ಸೋಮವಾರಪೇಟೆ, ಅ. ೬: ಇಲ್ಲಿನ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾಗಿದ್ದ ನಳಿನಿ ಗಣೇಶ್ ಅವರ ನಿಧನದಿಂದ ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೆ ತಾ. ೧೧ರಂದು ಚುನಾವಣೆ ನಡೆಯಲಿದ್ದು, ಮೀಸಲಾತಿಯನ್ವಯ ಈರ್ವರು ಸದಸ್ಯರು ಅರ್ಹತೆ ಹೊಂದಿದ್ದಾರೆ. ಅಧ್ಯಕ್ಷರಾಗಿ ಬಿಜೆಪಿಯ ಪಿ.ಕೆ. ಚಂದ್ರು ಅವರು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿಗೆ ಮೀಸಲು ನಿಗದಿಗೊಳಿಸಿ ಆದೇಶ ಇರುವ ಹಿನ್ನೆಲೆ ವಾರ್ಡ್ ೨ರ ಬಿಜೆಪಿ ಸದಸ್ಯ ಪಿ.ಕೆ. ಚಂದ್ರು ಹಾಗೂ ವಾರ್ಡ್ ೩ರ ಬಿಜೆಪಿ ಸದಸ್ಯೆ ಮೋಹಿನಿ ಅವರುಗಳು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅರ್ಹತೆ ಪಡೆದಿದ್ದಾರೆ.
ಪ್ರಥಮ ಅವಧಿಯಲ್ಲಿಯೇ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಪಿ.ಕೆ. ಚಂದ್ರು ಅವರನ್ನು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಸಮಾಧಾನ ಪಡಿಸಿ, ೨ನೇ ಅವಧಿಯಲ್ಲಿ ಅಧ್ಯಕ್ಷರನ್ನಾಗಿ ಮಾಡುವ ಭರವಸೆ ನೀಡಿದ್ದರು. ಅದರಂತೆ ನಳಿನಿ ಗಣೇಶ್ ಅವರು ೬ ತಿಂಗಳು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಕೊರೊನಾ ೨ನೇ ಅಲೆಯ ಸಂದರ್ಭ ಅಕಾಲಿಕ ಮರಣಕ್ಕೀಡಾದರು.
ಇದಾದ ನಂತರ ಉಪಾಧ್ಯಕ್ಷರಾಗಿದ್ದ ಕಾಂಗ್ರೆಸ್‌ನ ಸಂಜೀವ ಅವರು ಪ್ರಭಾರ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ತಾ.೧೧ರಂದು ಅಧ್ಯಕ್ಷರ ಆಯ್ಕೆಗೆ ದಿನಾಂಕ ನಿಗದಿಯಾಗಿದೆ.
(ಮೊದಲ ಪುಟದಿಂದ) ಜಿಲ್ಲಾಧಿಕಾರಿಗಳು ಈ ಬಗ್ಗೆ ಆದೇಶ ಹೊರಡಿಸಿದ್ದು, ತಾಲೂಕು ತಹಶೀಲ್ದಾರ್ ಗೋವಿಂದರಾಜು ಅವರನ್ನು ಚುನಾವಣಾಧಿಕಾರಿಯಾಗಿ ನಿಯೋಜಿಸಿದೆ.
ಮುಂದಿನ ನವೆಂಬರ್ ೩ಕ್ಕೆ ನಳಿನಿ ಗಣೇಶ್ ಅವರು ಅಧ್ಯಕ್ಷರಾಗಿ ೧ ವರ್ಷ ಪೂರ್ಣಗೊಳ್ಳಲಿದ್ದು, ಈ ಹಿಂದೆ ಏರ್ಪಟ್ಟ ಒಡಂಬಡಿಕೆಯAತೆ ಪಿ.ಕೆ. ಚಂದ್ರು ಅವರನ್ನು ಅಧ್ಯಕ್ಷರನ್ನಾಗಿಸಲು ಬಿಜೆಪಿಯಲ್ಲಿ ಪ್ರಯತ್ನ ಸಾಗಿದೆ. ನಳಿನಿ ಅವರ ವಾರ್ಡ್ನಿಂದ ಸೊಸೆ ಮೋಹಿನಿ ಅವರಿಗೆ ಟಿಕೇಟ್ ನೀಡುವ ಸಂದರ್ಭವೂ ಅಧ್ಯಕ್ಷ ಸ್ಥಾನದ ಬೇಡಿಕೆ ಇಡಬಾರದು ಎಂದು ಕಟ್ಟುನಿಟ್ಟಾಗಿ ಹೇಳಲಾಗಿದೆ.
ಇದರಿಂದಾಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಪಿ.ಕೆ. ಚಂದ್ರು ಮಾತ್ರ ನಾಮಪತ್ರ ಸಲ್ಲಿಸುವ ಸಾಧ್ಯತೆಯಿದ್ದು, ಒಂದು ವೇಳೆ ಗೊಂದಲ ಏರ್ಪಟ್ಟರೆ ಬಿಜೆಪಿಯ ಎಲ್ಲಾ ಸದಸ್ಯರಿಗೂ ಪಕ್ಷದ ವಿಪ್ ಜಾರಿಗೊಳಿಸಲು ಬಿಜೆಪಿಯಲ್ಲಿ ಚಿಂತನೆ ನಡೆಸಲಾಗಿದೆ.
ತಾ. ೧೧ರಂದು ಬೆಳಿಗ್ಗೆ ೧೦ ಗಂಟೆಯಿAದ ೧೨ ಗಂಟೆಯವರೆಗೆ ನಾಮಪತ್ರ ಸಲ್ಲಿಕೆ, ಮಧ್ಯಾಹ್ನ ೨ ಗಂಟೆಗೆ ಚುನಾವಣಾ ಸಭೆ, ನಾಮಪತ್ರ ಪರಿಶೀಲನೆ, ಹಿಂಪಡೆಯಲು ಅವಕಾಶ, ನಂತರ ಚುನಾವಣೆ ಏರ್ಪಟ್ಟಲ್ಲಿ ಸಭೆಯಲ್ಲಿ ಹಾಜರಿರುವ ಸದಸ್ಯರು, ಶಾಸಕರು, ಸಂಸದರು ಕೈ ಎತ್ತುವ ಮೂಲಕ ಮತ ನೀಡಿ ಅಧ್ಯಕ್ಷರ ಆಯ್ಕೆ ನಡೆಸಲು ಅವಕಾಶ ಕಲ್ಪಿಸಲಾಗಿದೆ.
ಪಕ್ಷಗಳ ಬಲಾಬಲ: ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ೫ (ಪಕ್ಷೇತರ ಸದಸ್ಯ ಸೇರಿ) ಕಾಂಗ್ರೆಸ್ ಹಾಗೂ ಜೆಡಿಎಸ್ ತಲಾ ೩ ಸ್ಥಾನಗಳಲ್ಲಿ ಜಯಗಳಿಸಿದೆ. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಿದ್ದು, ಬಿಜೆಪಿಯಲ್ಲಿ ಮಾತ್ರ ಈ ವರ್ಗಕ್ಕೆ ಸೇರಿದ ಸದಸ್ಯರಿದ್ದಾರೆ. ಹೀಗಾಗಿ ಅಧಿಕಾರ ಬಿಜೆಪಿ ಪಾಲಾಗಲಿದೆ. - ವಿಜಯ್ ಹಾನಗಲ್