ಸೋಮವಾರಪೇಟೆ, ಅ. ೫: ಗ್ರಾಮಸ್ಥರು ನಡೆದಾಡಲು ಬಳಸುತ್ತಿದ್ದ ಸರ್ಕಾರಿ ಪೈಸಾರಿ ಜಾಗದಲ್ಲಿ ದಿಡೀರನೇ ಸಮಾಧಿ ನಿರ್ಮಿಸಲು ಮುಂದಾಗಿದ್ದ ಪ್ರಯತ್ನಕ್ಕೆ ಅಧಿಕಾರಿಗಳು ತಡೆಯೊಡ್ಡಿದ ಸಂದರ್ಭ, ಸ್ಥಳದಲ್ಲಿದ್ದ ಸಾರ್ವಜನಿಕರ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿರುವ ಘಟನೆಗೆ ಸಂಬAಧಿಸಿದAತೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಅರೆಹಳ್ಳಿ ಗ್ರಾಮದ ಸರ್ವೆ ನಂ ೪೮ರ ಸರ್ಕಾರಿ ಪೈಸಾರಿ ಜಾಗದಲ್ಲಿ ಕೂಡ್ಲೂರು ಗ್ರಾಮದ ಕೆ.ಬಿ. ಆನಂದ ಎಂಬಾತ ರಸ್ತೆ ಮಧ್ಯದಲ್ಲಿಯೇ ಸಮಾಧಿ ನಿರ್ಮಿಸಲು ಮುಂದಾಗಿದ್ದು, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು, ಪೊಲೀಸ್ ಹಾಗೂ ಕಂದಾಯ ಇಲಾಖಾ ಸಿಬ್ಬಂದಿಗಳಿಗೆ ಮಾಹಿತಿ ನೀಡಿ, ಕಟ್ಟಡ ಕೆಲಸವನ್ನು ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದರು.
ಅದರಂತೆ ಸ್ಥಳಕ್ಕೆ ಆಗಮಿಸಿದ ಕೊಡ್ಲಿಪೇಟೆ ಉಪ ತಹಶೀಲ್ದಾರ್ ಪುರುಷೋತ್ತಮ ಸೇರಿದಂತೆ ಸಿಬ್ಬಂದಿಗಳು, ಪೊಲೀಸ್ ಸಿಬ್ಬಂದಿಗಳು ಸಮಾಧಿ ನಿರ್ಮಿಸುತ್ತಿರುವ ಜಾಗಕ್ಕೆ ಸಂಬAಧಿಸಿದ ದಾಖಲೆಗಳನ್ನು ನೀಡುವಂತೆ ತಿಳಿಸಿದರು.
ಸದರಿ ಜಾಗವು ಊರ ಒಡೆಯನ ಬನಕ್ಕೆ ತೆರಳಲು ಗ್ರಾಮಸ್ಥರು ಬಳಸುತ್ತಿರುವ ರಸ್ತೆಯಾಗಿದ್ದು, ಸರ್ಕಾರಿ ದಾಖಲೆಗಳ ಪ್ರಕಾರ ಪೈಸಾರಿ ಎಂದು ನಮೂದಾಗಿದ್ದರೂ ಅಕ್ರಮವಾಗಿ ಸಮಾಧಿ ನಿರ್ಮಿಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದರು.
ಅದರಂತೆ ಅಧಿಕಾರಿಗಳೊಂದಿಗೆ ಸ್ಥಳೀಯರಾದ ಕಾಂತರಾಜು, ಯೋಗೇಶ್, ಆನಂದ್, ದೊರೆ, ಲೋಕೇಶ್, ಪ್ರದೀಪ್, ಕಾಳಪ್ಪ, ಮೂರ್ತಿ ಸೇರಿದಂತೆ ಇತರರು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.
ಈ ಜಾಗ ತನಗೆ ಸೇರಿದ್ದು, ಈಗಾಗಲೇ ದಾಖಲಾತಿಗಾಗಿ ಅರ್ಜಿಯನ್ನೂ ಸಲ್ಲಿಸಿದ್ದೇನೆ ಎಂದು ಅಧಿಕಾರಿಗಳಿಗೆ ಆನಂದ ತಿಳಿಸಿದ್ದು, ಈ ಸಂದರ್ಭ ಸಮರ್ಪಕ ದಾಖಲೆಗಳನ್ನು ಒದಗಿಸುವಂತೆ ಕಂದಾಯ ಹಾಗೂ ಪೊಲೀಸ್ ಇಲಾಖಾಧಿಕಾರಿಗಳು ಕೇಳಿದರು.
ಆದರೆ ಯಾವುದೇ ದಾಖಲಾತಿಗಳೂ ಇರದ ಹಿನ್ನೆಲೆ ತಕ್ಷಣ ಸಮಾಧಿ ಕಟ್ಟಲು ಅಳವಡಿಸಿದ್ದ ತಳಪಾಯವನ್ನು ತೆರವುಗೊಳಿಸುವಂತೆ ಸೂಚಿಸಿದರು. ಈ ಸಂದರ್ಭ ಅರೆಹಳ್ಳಿ ಗ್ರಾಮದ ಎ.ವೈ. ಕಾಂತರಾಜು ಅವರು ಕಲ್ಲುಗಳನ್ನು ತೆಗೆಯಲು ಮುಂದಾದ ಸಂದರ್ಭ, ಆನಂದ ಏಕಾಏಕಿ ಹಲ್ಲೆ ನಡೆಸಿದ್ದು, ಅಧಿಕಾರಿಗಳ ಎದುರೇ ಕೊಲೆ ಬೆದರಿಕೆ ಒಡ್ಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿ ಕೆ.ಬಿ. ಆನಂದ ವಿರುದ್ಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸ್ ಇನ್ಸ್ಪೆಕ್ಟರ್ ಪರಶಿವಮೂರ್ತಿ ಸೇರಿದಂತೆ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.