ಸಿದ್ದಾಪುರ, ಅ. ೭: ನೆಲ್ಯಹುದಿಕೇರಿಯ ಸಹಾಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಂತ್ರಸ್ತರ ಕುಟುಂಬಗಳಿಗೆ ಮನೆ ಹಾಗೂ ನಿವೇಶನಗಳನ್ನು ಹಸ್ತಾಂತರಿಸಲಾಯಿತು. ೨೦೧೯ ರಲ್ಲಿ ಮಹಾಮಳೆಗೆ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ಪ್ರವಾಹಕ್ಕೆ ಸಿಲುಕಿ ನೆಲ್ಯಹುದಿಕೇರಿ ಪಂಚಾಯಿತಿ ವ್ಯಾಪ್ತಿಯ ನದಿ ತೀರದ ನೂರಾರು ಮನೆಗಳು ನೆಲಸಮಗೊಂಡಿತ್ತು. ಈ ಹಿನ್ನೆಲೆಯಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ಇದನ್ನು ಅರಿತ ನೆಲ್ಯಹುದಿಕೇರಿಯ ಮುಸ್ಲಿಂ ಜಮಾಅತ್ ಸಮಿತಿಯ ಮೂಲಕ ಸಹಾಯ ಚಾರಿಟೇಬಲ್ ಟ್ರಸ್ಟ್ ಒಂದನ್ನು ರಚಿಸಿದ್ದು, ಈ ಟ್ರಸ್ಟ್ ವತಿಯಿಂದ ದಾನಿಗಳ ಹಾಗೂ ದೇಣಿಗೆ ನೀಡುವವರ ಮೂಲಕ ನೆಲ್ಯಹುದಿಕೇರಿಯ ಬೆಟ್ಟದಕಾಡು ಭಾಗದಲ್ಲಿ ಎರಡೂವರೆ ಎಕರೆ ಜಾಗವನ್ನು ಖರೀದಿಸಿ ಈ ಜಾಗದಲ್ಲಿ ನಿರ್ಮಾಣ ಮಾಡಿರುವ ೧೫ ಮನೆಗಳನ್ನು

(ಮೊದಲ ಪುಟದಿಂದ) ಹಾಗೂ ೩೯ ನಿವೇಶನಗಳನ್ನು ಮೊದಲ ಹಂತದಲ್ಲಿ ಸಂತ್ರಸ್ತರಿಗೆ ಹಸ್ತಾಂತರಿಸಲಾಯಿತು.

ಕಾರ್ಯಕ್ರಮವನ್ನು ಪಾಣಕ್ಕಾಡ್ ಸಯ್ಯದ್ ಮುನವ್ವರ್ ಆಲಿ ಶಿಹಾಬ್ ತಂಙಳ್ ನೆರವೇರಿಸಿದರು. ಮನೆಗಳ ಹಸ್ತಾಂತರ ಮಾಡಿದ ಜಾಗದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡಿದರು. ನಂತರ ನೆಲ್ಯಹುದಿಕೇರಿಯ ಶಾದಿ ಮಹಲ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕಿರಿಕೊಡ್ಲಿ ಮಠ ಕೊಡ್ಲಿಪೇಟೆ ಸದಾಶಿವ ಸ್ವಾಮಿ ಮಾತನಾಡಿ ಸಹಾಯ ಚಾರಿಟೇಬಲ್ ಟ್ರಸ್ಟ್ ಜಾತಿ ಧರ್ಮ ಬಿಟ್ಟು ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮಾನವೀಯತೆಯ ದೃಷ್ಟಿಯಿಂದ ಮನೆ ನಿರ್ಮಾಣ ಮಾಡಿಕೊಟ್ಟಿರುವುದು ಉತ್ತಮ ಕಾರ್ಯ ಎಂದರು. ಜಾತಿ ಧರ್ಮವನ್ನು ಬಿಟ್ಟು ಸ್ಪಂದಿಸುವುದೇ ಮಾನವೀಯತೆ ಧರ್ಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮನುಷ್ಯನಿಗೆ ಆಹಾರ, ವಸತಿ, ಬಟ್ಟೆ, ಶಿಕ್ಷಣ, ಆರೋಗ್ಯ ಅದರೊಂದಿಗೆ ಮನೆಯು ಕೂಡಾ ಮುಖ್ಯ ಎಂದರು. ಅಸಹಾಯಕರಿಗೆ ಸಹಾಯ ಮಾಡುವುದು ದೇವರ ಕೆಲಸ ಎಂದು ತಿಳಿಸಿದರು.

ಸಿದ್ದಾಪುರ ಸೆಂಟ್ ಮೇರಿಸ್ ಚರ್ಚ್ನ ಧರ್ಮಗುರು ಫಾ. ಸಬಾಸ್ಟಿನ್ ಚಾಲಕಹಳ್ಳಿ ಮಾತನಾಡಿ ಮನುಷ್ಯನಿಗೆ ಅತ್ಯವಶ್ಯಕವಾಗಿ ಮನೆ ಮುಖ್ಯವಾಗಿದೆ ಎಂದರು. ೨೦೧೮-೧೯ ರ ಸಾಲಿನಲ್ಲಿ ಪ್ರಳಯಕ್ಕೆ ಸಿಲುಕಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸಹಾಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮನೆ ನಿರ್ಮಾಣ ಮಾಡಿಕೊಟ್ಟಿರುವುದು ಉತ್ತಮ ಕಾರ್ಯ ಎಂದರು. ಕಾಂಗ್ರೆಸ್ ಮುಖಂಡ ವಿ.ಪಿ ಶಶಿಧರ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಸಹಾಯಹಸ್ತವನ್ನು ಚಾಚುವವರ ಸಂಖ್ಯೆ ಕಡಿಮೆಯಾಗಿರುವಂತಹ ಸಂದರ್ಭದಲ್ಲಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉತ್ತಮ ಕಾರ್ಯ ಮಾಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸರ್ಕಾರಗಳು ಮಾಡದ ಕೆಲಸಗಳನ್ನು ಜಿಲ್ಲೆಯಲ್ಲಿ ಪ್ರಳಯ ಸಂದರ್ಭದಲ್ಲಿ ಮನೆ ಕಳೆದುಕೊಂಡವರಿಗೆ ಹಲವಾರು ಸಂಘಟನೆಗಳು ಸಹಾಯದ ಹಸ್ತ ಚಾಚಿ ಮನೆ ನಿರ್ಮಾಣ ಮಾಡಿಕೊಟ್ಟಿದೆ. ಎಸ್.ಎನ್.ಡಿ.ಪಿ ಯೂನಿಯನ್‌ನ ಜಿಲ್ಲಾಧ್ಯಕ್ಷ ವಿ.ಕೆ. ಲೋಕೇಶ್ ಮಾತನಾಡಿ ೨೦೧೮ ಹಾಗೂ ೨೦೧೯ ರ ಸಾಲಿನಲ್ಲಿ ಜಿಲ್ಲೆಯಲ್ಲಿ ಪ್ರಳಯಕ್ಕೆ ಸಿಲುಕಿ ಮರೆಯಲಾಗದಷ್ಟು ಘಟನೆಗಳು ನಡೆದು ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡು ಜನರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ಹಲವಾರು ಮಂದಿ ತಮ್ಮ ಕನಸಿನ ಮನೆಗಳನ್ನು ಕಳೆದುಕೊಂಡು ಪರಿತಪಿಸಿದರು. ಜನಪ್ರತಿನಿಧಿಗಳ ಮುಂದೆ ಗೋಗರೆದರೂ ಇನ್ನಷ್ಟು ಮಂದಿ ಪುನರ್ವಸತಿಗಾಗಿ ಕಾಯುತ್ತಿದ್ದ ಈ ಸಂದರ್ಭದಲ್ಲಿ ಟ್ರಸ್ಟ್ ವತಿಯಿಂದ ಮನೆಗಳನ್ನು ನೀಡಿರುವುದು ಉತ್ತಮ ಕಾರ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಮಿಕ ಮುಖಂಡ ಪಿ.ಆರ್. ಭರತ್ ಮಾತನಾಡಿ ಸರ್ಕಾರಗಳು ಮಾಡದ ಕೆಲಸವನ್ನು ನೆಲ್ಯಹುದಿಕೇರಿಯ ಜುಮ್ಮಾ ಮಸೀದಿಯ ವತಿಯಿಂದ ರಚನೆಗೊಂಡಿರುವ ಸಹಾಯ ಚಾರಿಟೇಬಲ್ ಟ್ರಸ್ಟ್ ಮಾಡಿರುವುದು ಶ್ಲಾಘನೀಯ ಎಂದರು.

ಮುಖ್ಯ ಭಾಷಣಕಾರರಾಗಿ ಅಖಿಲ ಭಾರತ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಮತ್ತು ಮುಖ್ಯ ಇಮಾಮರು ಚಾಲ ಜುಮ್ಮ ಮಸ್ಜಿದ್ ಮುಖ್ಯಸ್ಥರಾದ ಮೌಲಾನ ಅಬ್ದುಲ್ ಶುಕೂರ್ ಹಸನಿ ಆಲ್-ಖಾಸಿಮಿ ಮಾತನಾಡಿ ಈಗಾಗಲೇ ಸಹಾಯ ಟ್ರಸ್ಟ್ ವತಿಯಿಂದ ಸಂತ್ರಸ್ತರಿಗೆ ನೀಡಿರುವ ಮನೆಯ ಕುಟುಂಬಸ್ಥರು ಮನೆಯ ಸುತ್ತಮುತ್ತಲಿನಲ್ಲಿ ಪರಸ್ಪರ ಅನ್ಯೋನ್ಯವಾಗಿ ಸೌಹಾರ್ದತೆಯಿಂದ ಸಹಬಾಳ್ವೆ ಜೀವನ ನಡೆಸಬೇಕೆಂದು ಸಲಹೆ ನೀಡಿದರು. ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಬೇಕೆಂದು ಕಿವಿಮಾತು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಾಯ ಟ್ರಸ್ಟ್ನ ಅಧ್ಯಕ್ಷ ಎ.ಕೆ. ಅಬ್ದುಲ್ಲಾ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ, ನೆಲ್ಯಹುದಿಕೇರಿ ಗ್ರಾ.ಪಂ. ಅಧ್ಯಕ್ಷ ಸಾಬೂ ವರ್ಗೀಸ್, ಪಿಡಿಓ ಅನಿಲ್ ಕುಮಾರ್, ಕೇರಳದ ಪಡನ್ನ ಗ್ರಾ.ಪಂ. ಅಧ್ಯಕ್ಷ ಪಿ.ವಿ. ಮೊಹಮ್ಮದ್ ಅಸ್ಲಾಂ, ಸಹಾಯ ಚಾರಿಟೇಬಲ್ ಟ್ರಸ್ಟ್ನ ಗೌರವ ಅಧ್ಯಕ್ಷÀ ಅಬ್ದುಲ್ ನಜೀರ್ ಹಾಜಿ, ಕಾರ್ಯದರ್ಶಿ ಮಣಿ ಮೊಹಮ್ಮದ್ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಧಾರ್ಮಿಕ ಪಂಡಿತರು ಹಾಗೂ ಇನ್ನಿತರರು ಹಾಜರಿದ್ದರು. ಎ.ಕೆ. ಹಕ್ಕೀಂ ಸ್ವಾಗತಿಸಿ, ಎ.ಎ. ಅಬ್ದುಲ್ಲಾ ನಿರೂಪಿಸಿ, ಇಕ್ಬಾಲ್ ವಂದಿಸಿದರು. -ಚಿತ್ರ ವರದಿ: ವಾಸು ಎ.ಎನ್