ಮಡಿಕೇರಿ, ಅ. ೫: ಪ್ರವಾಸೋದ್ಯಮಕ್ಕೆ ವಿರೋಧವಿಲ್ಲ. ಆದರೆ, ಪ್ರವಾಸೋದ್ಯಮ ಹೆಸರಿನಲ್ಲಿ ಹೋಂಸ್ಟೇ, ರೆಸಾರ್ಟ್ಗಳಲ್ಲಿ ಅನೈತಿಕ ಚಟುವಟಿಕೆ ನಡೆಯಬಾರದು ಹಾಗೂ ಇಲ್ಲಿನ ಸಂಸ್ಕೃತಿಗೆ ಧಕ್ಕೆ ತರುವ ಕೆಲಸಗಳಾಗಬಾರದೆಂಬ ನಿಲುವು ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸಾಧಕ-ಬಾಧಕ ವಿಚಾರ ಕುರಿತು ನಡೆದ ಸಂವಾದದಲ್ಲಿ ವ್ಯಕ್ತವಾಯಿತು.
ಇತ್ತೀಚಿಗೆ ಪ್ರವಾಸೋದ್ಯಮದ ವಿಚಾರದಲ್ಲಿ ಪರ-ವಿರೋಧ ಚರ್ಚೆಗಳಾಗುತ್ತಿರುವ ಹಿನ್ನೆಲೆಯಲ್ಲಿ ಸಂವಾದ ನಡೆಯಿತು. ಇದರಲ್ಲಿ ಹಲವಷ್ಟು ವಿಚಾರಗಳು ಚರ್ಚೆ ಯಾದವು. ಸರಕಾರದ ಮಟ್ಟದಲ್ಲಿ ಈ ಬಗ್ಗೆ ಗಮನಸೆಳೆಯುವ ನಿರ್ಣಯವೂ ಕೈಗೊಳ್ಳಲಾಯಿತು.
ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಂ.ಬಿ. ದೇವಯ್ಯ, ಪ್ರಧಾನ ಕಾರ್ಯದರ್ಶಿ ಅಂಬೆಕಲ್ ನವೀನ್ ಕುಶಾಲಪ್ಪ, ಕೊಡಗು ಜಿಲ್ಲಾ ಪ್ರವಾಸೋದ್ಯಮ ಅವಲಂಭಿತರ ಒಕ್ಕೂಟದ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್, ಹೊಟೇಲ್, ಲಾಡ್ಜ್, ರೆಸಾರ್ಟ್ ಹಾಗೂ ರೆಸ್ಟೋರೆಂಟ್ ಅಸೋಸಿಯೇಷನ್ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್, ಸಲಹೆಗಾರ ಚಿದ್ವಿಲಾಸ್, ಹೋಂಸ್ಟೇ ಅಸೋಸಿ ಯೇಷನ್ ಉಪಾಧ್ಯಕ್ಷೆ ಮೋಂತಿ ಗಣೇಶ್, ಕೊಡಗು ಹಿತರಕ್ಷಣಾ ಸಮಿತಿ ಅಧ್ಯಕ್ಷ ಚೊಟ್ಟೆಕ್‌ಮಾಡ ರಾಜೀವ್ ಬೋಪಯ್ಯ, ಕೊಡವ ರೈಡರ್ಸ್ ಕ್ಲಬ್ ಸಂಚಾಲಕ ಅಜ್ಜಿಕುಟ್ಟೀರ ಪೃಥ್ವಿ ಸುಬ್ಬಯ್ಯ, ಟ್ರಾವೆಲ್ ಕೂರ್ಗ್ ಅಸೋಸಿಯೇಷನ್ ಅಧ್ಯಕ್ಷ ಚೈಯ್ಯಂಡ ಸತ್ಯ, ಉದ್ಯಮಿ ಚೋಕಂಡ ಸೂರಜ್ ಸೋಮಯ್ಯ, ಕೊಡಗು ಸಂರಕ್ಷಣಾ ಒಕ್ಕೂಟದ ಸಂಚಾಲಕ ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ ಸಂವಾದದಲ್ಲಿ ಭಾಗವಹಿಸಿದ್ದರು.
ಉದ್ಯೋಗ ಸೃಷ್ಟಿಯಾಗಲಿ
ಕೊಡಗು ಜಿಲ್ಲೆಯ ಯುವಕರು ಉದ್ಯೋಗ ಅರಸಿ ವಲಸೆ ಹೋಗುತ್ತಿದ್ದು, ಈ ಹಿನ್ನೆಲೆ ಪ್ರವಾಸೋದ್ಯಮ ಮೂಲಕ ಉದ್ಯೋಗ ಸೃಷ್ಟಿಸುವ ಅವಕಾಶವಿದೆ ಎಂದು ಎಂ.ಬಿ. ದೇವಯ್ಯ ಹೇಳಿದರು. ಪ್ರವಾಸೋದ್ಯಮದ ಸಾಧಕ-ಬಾಧಕ ಸಮತೋಲನಕ್ಕೆ ತರುವ ಕೆಲಸ ಪ್ರತಿಯೊಬ್ಬರು ಮಾಡಬೇಕಾಗಿದೆ. ಕೊಡಗು ಕೊಡಗಾಗೇ ಉಳಿಯಬೇಕು. ನಮ್ಮತನ ಉಳಿಸಿಕೊಳ್ಳಬೇಕು. ಪ್ರವಾಸೋದ್ಯಮ ಕ್ರಮಬದ್ಧವಾಗಿ ನಡೆಯಬೇಕು. ವ್ಯವಸ್ಥಿತವಾಗಿ ನಿಯಮಾನುಸಾರ ಆತಿಥ್ಯ ಕೇಂದ್ರಗಳು ಕಾರ್ಯನಿರ್ವಹಿಸಿದರೆ ಯಾವುದೇ ಸಮಸ್ಯೆಯಾಗುವುದಿಲ್ಲ
(ಮೊದಲ ಪುಟದಿಂದ) ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕೃಷಿ ಫಸಲು ಹಾಗೂ ವ್ಯಾಪಾರೋದ್ಯಮದಲ್ಲಿ ನಷ್ಟ ಉಂಟಾಗುತ್ತಿರುವ ಕಾರಣದಿಂದ ಪ್ರವಾಸೋದ್ಯಮ ಜಿಲ್ಲೆಗೆ ಬೇಕಾಗಿದೆ. ಅನೈತಿಕ ಚಟುವಟಿಕೆ, ಪ್ರವಾಸಿಗರ ಮಿತಿಮೀರಿದ ವೇಗದ ಚಾಲನೆಗೆ ಕಡಿವಾಣ ಹಾಕುವ ಕೆಲಸ ಪೊಲೀಸ್ ಇಲಾಖೆ ಮಾಡಬೇಕಾಗಿದೆ ಎಂದರು.
ಪ್ರವಾಸೋದ್ಯಮ ಆದಾಯದ ಮೂಲ
ಪ್ರವಾಸೋದ್ಯಮ ಆದಾಯದ ಮೂಲವಾಗಿದ್ದು, ಇದರ ಮೂಲಕ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಕೆ.ಕೆ. ಮಂಜುನಾಥ್ ಕುಮಾರ್ ತಮ್ಮ ನಿಲುವು ವ್ಯಕ್ತಪಡಿಸಿದರು.
ವ್ಯಾಪಾರೋದ್ಯಮದಡಿ ಪ್ರವಾಸೋದ್ಯಮ ಬರುತ್ತದೆ. ಇಡೀ ಪ್ರಪಂಚದಲ್ಲಿ ಪ್ರವಾಸೋದ್ಯಮ ಅತ್ಯಂತ ಹೆಚ್ಚು ಉದ್ಯೋಗ ಸೃಷ್ಟಿಸಿದೆ. ದೇಶದ ಒಟ್ಟು ಜಿ.ಡಿ.ಪಿ.ಯಲ್ಲಿ ೩.೩% ಇದೆ. ಆಡಳಿತ ಕೂಡ ಪ್ರವಾಸೋದ್ಯಮವನ್ನು ನಂಬಿದೆ. ಇದರಿಂದ ಪರಿಸರ ನಾಶ ಎಂಬುದು ಸುಳ್ಳು. ೧೦ ಮರ ಕಡಿದರೆ ೧೦೦ ಗಿಡ ಬೆಳಸುವವರು ಪ್ರವಾಸೋದ್ಯಮ ಅವಲಂಬಿತರು ಎಂದು ತಜ್ಞರ ವರದಿಯಲ್ಲಿದೆ. ಜೊತೆಗೆ ಪ್ರವಾಸೋದ್ಯಮ ಬೆಳವಣಿಗೆಯಿಂದ ಸಂಸ್ಕೃತಿ ವಿನಿಮಯ ಸಾಧ್ಯ. ಹಾಗೂ ಜ್ಞಾನ, ಮನಃಶಾಂತಿ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಒತ್ತು
ನಾಗೇಂದ್ರ ಪ್ರಸಾದ್ ಮಾತನಾಡಿ, ಕೊಡಗು ಜಿಲ್ಲೆಗೆ ಪರಿಸರ ಸ್ನೇಹಿ ಪ್ರವಾಸೋದ್ಯಮ ಬೇಕಿದ್ದು, ಇದಕ್ಕೆ ಒತ್ತು ನೀಡಬೇಕೆಂದು ಸಲಹೆ ನೀಡಿದರು.
೨೦೦೦ನೇ ಇಸವಿಯಿಂದ ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚುರುಕಾಯಿತು. ಕಾಫಿ ದರ ಕುಸಿದ ನಂತರ ಹೋಂಸ್ಟೇ ಕಾರ್ಯಾರಂಭ ಹೆಚ್ಚಾದವು. ಆರ್ಥಿಕ ಸ್ಥಿತಿಗತಿ ಬದಲಾಗುತ್ತದೆ ಎಂಬ ಕಾರಣಕ್ಕೆ ಪ್ರವಾಸೋದ್ಯಮ ಜಿಲ್ಲೆಯಲ್ಲಿ ವೃದ್ಧಿಯಾಯಿತು. ಕೋಟ್ಯಂತರ ರೂಪಾಯಿ ಪ್ರವಾಸೋದ್ಯಮದಿಂದ ಸರಕಾರಕ್ಕೆ ಹೋಗುತ್ತಿದೆ. ಉದ್ಯೋಗ ಸೃಷ್ಟಿ ಮಾಡಿದ್ದೇವೆ. ೬ ಸಾವಿರ ಜನ ಪ್ರತ್ಯೇಕವಾಗಿ, ಲಕ್ಷಾಂತರ ಜನ ಪರೋಕ್ಷವಾಗಿ ಪ್ರವಾಸೋದ್ಯಮದಿಂದ ಜೀವನ ಕಟ್ಟಿಕೊಂಡಿದ್ದಾರೆ ಎಂದು ಹೇಳಿದರು.
ಕಪ್ಪುಚುಕ್ಕೆ ತರುವ ಬದಲು ಮೆಚ್ಚುವ ಕೆಲಸವಾಗಲಿ
ಕೊಡಗಿನ ಹೆಸರಿಗೆ ಕಪ್ಪುಚುಕ್ಕೆ ತರುವ ಬದಲು ಮೆಚ್ಚುವ ಕೆಲಸಮಾಡಬೇಕೆಂದು ಚಿದ್ವಿಲಾಸ್ ಕರೆ ನೀಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪರ-ವಿರೋಧ ವ್ಯಕ್ತಪಡಿಸಲು ಅವಕಾಶವಿದೆ. ಆದರೆ, ಗೊಂದಲಗಳ ಪರಿಹಾರಕ್ಕೆ ಮುಂದಾಗಬೇಕು ಎಂದರು.
ಕೊಡಗಿನ ವಾಣಿಜ್ಯ ಬೆಳೆ ಕಾಫಿಗೆ ದರ ಕುಸಿತಗೊಂಡು ಆರ್ಥಿಕ ಸಂಕಷ್ಟವನ್ನು ಬೆಳೆಗಾರರು ಅನುಭವಿಸುತ್ತಿದ್ದಾರೆ. ಪ್ರಪಂಚದ ಬಹುತೇಕ ಕಡೆ ಕಾಫಿ ಬೆಳೆಯುತ್ತಿರುವುದರಿಂದ. ಕಾಫಿ ಬೆಳೆ ಭವಿಷ್ಯವನ್ನು ಕಳೆದುಕೊಂಡಿದೆ. ಈ ಪರಿಸ್ಥಿತಿಯಲ್ಲಿ ಪರ್ಯಾಯ ಉದ್ಯೋಗದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮದ ಮೂಲಕ ಬದುಕು ಕಟ್ಟಿಕೊಳ್ಳಬಹುದಾಗಿದೆ. ಆದರೆ, ಆನ್‌ಲೈನ್ ವೇಶ್ಯಾವಾಟಿಕೆಯಂತಹ ಅನೈತಿಕ ಚಟುವಟಿಕೆ ಜಿಲ್ಲೆಯಲ್ಲಿ ನಡೆಯುತ್ತಿರುವುದು ಜಿಲ್ಲೆಯ ಹೆಸರಿಗೆ ಚ್ಯುತಿ ತಂದಿದೆ. ಈ ನಿಟ್ಟಿನಲ್ಲಿ ಆಡಳಿತ ಎಚ್ಚೆತ್ತುಕೊಳ್ಳಬೇಕು. ಸುಸ್ತಿರ ಆರೋಗ್ಯಯುತ ಪ್ರವಾಸೋದ್ಯಮ ಸೃಷ್ಟಿಯಾಗಬೇಕು. ಪ್ಲಾಸ್ಟಿಕ್ ನಿಷೇಧ, ಪ್ರವಾಸಿಗರ ಓಡಾಟಕ್ಕೆ ಕಾಲಮಿತಿ ತರಬೇಕು. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಪ್ರವಾಸೋದ್ಯಮ ಸಮಿತಿ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಕೊಡಗಿನ ಮೇಲೆ ಅಭಿಮಾನ ಹೊಂದಿರುವವರನ್ನು ಕೂಡ ಸಮಿತಿಗೆ ಸೇರ್ಪಡೆ ಮಾಡಿಕೊಳ್ಳುವ ಕೆಲಸವಾಗಬೇಕೆಂದರು.
ಸಂಸ್ಕೃತಿ ವಿನಿಮಯ ಸಾಧ್ಯ
ಹೋಂಸ್ಟೇ ಮೂಲಕ ಸಂಸ್ಕೃತಿಯ ವಿನಿಯಮ ಸಾಧ್ಯವಾಗಿದೆ. ಕೊಡಗಿನ ಆಚಾರ-ವಿಚಾರ ಎಲ್ಲರಿಗೂ ತಿಳಿಯುತ್ತದೆ ಎಂದು ಮೋಂತಿ ಗಣೇಶ್ ಹೇಳಿದರು.
ಪ್ರಸ್ತುತ ಅತಿಥಿಗಳ ಉದ್ದೇಶ ಬದಲಾಗಿರುವುದು ಸತ್ಯ. ಮೊದಲು ಅತಿಥಿಗಳು ಹೋಂಸ್ಟೇಗೆ ಬಂದರೆ ನೆಂಟರು ಬಂದ ವಾತಾವರಣ ಸೃಷ್ಟಿಯಾಗುತ್ತಿತ್ತು. ಇದೀಗ ಪರಿಕಲ್ಪನೆ ಬದಲಾಗಿದೆ. ಯುವಕರು ಕ್ಯಾಂಪ್ ಫಯರ್, ಪಾರ್ಟಿ ಬೇಕು ಅಂತಾರೆ. ಎಲ್ಲರೂ ದಲ್ಲಾಳಿಗಳಾಗಿ ಪರಿವರ್ತನೆಯಾಗುತ್ತಿದ್ದಾರೆ. ಸ್ಪರ್ಧೆ ಮರೆತು ಕೆಲಸ ಮಾಡಬೇಕು. ಹೋಂಸ್ಟೇಗಳನ್ನು ವಿಂಗಡಿಸಿ ಅದರ ಆಧಾರದಲ್ಲಿ ದರ ನಿಗದಿ ಮಾಡಬೇಕು. ಬಾಡಿಗೆಗೆ ಕಟ್ಟಡ ಪಡೆದು ಹೋಂಸ್ಟೇ ಮಾಡುವುವನ್ನು ನಿಲ್ಲಿಸಬೇಕು. ಖಾಸಗಿ ಕಂಪನಿಗೆಗಳ ಪ್ರವೇಶ ನಿಲ್ಲಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜವಾಬ್ದಾರಿಯುತ ಪ್ರವಾಸೋದ್ಯಮ
ಜವಾಬ್ದಾರಿಯುತ ಪ್ರವಾಸೋದ್ಯಮಕ್ಕೆ ಕೈಜೋಡಿಸಿದರೆ ಯಾವುದೇ ಗೊಂದಲ, ವಿರೋಧಗಳು ಸೃಷ್ಟಿಯಾಗುವುದಿಲ್ಲ ಎಂದು ಚೈಯ್ಯಂಡ ಸತ್ಯ ನಿಲುವು ತೋರಿದರು.
ದೇಶ ಸುತ್ತಿ ನೋಡು-ಕೋಶ ಓದಿ ನೋಡು ಎಂಬದು ನಿಜಕ್ಕೂ ಸತ್ಯ. ಇದರಿಂದ ಜೀವನ ಪೂರ್ಣವಾಗುತ್ತದೆ. ಗೋವಾ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಮೋಜು-ಮಸ್ತಿನ ಪ್ರವಾಸೋದ್ಯಮ ಎಂದು ಹೇಳಲಾಗುತ್ತಿತ್ತು. ಇದೀಗ ಅಲ್ಲಿನ ಚಿತ್ರಣ ಬದಲಾಗಿದೆ. ಜವಾಬ್ದಾರಿಯುತ ಪ್ರವಾಸೋದ್ಯಮಕ್ಕೆ ಅಲ್ಲಿನ ಸರಕಾರ ಮುಂದಾಗಿದೆ. ಜಿಲ್ಲೆಯಲ್ಲಿರುವ ಕೊಡಗು ಟೂರಿಸಂ ಕೌನ್ಸಿಲ್ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಬೇಕು. ದೂರದೃಷ್ಟಿಯ ಚಿಂತನೆ ಇರಬೇಕು. ಕೊರೊನಾ, ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಪ್ರವಾಸೋದ್ಯಮ ಅವಲಂಬಿತರು ಸಾಮಾಜಿಕವಾಗಿಯೂ ತೊಡಗಿಸಿಕೊಂಡಿದ್ದಾರೆ ಎಂದರು.
ಪ್ರವಾಸೋದ್ಯಮ ಅವಿಭಾಜ್ಯ ಅಂಗ
ದೇಶದ ಅಭಿವೃದ್ಧಿಯಲ್ಲಿ ಪ್ರವಾಸೋದ್ಯಮ ಅವಿಭಾಜ್ಯ ಅಂಗ ಎಂದು ಮಾದೇಟೀರ ತಿಮ್ಮಯ್ಯ ಹೇಳಿದರು. ಪ್ರವಾಸೋದ್ಯಮದ ಜೊತೆಗೆ ಎಲ್ಲಾ ಉದ್ಯಮ ಬೆಸೆದುಕೊಂಡಿದೆ. ಟೂರಿಸಂ ಅವಕಾಶವಾಗಿ ಜಿಲ್ಲೆಯಲ್ಲಿ ಬೆಳೆದಿದೆ. ಕೆಂಪು ಹಾಸು ಹಾಕಿ ಪ್ರವಾಸಿಗರನ್ನು ಯಾರು ಕರೆದಿಲ್ಲ ಎಂದರು.
ಜನಸ್ನೇಹಿ ಪ್ರವಾಸೋದ್ಯಮ ಸೃಷ್ಟಿಯಾಗಬೇಕಾದರೆ ಸ್ಥಳೀಯರು ಹಾಗೂ ಆಡಳಿತದ ಸಹಕಾರ ಸಂಪೂರ್ಣವಾಗಿರಬೇಕು. ಪರಿಸರ ಹಾಗೂ ಸಂಸ್ಕೃತಿಗೆ ಹಾನಿಮಾಡದೆ ಪ್ರವಾಸೋದ್ಯಮ ನಡೆಯಬೇಕು. ಉದ್ಯಮ ಬೆಳವಣಿಗೆಯಾಗುವಾಗ ವ್ಯತಿರಿಕ್ತ ಪರಿಣಾಮ ಉಂಟಾಗುವುದು ಸಹಜ. ಇದರ ಬಗ್ಗೆ ಜಾಗೃತಿ ಮೂಡಿಸಬೇಕು. ಸಂಘಟಿತರಾಗಿ ಎಲ್ಲರೂ ಒಪ್ಪಿಕೊಳ್ಳುವ ರೀತಿ ಕಾರ್ಯಯೋಜನೆ ರೂಪಿಸಬೇಕೆಂದರು.
ಇಲ್ಲಿನ ವೈಫಲ್ಯಗಳನ್ನು ನಾವುಗಳು ಪ್ರಶ್ನಿಸಬೇಕು. ಕಣ್ಣ ಮುಂದೆ ಅಕ್ರಮ ನಡೆದರು ನಾವು ಪ್ರಶ್ನಿಸುವುದಿಲ್ಲ. ರಾಜಕೀಯ ನಾಯಕರ ವೈಫಲ್ಯ ಕೂಡ ಸಂಘರ್ಷ ಹೆಚ್ಚಾಗಲು ಕಾರಣವಾಗಿದೆ. ಗ್ರಾಮಸಭೆಗಳಲ್ಲಿ ಈ ಬಗ್ಗೆ ಚರ್ಚೆಗಳಾಗಬೇಕು. ಅದಲ್ಲದೆ ನೋಂದಾವಣೆಗೊಳ್ಳದ ಹೋಂಸ್ಟೇಗಳ ವಿರುದ್ಧ ಹೋಂಸ್ಟೇ ಅಸೋಸಿಯೇಷನ್ ಕ್ರಮಕ್ಕೆ ಕೆಲಸ ಮಾಡಿದೆ. ಇದು ಜವಾಬ್ದಾರಿಯುತ ಪ್ರವಾಸೋದ್ಯಮವಾಗಿದೆ ಎಂದರು.
ಕೊಡಗಿನವರು ಪ್ರವಾಸೋದ್ಯಮ ಅವಲಂಭಿಸಿಲ್ಲ
ಕೊಡಗು ಜಿಲ್ಲೆಯ ಜನ ಪ್ರವಾಸೋದ್ಯಮ ಅವಲಂಭಿಸಿಲ್ಲ. ಅದರಿಂದ ಲಕ್ಷಾಂತರ ಮಂದಿ ಬದುಕು ಕಟ್ಟಿಕೊಂಡಿದ್ದಾರೆ ಎಂಬುದು ಸುಳ್ಳು ಎಂದು ರಾಜೀವ್ ಬೋಪಯ್ಯ ಅಭಿಪ್ರಾಯಪಟ್ಟರು.
ತಲಕಾವೇರಿಯಲ್ಲಿ ಭಕ್ತಾದಿಗಳ ಪ್ರವೇಶ ನಿರಾಕರಣೆಗೆ ಪ್ರವಾಸೋದ್ಯಮ ಮೂಲ ಕಾರಣವಾಗಿದೆ. ಇದನ್ನು ಪ್ರಶ್ನಿಸಬೇಕಾದ ಜನಪ್ರತಿನಿಧಿಗಳು ಸಭೆಯಲ್ಲಿ ಸುಮ್ಮನಿದ್ದರು ಎಂದ ಅವರು, ಕೊಡಗಿನ ಕೆಲ ಭಾಗಗಳಲ್ಲಿ ಮಾತ್ರ ಪ್ರವಾಸೋದ್ಯಮ ಅವಲಂಭಿತರಿದ್ದಾರೆ ಹೊರತು ಇಡೀ ಜಿಲ್ಲೆ ಅವಲಂಭಿಸಿಲ್ಲ. ಹೋಂಸ್ಟೇಗಳ ಮೂಲಕ ಬದುಕು ಕಟ್ಟಿಕೊಳ್ಳಬಹುದು ಎಂಬುದು ಸತ್ಯ. ಆದರೆ, ಇದರಿಂದ ಪ್ರಕೃತಿ ಮೇಲಾಗುತ್ತಿರುವ ದೌರ್ಜನ್ಯ ಪರಿಣಾಮ ಪ್ರಾಕೃತಿಕ ವಿಕೋಪಗಳು ಸಂಭವಿಸಿದವು. ಇಲ್ಲಿನ ಸಂಸ್ಕೃತಿ ದುರ್ಬಳಕೆಯಾಗಬಾರದು. ಜೊತೆಗೆ ಇಲ್ಲಿನ ಪ್ರವಾಸೋದ್ಯಮದ ಮೂಲಕ ಸರಕಾರ ಕೈಸೇರುತ್ತಿರುವ ಆದಾಯ ಕೊಡಗಿಗೆ ಎಷ್ಟರ ಮಟ್ಟಿಗೆ ವಿನಿಯೋಗವಾಗುತ್ತಿದೆ ಎಂದು ಪ್ರಶ್ನಿಸಿದರು.
ಭಾವನೆಗಳನ್ನು ಗೌರವಿಸಬೇಕು
ಇಲ್ಲಿನ ಧಾರ್ಮಿಕ ಭಾವನೆ ಹಾಗೂ ಆಚಾರ-ವಿಚಾರ, ಸಂಸ್ಕೃತಿಯ ಮೌಲ್ಯವನ್ನು ಗೌರವಿಸುವ ಕೆಲಸ ಪ್ರವಾಸಿಗರಿಂದ ಆಗಬೇಕು ಎಂದು ಅಜ್ಜಿಕುಟ್ಟೀರ ಪೃಥ್ವಿ ಹೇಳಿದರು.
ಪ್ರವಾಸೋದ್ಯಮವನ್ನು ನಾನು ವಿರೋಧಿಸುವುದಿಲ್ಲ. ನಾನು ಕೂಡ ಊರು ಸುತ್ತುತ್ತೇನೆ. ಜೊತೆಗೆ ಅಲ್ಲಿನ ಸಂಸ್ಕೃತಿಯನ್ನು ಗೌರವಿಸುತ್ತೇನೆ. ಕೊಡಗಿಗೆ ಬರುವ ಪ್ರವಾಸಿಗರು ಕೂಡ ಇದೇ ರೀತಿ ಇರಬೇಕು. ಪ್ರವಾಸೋದ್ಯಮದಿಂದ ವ್ಯತಿರಿಕ್ತ ಪರಿಣಾಮ ಬೀರಿರುವುದು ಸತ್ಯ. ಧಾರ್ಮಿಕ ಕೇಂದ್ರಗಳಿಗೆ ಬರುವ ಪ್ರವಾಸಿಗರು ಧರಿಸುವ ಬಟ್ಟೆ ನಮ್ಮ ಭಾವನೆಗೆ ವಿರುದ್ಧವಾಗಿದೆ. ಇದನ್ನು ಪ್ರಶ್ನಿಸಿದರೆ ನೋಟೀಸ್ ನೀಡಲಾಗುತ್ತದೆ. ಇದೆÀಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಇತ್ತೀಚಿಗೆ ಮೋಜು, ಮಸ್ತಿಗೆಂದೇ ಕೊಡಗಿಗೆ ಪ್ರವಾಸಿಗರು ಬರುತ್ತಿದ್ದಾರೆ. ರಾತ್ರಿ ಮಾಂಸಾಹಾರ ಸೇವಿಸಿ, ಮದ್ಯ ಕುಡಿದು ಮರುದಿನ ಬೆಳಿಗ್ಗೆ ಧಾರ್ಮಿಕ ಕೇಂದ್ರ ಹೋಗುತ್ತಾರೆ. ಇದು ಕೊಡಗಿಗೆ ಮಾರಕ ಎಂದರು.
ಪ್ರವಾಸಿಗರ ಪ್ರವೇಶಕ್ಕೆ ಮಿತಿ ಇರಲಿ
ದಿನವೊಂದಕ್ಕೆ ಇಂತಿಷ್ಟು ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ನೀಡಿದ್ದಲ್ಲಿ ಗೊಂದಲಗಳು ಬಗೆಹರಿಯುತ್ತದೆ ಎಂದು ಚೋಕಂಡ ಸೂರಜ್ ಸಲಹೆ ನೀಡಿದರು.
ಕೆಲವು ಆತಿಥ್ಯ ಕೇಂದ್ರಗಳು ನಿಯಮ ಪಾಲಿಸುತ್ತಿಲ್ಲ. ತ್ಯಾಜ್ಯ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ, ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ. ಧಾರ್ಮಿಕ ಕ್ಷೇತ್ರಗಳಿಗೆ ಬರುವ ಹೊರಗಿನವರಿಗೆ ಪ್ರವೇಶ ದರ ನಿಗದಿ ಮಾಡಿದ್ದಲ್ಲಿ ಪ್ರವಾಸಿಗರ ದಟ್ಟಣೆ ಕಡಿಮೆಯಾಗುತ್ತದೆ. ಪ್ರವಾಸಿ ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯ ಇಲ್ಲ; ಇದರ ಬಗ್ಗೆ ಸಂಘಟನಾತ್ಮಕವಾಗಿ ಸರಕಾರದ ಗಮನ ಸೆಳೆಯಬೇಕು. ಐಷಾರಾಮಿ ರೆಸಾರ್ಟ್ಗಳಲ್ಲಿ ಏನಾಗುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ಇಲ್ಲಿನವರಿಗೆ ಉದ್ಯೋಗ ನೀಡುತ್ತಿಲ್ಲ. ಈ ಬಗ್ಗೆ ಕೆಲಸ ಮಾಡಬೇಕೆಂದರು.
ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ
ಕೊರೊನಾ ಪರಿಸ್ಥಿತಿ ಹಿನ್ನೆಲೆ ಕೊಡಗು ಜಿಲ್ಲೆಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಬೇಕೆಂದು ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ ಆಗ್ರಹಿಸಿದರು.
ತುಲಾಸಂಕ್ರಮಣದಿAದ ಕಿರುಸಂಕ್ರಮಣದ ತನಕ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದರೆ ಉತ್ತಮ. ಪ್ರವಾಸಿಗರಿಂದ ಕೊಡಗಿನ ಹೆಸರು ಅಂತರರಾಷ್ಟಿçÃಯ ಮಟ್ಟದಲ್ಲಿ ಹಾಳಾಗುತ್ತಿದೆ. ದೇವಾಲಯಗಳು ಶ್ರದ್ಧಾಭಕ್ತಿಯ ಕೇಂದ್ರವಾಗಿರಬೇಕು. ಪಾರ್ಟಿ ಮಾಡಿ ತಲಕಾವೇರಿಗೆ ಪ್ರವಾಸಿಗರು ಬರುತ್ತಿರುವುದರಿಂದ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದರು.
ಉತ್ತಮ ವೇದಿಕೆ
ಸಂವಾದ ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ಒಳ್ಳೆ ಚರ್ಚೆಗೆ ಪ್ರೆಸ್ ಕ್ಲಬ್ ವೇದಿಕೆ ನೀಡಿದೆ. ಅತಿಥಿ ದೇವೋಭವ ಕಲ್ಪನೆಯಲ್ಲಿ ಮೂಡಿದ ಹೋಂಸ್ಟೇ ಸಂಸ್ಕೃತಿ ಇದೀಗ ಬದಲಾಗಿದೆ. ಹೆಣ್ಣು, ಹೆಂಡ ಸಿಗುತ್ತದೆ ಎಂದು ಕೊಡಗಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಇದರ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಕಾಲ ಬದಲಾದಂತೆ ನಾವು ಬದಲಾಗುತ್ತಿದ್ದೇವೆ. ಹೋಂಸ್ಟೇ ಮೂಲಕ ಸಂಸ್ಕೃತಿ ಪರಿಚಯ ಮಾಡುವ ಕೆಲಸ ಕೂಡ ಆಗುತ್ತಿದೆ. ಹಲವು ಮಹಿಳೆಯರು ಸ್ವಾವಲಂಭಿ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಬಹುಚರ್ಚಿತ ವಿಚಾರದ ಬಗ್ಗೆ ಒಳ್ಳೆ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಒಂದೇ ವೇದಿಕೆ ಮೂಲಕ ವಿಚಾರ ವಿನಿಮಯವಾಗಿರಲಿಲ್ಲ. ಇದರಿಂದ ಸಂಘರ್ಷ ಕಡಿಮೆಯಾಗುತ್ತದೆ. ಕೊಡಗಿನ ಜನರ ಹಿತಾಸಕ್ತಿ ಕಾಯ್ದುಕೊಳ್ಳಲು ಈ ಚರ್ಚೆ ಕಾರಣವಾಗಿದೆ ಎಂದರು.
ಕೊಡಗು ಪ್ರಕೃತಿ ಸೌಂದರ್ಯ, ಕ್ರೀಡೆ, ಕಲೆ, ಸಂಸ್ಕೃತಿ, ಸೈನಿಕರಿಗೆ ಹೆಸರುವಾಸಿ ಆಗಿದೆ. ಈ ಬಗ್ಗೆ ತಿಳಿದುಕೊಳ್ಳಲು ಪ್ರವಾಸಿಗರು ಬರುತ್ತಿಲ್ಲ. ಎಲ್ಲಾ ದೃಷ್ಟಿಕೋನದಲ್ಲಿ ನಾವುಗಳು ಚಿಂತಿಸಬೇಕು. ನ್ಯಾಯಯುತ ಉದ್ಯಮಕ್ಕೆ ಯಾರ ಆಕ್ಷೇಪವಿಲ್ಲ. ಆನ್‌ಲೈನ್ ವೇಶ್ಯಾವಾಟಿಕೆ ರೀತಿಯ ಘಟನೆ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಪ್ರವಾಸೋದ್ಯಮ ಹಾಗೂ ಪ್ರಕೃತಿ ಬೆಳವಣಿಗೆಯಲ್ಲಿ ಸರಕಾರದ ಪಾತ್ರ ಇಲ್ಲ. ಅದೇ ರೀತಿ ನ್ಯೂನತೆಗೂ ಸರಕಾರ ಕಾರಣವಲ್ಲ. ಸಂಘಟನಾತ್ಮಕ ಹೋರಾಟದ ಕೊರತೆಯಿಂದ ಅಂದುಕೊAಡಿರುವುದು ಅಸಾಧ್ಯವಾಗಿಯೇ ಇದೆ. ಅನಾಭಿಪ್ರಾಯದ ವಿರುದ್ಧ ಆಡಳಿತ ಮಾಡಲಾಗುವುದಿಲ್ಲ. ಇದನ್ನು ಅರಿತುಕೊಳ್ಳಬೇಕೆಂದರು.
ಪ್ರೆಸ್‌ಕ್ಲಬ್ ಉಪಾಧ್ಯಕ್ಷ ತೇಜಸ್ ಪಾಪಯ್ಯ, ನಿರ್ದೇಶಕರುಗಳಾದ ಸುನಿಲ್ ಪೊನ್ನೆಟ್ಟಿ, ದಿವಾಕರ್ ಜಾಕಿ, ಪ್ರಸೀನ್, ಪುತ್ತಂ ಪ್ರದೀಪ್, ಕುಪ್ಪಂಡ ದತ್ತಾತ್ರಿ ಸೇರಿದಂತೆ ಇನ್ನಿತರರು ಹಾಜರಿದ್ದರು.
ಪ್ರಜ್ಞಾ ರಾಜೇಂದ್ರ ಪ್ರಾರ್ಥಿಸಿ, ಚಂದ್ರಮೋಹನ್ ನಿರೂಪಿಸಿ, ಆರ್. ಸುಬ್ರಮಣಿ ಸ್ವಾಗತಿಸಿ, ಬೊಳ್ಳಜಿರ ಅಯ್ಯಪ್ಪ ವಂದಿಸಿದರು.