ಕಣಿವೆ, ಅ. ೫: ಈ ಬಾರಿಯ ಮಾನ್ಸೂನ್ ನಲ್ಲಿ ಜಿಲ್ಲೆಯ ಪ್ರಮುಖವಾದ ಕಾವೇರಿ ನದಿಯಲ್ಲಿನ ನೀರಿನ ಮಟ್ಟ ಕೇವಲ ೧೩.೦೧ ಮೀಟರ್ ಮಾತ್ರ ಹರಿದಿದೆ. ಇದು ಕಣಿವೆಯ ಕಾವೇರಿ ನದಿ ದಂಡೆಯಲ್ಲಿನ ಜಲಮಾಪನ ಘಟಕದಲ್ಲಿ ದಾಖಲಾಗಿದೆ.

ನದಿಯ ತಳಮಟ್ಟದಿಂದ ಗರಿಷ್ಠ ಅಂದರೆ ೧೩.೦೧ ಮೀಟರ್ ಎತ್ತರದಲ್ಲಿ ಪ್ರವಹಿಸಿದೆ. ಕಳೆದ ವರ್ಷ ೨೦೨೦ ರಲ್ಲಿ ೧೪.೭೨೦ ಮೀಟರ್ ಎತ್ತರದಲ್ಲಿ ನದಿಯ ನೀರು ಹರಿದಿದ್ದರೆ, ೨೦೧೮ ರಲ್ಲಿ ಅತ್ಯಧಿಕ ಅಂದರೆ ೧೬.೩೪೦ ಮೀಟರ್ ಎತ್ತರದಲ್ಲಿ ಪ್ರವಹಿಸಿತ್ತು.

ಸಾಮಾನ್ಯವಾಗಿ ನದಿಯಲ್ಲಿ ೧೫ ಮೀಟರ್ ನಷ್ಟು ನೀರಿನ ಮಟ್ಟ ಏರಿಕೆಯಾದರೆ ನದಿ ಪಾತ್ರದಲ್ಲಿನ ತಗ್ಗುಪ್ರದೇಶಗಳು ಜಲಾವೃತವಾಗುತ್ತವೆ. ಅದೇ ರೀತಿ ಕಳೆದ ಮೂರು ವರ್ಷಗಳ ಕಾಲ ಸತತವಾಗಿ ಗುಡ್ಡೆಹೊಸೂರು, ಮಾದಾಪಟ್ಟಣ, ಬೈಚನಹಳ್ಳಿ, ಕುಶಾಲನಗರ ಪಟ್ಟಣ, ಮುಳ್ಳುಸೋಗೆ, ಗುಮ್ಮನಕೊಲ್ಲಿ, ಕೂಡಿಗೆ ಹೀಗೆ ಬಹುತೇಕ ಜನವಸತಿ ಪ್ರದೇಶ ಜಲಾವೃತವಾಗಿತ್ತು.

ಆದರೆ ಕಳೆದ ಮೂರು ವರ್ಷಗಳಲ್ಲಿ ನದಿದಂಡೆಯ ಆಸು ಪಾಸಿನ ಜನರು ಅನುಭವಿಸಿದ ಜಲಕಂಟಕದ ನಷ್ಟ - ಸಂಕಷ್ಟಗಳು ಹೇಳತೀರದ್ದು.

ಮೂರು ವರ್ಷಗಳ ಕಾಲ ಸತತ ಭಾರೀ ಮಳೆಯಿಂದ ಕಾವೇರಿಯೊಳಗೆ ಮಿಂದೆದ್ದ ಜನರ ಪ್ರಾರ್ಥನೆಗೆ ಎಂಬAತೆ ಈ ಬಾರಿ ಕಾವೇರಿ ತಣ್ಣಗಾಗಿದ್ದಾಳೆ. ಹಾಗಾಗಿ ಈ ಬಾರಿ ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿ ಹೆಚ್ಚು ಮಳೆ ಸುರಿಯದ ಕಾರಣ ನದಿಯ ನೀರಿನ ಮಟ್ಟ ೧೩.೦೧ ಮೀಟರ್‌ಗೆ ಸೀಮಿತವಾಗಿದೆ.

ಕಳೆದ ೪೦ ವರ್ಷಗಳ ಹಿಂದೆ ಅಂದರೆ ೧೯೮೦ ರಲ್ಲಿ ಕಾವೇರಿ ನದಿಯಲ್ಲಿ ಇದೇ ರೀತಿ ಗರಿಷ್ಠ ಪ್ರವಾಹ ಬಂದ ಬಗ್ಗೆ ಜಲಮಾಪನ ಕೇಂದ್ರದಲ್ಲಿ ದಾಖಲಾಗಿದೆ. ಅಂದರೆ ಆ ವರ್ಷ ೧೪.೪೧೦ ಮೀಟರ್ ನಷ್ಟು ನದಿಯ ಪ್ರವಾಹ ಏರಿಕೆಯಾಗಿದೆ.

ಆದರೆ ಅಂದು ಜನಸಂಖ್ಯೆಯ ಪ್ರಮಾಣವೂ ಏರಿಕೆಯಾಗಿರಲಿಲ್ಲ. ಜೊತೆಗೆ ನದಿ ದಂಡೆಯ ಪ್ರದೇಶಗಳು ಅಭಿವೃದ್ಧಿ ಹೊಂದಿರಲಿಲ್ಲ. ಬಹುಮುಖ್ಯವಾಗಿ ನದಿಪಾತ್ರವೂ ಯಾವುದೇ ಒತ್ತುವರಿಯಿಂದ ಮುಕ್ತವಾಗಿದ್ದ ಕಾರಣ ಅಂದು ಪ್ರವಹಿಸಿದ್ದ ನೀರಿನ ಪ್ರಮಾಣ ಏರಿಕೆಯಾದಾಗ್ಯೂ ಜನರಿಗೆ ಸಮಸ್ಯೆ ಕಂಡಿರಲಿಲ್ಲ. ಆದರೆ ಇಂದು ಪರಿಸ್ಥಿತಿ ವಿಭಿನ್ನವಾಗಿದ್ದು, ಒತ್ತುವರಿಯಾಗಿರುವ ನದಿ ಪಾತ್ರ, ಮಾಯವಾದ ಕೆರೆ ಕಟ್ಟೆಗಳು, ಗಿಡ - ಮರಗಳೋಪಾದಿಯಲ್ಲಿ ನದಿ ದಂಡೆಯಲ್ಲಿ ಬೆಳೆದು ನಿಂತ ಕಾಂಕ್ರೀಟ್ ಕಟ್ಟಡಗಳು, ಅವ್ಯಾಹತ ಮರಳುಗಾರಿಕೆಗಳ ಫಲವಾಗಿ ಇಂದು ನೆರೆ ಬಂದರೆ ಸಾಕು ಜನವಸತಿ ಮುಳುಗುವಂತಾಗಿದೆ.

ಹಾಗೆಯೇ ಈ ಬಾರಿ ೨೦೨೧ ರಲ್ಲಿ ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿ ೧೦೦ ಮಿಲಿ ಮೀಟರ್ ಮಳೆ ಸುರಿದಿದ್ದರೆ, ೨೦೨೦ ರಲ್ಲಿ ೧೬೨.೮೦ ಮಿ.ಮೀಟರ್ ಮಳೆ ಆಗಿತ್ತು. ೨೦೧೯ರಲ್ಲಿ ೩೩೨ ಮಿ.ಮೀ ಮಳೆ ಸುರಿದಿದೆ. ಹಾಗೆಯೇ ೨೦೧೮ ರಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಅಂದರೆ ೪೦೬.೭೦ ಮಿ.ಮೀಟರ್ ಮಳೆ ಸುರಿದು ಇಡೀ ಕೊಡಗು ಜಿಲ್ಲೆಯನ್ನು ನಡುಗಿಸಿತ್ತು. ಅಂದರೆ ಶತಮಾನದ ಜಲಪ್ರಳಯ ಸಂಭವಿಸಿ ಸಾಕಷ್ಟು ಆಸ್ತಿ - ಪಾಸ್ತಿ ನಷ್ಟವಾಗಿತ್ತು.

ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಸಂಭವಿಸಿದ ಹೆಚ್ಚು ಮಳೆಯಿಂದಾಗಿ ತುಂಬಿ ಹರಿದ ಜಿಲ್ಲೆಯ ನದಿ, ತೊರೆ, ಹಳ್ಳ - ಕೊಳ್ಳಗಳಲ್ಲಿ ಕೊಚ್ಚಿ ಬಂದ ಮಣ್ಣು ಹಾಗೂ ಮರಳಿನ ಪ್ರಮಾಣ ನದಿಯ ಆಳ - ಅಗಲವನ್ನು ಮಿತಗೊಳಿಸಿದೆ ಎನ್ನಲಾಗುತ್ತಿದೆ. ಅಂದರೆ ಕಾವೇರಿ ನದಿಯ ತಳಮಟ್ಟದಲ್ಲಿ ಮೂರರಿಂದ ಮೂರುವರೆ ಮೀಟರ್‌ಗಳಷ್ಟು ಮಣ್ಣು - ಮರಳು ಸೇರಿಕೊಂಡಿದೆ. ಹಾಗಾಗಿ ಇದೀಗ ಪ್ರಸಕ್ತ ಕಾವೇರಿ ನದಿಯಲ್ಲಿ ೬.೧೧೦ ಮೀಟರ್ ನಷ್ಟು ಮಾತ್ರ ನೀರಿನ ಹರಿವಿದೆ.

ಇತ್ತ ಮುಕ್ಕೋಡ್ಲು ಹಾಗೂ ಹಟ್ಟಿಹೊಳೆ ಪ್ರದೇಶದಲ್ಲೂ ಕಳೆದ ಮೂರು ವರ್ಷಗಳಲ್ಲಿ ಸುರಿದ ಮಹಾಮಳೆಗೆ ಕುಸಿದ ಬೆಟ್ಟ - ಗುಡ್ಡಗಳ, ಕೊಚ್ಚಿ ಹೋದ ಕಾಫಿ ತೋಟಗಳ ಮಣ್ಣು ಹಾರಂಗಿ ನದಿಯಲ್ಲಿ ಹರಿದ ಪರಿಣಾಮ ಹಾರಂಗಿ ಜಲಾಶಯದಲ್ಲಿ ಬಹುಪಾಲು ಹೂಳೇ ತುಂಬಿ ಹೋಗಿದೆ ಎಂಬುದು ತಜ್ಞರ ವಾದವಾಗಿದೆ.

ಕೊಡಗಿನಲ್ಲಿ ಪ್ರತೀ ಮಳೆಗಾಲದಲ್ಲಿ ಮಳೆಯೂ ಬರಲಿ, ನದಿಗಳೂ ತುಂಬಿ ಹರಿಯಲಿ, ಆದರೆ ಪ್ರವಾಹ ಮಾತ್ರ ಮರುಕಳಿಸದಿರಲಿ.... ಎಂಬ ಸಹಸ್ರ ಸಹಸ್ರ ಜನರ ಜೋಡಿ ಹಸ್ತಗಳ ಪ್ರಾರ್ಥನೆ ತಾಯಿ ಕಾವೇರಿಗೆ ಕೇಳಿಸಿದೆ. ಹಾಗಾಗಿ ಜೀವದಾತೆ ಕಾವೇರಿ ಈ ಬಾರಿ ಹೆಚ್ಚಾಗಿ ಸದ್ದೂ ಮಾಡದೆಯೇ.... ಸುದ್ದಿಯೂ ಆಗದೆಯೇ... ತದೇಕ ಚಿತ್ತಳಾಗಿ, ಶಾಂತಸ್ವರೂಪಿಯಾಗಿ ಹರಿದಿದ್ದಾಳೆ. ಹರಿಯುತ್ತಿದ್ದಾಳೆ. ಅಲ್ಲವೇ.... - ಕೆ.ಎಸ್. ಮೂರ್ತಿ