ಮಡಿಕೇರಿ, ಅ. ೭: ಕೇವಲ ಗ್ರಾಮ ಲೆಕ್ಕಿಗರ ಹುದ್ದೆ ಮಾತ್ರವಲ್ಲ., ಸರಕಾರೀ ಉದ್ಯೋಗ ಸೇರಿದಂತೆ ಪೊಲೀಸ್ ಉಪ ನಿರೀಕ್ಷಕರ ಹುದ್ದೆ ಮಾಡಿಕೊಡಲೂ ಕೂಡ ಈ ವಂಚಕರ ಜಾಲ ಬಲೆ ಹೆಣೆದಿರುವದು ಇದೀಗ ಬೆಳಕಿಗೆ ಬಂದಿದೆ. ಉದ್ಯೋಗ ಕೊಡಿಸುವ ನೆಪದಲ್ಲಿ ನಕಲಿ ನೇಮಕಾತಿ ಪತ್ರ ಸೃಷ್ಟಿಸಿ ಉದ್ಯೋಗಾಕಾಂಕ್ಷಿಗಳಿAದ ಹಣ ಲಪಟಾಯಿಸಿದ ವಂಚಕರ ಜಾಲ ಪೊಲೀಸ್ ಅಧಿಕಾರಿ ಹುದ್ದೆ ಕೊಡಿಸುವದಾಗಿ ವ್ಯಕಿಯೋರ್ವರಿಂದ ರೂ.೨೨ ಲಕ್ಷ ಲಪಟಾಯಿಸಿರುವದು ಸೇರಿದಂತೆ ಇನ್ನಷ್ಟು ಮಹತ್ವದ ವಿಚಾರಗಳು ಬಹಿರಂಗಗೊAಡಿವೆ..!

ಗ್ರಾಮ ಲೆಕ್ಕಿಗರ ಹುದ್ದೆಗೆ ನೇಮಿಸಲು ಮತ್ತು ಸಿಂಧುತ್ವ ಪ್ರಮಾಣ ಪತ್ರ ನೀಡಲು ಜಿಲ್ಲಾಡಳಿತದ ಲಾಂಛನದೊAದಿಗೆ ಜಿಲ್ಲಾಧಿಕಾರಿಗಳು ಪತ್ರ ಕಳುಹಿಸಿದಂತೆ ನಕಲಿ ಪತ್ರ ಕಳುಹಿಸಿ ಹಣದ ಬೇಡಿಕೆಯಿಟ್ಟಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಜಿಲ್ಲಾ ಅಪರಾಧ ಪತ್ತೆ ದಳದವರು ಈಗಾಗಲೇ ಮೂವರನ್ನು ಬಂಧಿಸಿದ್ದು,

(ಮೊದಲ ಪುಟದಿಂದ) ಇದೀಗ ವಂಚಕರ ಜಾಲದ ಪ್ರಮುಖ ರೂವಾರಿಯಾಗಿರುವ, ತಲೆಮರೆಸಿಕೊಂಡಿದ್ದ ಪುತ್ತೂರು ತಾಲೂಕಿನ ಕಾಣಿಯೂರು ಗ್ರಾಮದ ಬಂಡಾಜೆ ಮನೆ ಪುನಿತ್‌ಕುಮಾರ್(೩೨) ಹಾಗೂ ಆತನೊಂದಿಗಿದ್ದ ಮೈಸೂರು ಜಿಲ್ಲೆಯ ಗಾಯತ್ರಿಪುರ, ಜ್ಯೋತಿನಗರದ ಅರುಣ್ ಕುಮಾರ್(ಮಾರ-೩೦) ಎಂಬಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಿಲ್ಲಾಡಳಿತದ ಲಾಂಛನವನ್ನು ಮುದ್ರಿಸಿ ಜಿಲ್ಲಾಧಿಕಾರಿಗಳ ಸಹಿಯನ್ನು ನಕಲು ಮಾಡಿ ಜಿಲ್ಲಾಧಿಕಾರಿಗಳು ನೇಮಕಾತಿ ಪತ್ರ ಕಳುಹಿಸಿದಂತೆ ನಂಜರಾಯಪಟ್ಟಣದ ಕೆ.ಎಂ.ಯಶ್ವಿತಾ ಎಂಬವರಿಗೆ ಅಂಚೆ ಮೂಲಕ ನಕಲಿ ನೇಮಕಾತಿ ಪತ್ರ ಕಳುಹಿಸಿದಲ್ಲದೆ ಆಕೆಗೆ ಕರೆ ಮಾಡಿ ರೂ.೧.೫೦ ಲಕ್ಷ ಹಣದ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಯಶ್ವಿತಾ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸಾರ್ವಜನಿಕ ಪ್ರಕಟಣೆ ಹೊರಡಿಸಿ ಎಚ್ಚರಿಕೆಯ ಸಂದೇಶವನ್ನು ನೀಡಿದ್ದರು. ಈ ಸಂಬAಧ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಶಿರಸ್ತೆದಾರ್ ಪ್ರಕಾಶ್ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾ ಅಪರಾಧ ಪತ್ತೆ ದಳದವರಿಗೆ ಸೂಚನೆ ಬಂದ ಹಿನ್ನೆಲೆಯಲ್ಲಿ ಅಪರಾಧ ಪತ್ತೆ ದಳದವರು ಚಂದ್ರಶೇಖರ್, ರಾಜಮಣಿ (ಲೋಕೇಶ್) ಹಾಗೂ ಗಣಪತಿ (ಶಭರೀಶ) ಎಂಬವರುಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೊಪ್ಪಿಸಿದ್ದರು. ವಂಚಕರ ಜಾಲದ ಪ್ರಮುಖ ರೂವಾರಿ ತಲೆಮರೆಸಿಕೊಂಡಿದ್ದ.

ಎಸ್‌ಐ ಕೆಲಸದ ಆಮಿಷ..!

ಈ ಪ್ರಕರಣದ ಬಗ್ಗೆ ತನಿಖೆ ಮುಂದುವರಿಯುತ್ತಿರುವಾಗಲೇ ಮತ್ತೊಂದು ದೊಡ್ಡ ವಂಚನೆಯ ಜಾಲ ಬೆಳಕಿಗೆ ಬಂದಿದೆ. ಮಡಿಕೇರಿ ನಿವಾಸಿಯೋರ್ವರ ಪುತ್ರನಿಗೆ ಪೊಲೀಸ್ ಉಪ ನಿರೀಕ್ಷಕರ ಹುದ್ದೆ ಕೊಡಿಸುವದಾಗಿ ನಕಲಿ ನೇಮಕಾತಿ ಪತ್ರ ನೀಡಿ ಲಕ್ಷಾಂತರ ರೂಪಾಯಿ ವಂಚಿಸಿರುವ ಬಗ್ಗೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ವಾರದ ಹಿಂದೆ ದೂರೊಂದು ದಾಖಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ನಗರ ಪೊಲೀಸರು ತನಿಖೆಗಾಗಿ ಸಿಐಡಿ ಬೆಂಗಳೂರು ಘಟಕಕ್ಕೆ ವರ್ಗಾವಣೆಯಾಗಿ ತನಿಖೆ ಪ್ರಗತಿಯಲ್ಲಿತ್ತು.

ಇದರೊಂದಿಗೆ ಜಿಲ್ಲಾ ಅಪರಾಧ ಪತ್ತೆ ದಳದವರು ಕೂಡ ತನಿಖೆ ಮುಂದುವರಿಸಿದ್ದರು. ದೊರೆತ ಮಾಹಿತಿಯನ್ನಾಧರಿಸಿ ಇಂದು ಪುನಿತ್‌ಕುಮಾರ್ ಹಾಗೂ ಅರುಣ್‌ಕುಮಾರ್ ಎಂಬವರುಗಳನ್ನು ಮಡಿಕೇರಿಯಲ್ಲಿ ಬಂಧಿಸಿದ್ದಾರೆ.

ನಗ-ನಗದು ವಶ

ಬಂಧಿತನಾಗಿರುವ ಪುನಿತ್‌ಕುಮಾರ್ ಈ ವಂಚಕರ ಜಾಲದ ಪ್ರಮುಖ ರೂವಾರಿಯಾಗಿದ್ದು, ಇದೇ ರೀತಿ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವದಾಗಿ ವಿಚಾರಣೆ ವೇಳೆ ತಿಳಿದು ಬಂದಿದೆ. ಬಂಧಿತ ಪುನಿತ್‌ನಿಂದ ರೂ.೫.೫೦ಲಕ್ಷ ಹಣ ಹಾಗೂ ರೂ.೩ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸ್ ಕೆಲಸಕ್ಕೆ ೨೨ ಲಕ್ಷ..!

ಮಡಿಕೇರಿಯಲ್ಲಿ ಪುಟ್ಟ ಕ್ಯಾಂಟಿನ್ ನಡೆಸುತ್ತಿರುವ ವ್ಯಾಪಾರಿಯೋರ್ವರ ಪುತ್ರನಿಗೆ ಪೊಲೀಸ್ ಉಪ ನಿರೀಕ್ಷಕರ ಹುದ್ದೆ ಕೊಡಿಸುವದಾಗಿ ನಂಬಿಸಿ, ನಕಲಿ ನೇಮಕಾತಿ ಪತ್ರ ತೋರಿಸಿ ಬರೋಬ್ಬರಿ ರೂ.೨೨ ಲಕ್ಷ ಹಣವನ್ನು ಈ ನಯವಂಚಕರು ದೋಚಿದ್ದಾರೆ. ರೂ.೨೫ ಲಕ್ಷಕ್ಕೆ ಬೇಡಿಕೆಯಿಟ್ಟಿದ್ದು, ಇದರಲ್ಲಿ ವ್ಯಾಪಾರಿ ೨೨ಲಕ್ಷ ಹಣ ನೀಡಿದ್ದು, ನಂತರದಲ್ಲಿ ಇದು ವಂಚನೆಯ ಜಾಲವೆಂದು ತಿಳಿದ ಬಳಿಕ ಪೊಲೀಸ್ ದೂರು ನೀಡಿದ್ದಾರೆ.

ಎಲ್ಲ ರೀತಿಯ ಕೆಲಸ..!

ವಂಚನೆಯ ಜಾಲ ಕೊಡಗು ಮಾತ್ರವಲ್ಲದೆ ಮೈಸೂರು, ಮಂಗಳೂರು, ಬೆಟ್ಟದಪುರ ಹೀಗೇ ಎಲ್ಲೆಲ್ಲೂ ಚಾಚಿಕೊಂಡಿದೆ. ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ಸರಕಾರಿ ಕೆಲಸ ಕೊಡಿಸುವದಾಗಿ ನಂಬಿಸಿ ಹಣ ದೋಚುವದು ಜಾಲದ ಮುಖ್ಯ ಗುರಿಯಾಗಿದ್ದು, ಗ್ರಾಮ ಲೆಕ್ಕಿಗ ಸೇರಿದಂತೆ ಪೊಲೀಸ್ ಇನ್ನಿತರ ಕೆಲಸ ಕೊಡಿಸುವದಾಗಿ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿರುವದು ಪೊಲೀಸ್ ವಿಚಾರಣೆ ವೇಳೆ ತಿಳಿದು ಬಂದಿದೆ.

ಪ್ರಭಾವಿಯAತೆ ಬಿಲ್ಡಪ್..!

ಪುತ್ತೂರಿನ ಪುನಿತ್ ಬಲು ಚಾಣಾಕ್ಷನಾಗಿದ್ದು, ವಿವಿಧ ಜಿಲ್ಲೆಗಳಲ್ಲಿ ಸ್ನೇಹಿತರನ್ನು ಹೊಂದಿದ್ದಾನೆ. ಅಂತೆಯೇ ಮಡಿಕೇರಿಯ ಮೂವರು, ಹಾಗೂ ಮೈಸೂರಿನವನೊಂದಿಗೆ (ಈಗಾಗಲೇ ಬಂಧಿತರಾಗಿರುವವರು) ಸ್ನೇಹ ಬೆಳೆಸಿದ್ದ. ತಾನು ಭೇಟಿ ಕೊಡುವಲ್ಲಿಗೆ ಹೋಗುವ ಸಂದರ್ಭದಲ್ಲಿ ಐಷಾರಾಮಿ ಕಾರಿನಲ್ಲಿ ಬೌನ್ಸರ್‌ಗಳೊಂದಿಗೆ ಬರುತ್ತಿದ್ದುದಲ್ಲದೆ, ರೆಸಾರ್ಟ್ ಹಾಗೂ ಹೋಂ ಸ್ಟೇಗಳಲ್ಲಿ ತಂಗುತ್ತಿದ್ದ. ಅಲ್ಲಿಗೆ ಉದ್ಯೋಗಕಾಂಕ್ಷಿಗಳನ್ನು ಕರೆಸಿಕೊಂಡು ಹಿರಿಯ ಅಧಿಕಾರಿಗಳಿಗೆ, ಜನಪ್ರತಿನಿಧಿಗಳೊಂದಿಗೆ ಮಾತನಾಡುವಂತೆ ಈತನ ಇತರ ಸ್ನೇಹಿತರೊಂದಿಗೆ ಮಾತನಾಡಿ ತಾನೊಬ್ಬ ಪ್ರಭಾವಿ ವ್ಯಕ್ತಿಯೆಂದು ಬಿಂಬಿಸಿಕೊಳ್ಳುತ್ತಿದ್ದ. ಕಳೆದ ಒಂದು ವರ್ಷಗಳಿಂದ ಮಡಿಕೇರಿಯಲ್ಲಿ ಸಂಪರ್ಕ ಇರಿಸಿಕೊಂಡಿರುವ ಈತ ೭-೮ ತಿಂಗಳಿನಿAದ ಹೋಂ ಸ್ಟೇ ಒಂದರಲ್ಲಿ ಬಿಡಾರ ಹೂಡಿದ್ದ. ತನಗೆ ಮೈಸೂರಿನಲ್ಲಿ ಮನೆ ಇರುವದಾಗಿ ಹೇಳಿಕೊಂಡು ಆಗಾಗ್ಗೆ ಹೋಗಿ ಬರುತ್ತಿದ್ದ. ಈತ ಇನ್ನಷ್ಟು ಈ ರೀತಿಯ ವಂಚನೆ ಮಾಡಿರುವ ಬಗ್ಗೆ ಶಂಕೆಯಿದೆ. ಈತನ ಸ್ನೇಹಿತರು ಕೂಡ ಈತನನ್ನು ನಂಬಿ ಇದೀಗ ಕಂಬಿ ಎಣಿಸುವಂತಾಗಿದೆ..!

ಸಿಐಡಿ ವಶಕ್ಕೆ

ಮಹಾ ವಂಚಕರ ಜಾಲವನ್ನು ಬೇಧಿಸಿರುವ ಅಪರಾಧ ಪತ್ತೆ ದಳದವರು ಆರೋಪಿಗಳಿಬ್ಬರನ್ನು ಸಿಐಡಿ ಘಟಕದ ಡಿವೈಎಸ್‌ಪಿ ಅಬ್ದುಲ್ ಖರೀಂ ರಾವ್‌ತರ್ ಅವರ ವಶಕ್ಕೊಪ್ಪಿಸಿದ್ದು, ವಿಚಾರಣೆಯ ಬಳಿಕ ಈರ್ವರನ್ನು ನ್ಯಾಯಾಲಯದ ವಶಕ್ಕೊಪ್ಪಿಸಿ ಹೆಚ್ಚಿನ ವಿಚಾರಣೆಗಾಗಿ ಮತ್ತೆ ಸಿಐಡಿ ವಶಕ್ಕೆ ಪಡೆಯಲಾಗಿದೆ.

ಪೊಲೀಸ್ ಅಧೀಕ್ಷಕಿ ಕ್ಷಮಾ ಮಿಶ್ರಾ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗುಪ್ತ ದಳದ ನಿರೀಕ್ಷಕ ಐ.ಪಿ. ಮೇದಪ್ಪ,್ತ ಅಪರಾಧ ಪತ್ತೆ ದಳದ ಸಹಾಯಕ ಠಾಣಾಧಿಕಾರಿ ಹಮೀದ್, ಸಿಬ್ಬಂದಿಗಳಾದ ಯೋಗೇಶ್‌ಕುಮಾರ್, ನಿರಂಜನ್, ವಸಂತ, ವೆಂಕಟೇಶ್, ಶರತ್ ರೈ, ಸುರೇಶ್, ಅನಿಲ್‌ಕುಮಾರ್, ಸಿಡಿಆರ್ ಘಟಕದ ರಾಜೇಶ್, ಗಿರೀಶ್ ಭಾಗವಹಿಸಿದ್ದರು.

? ಕುಡೆಕಲ್ ಸಂತೋಷ್