, ನಲ್ಲಿ ನೀರು ಒದಗಿಸಲು ಸರ್ಕಾರದ ಸರಿಯಾದ ಕ್ರಮ ಅಳವಡಿಸಬೇಕು ಎಂದು ಒತ್ತಾಯಿಸಿದರು.

ಗಿರಿಜನರಿಗೆ ಮನೆ ನಿರ್ಮಿಸಿರುವ ಬಗ್ಗೆ ಸ್ಪಷ್ಟ ಮಾಹಿತಿ ಶಾಸಕರು ನೀಡಬೇಕು ಎಂದು ಲ್ಯಾಂಪ್ಸ್ ಸೊಸೈಟಿ ನಿರ್ದೇಶಕ ಪಿ. ಕೆ. ಸಿದ್ದಪ್ಪ ಒತ್ತಾಯಿಸಿದರು.

ಗೋಷ್ಠಿಯಲ್ಲಿ ಸ್ಥಳೀಯರಾದ ರವಿನಾ, ಪಿ.ಸಿ. ರಾಮು ಇದ್ದರು.