ಸಹಕಾರ ಸಂಘಗಳ ವಿರುದ್ಧ ಕೊರವೇ ಅಸಮಾಧಾನ
ಮಡಿಕೇರಿ, ಅ. ೫: ಅತಿವೃಷ್ಟಿ ಮತ್ತು ಕೋವಿಡ್ ಸಂದಿಗ್ಧ ಪರಿಸ್ಥಿತಿಯಿಂದ ಕಂಗೆಟ್ಟಿರುವ ಕೊಡಗಿನ ಕೃಷಿಕ ವರ್ಗ ಸಾಲ ಮರುಪಾವತಿಸಲು ಸಾಧ್ಯವಾಗದೆ ಪರದಾಡುತ್ತಿದೆ. ಆದರೆ ಕರುಣೆ ಇಲ್ಲದ ಸಹಕಾರ ಸಂಘಗಳು ಸಂಕಷ್ಟದಲ್ಲಿರುವ ಕೃಷಿಕರ ವಿರುದ್ಧ ವಿವಿಧ ಕಾಯ್ದೆಗಳಡಿ ದೂರು ದಾಖಲಿಸುತ್ತಿವೆ ಎಂದು ಕೊಡಗು ರಕ್ಷಣಾ ವೇದಿಕೆ ಆರೋಪಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ ಸಾಲ ಮರುಪಾವತಿಗಾಗಿ ಸಾಲಗಾರರಿಗೆ ಕಿರುಕುಳ ನೀಡಿದರೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಮಸೂದೆಯನ್ನು ಇತ್ತೀಚೆಗೆ ರಾಜ್ಯ ಸಹಕಾರ ಸಚಿವರೇ ಮಂಡಿಸಿದ್ದರೂ ಸಹಕಾರ ಸಂಘಗಳೇ ದೂರು ದಾಖಲಿಸಿ ಮಾನಸಿಕ ಹಿಂಸೆ ನೀಡುತ್ತಿವೆ ಎಂದು ಆರೋಪಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಅತಿವೃಷ್ಟಿ, ಕೋವಿಡ್ ಸಂಕಷ್ಟ ಮತ್ತು ವನ್ಯಜೀವಿಗಳ ದಾಳಿಯಿಂದ ಕಂಗೆಟ್ಟಿರುವ ಜಿಲ್ಲೆಯ ಕೃಷಿಕರು ಸಾಲ ಮರುಪಾವತಿಗಾಗಿ ದಿನ ವಿಸ್ತರಿಸಲು ಕೋರಿಕೊಂಡಿದ್ದಾರೆ. ಅಲ್ಲದೆ ಮುಂದಿನ ಫಸಲು ಬರುವವರೆಗೆ ಕಾಯುವಂತೆ ಮನವಿ ಮಾಡಿದ್ದಾರೆ. ಆದರೆ ಯಾವುದೇ ಕೋರಿಕೆಗಳಿಗೂ ಸ್ಪಂದಿಸದ ಸಹಕಾರ ಸಂಘಗಳು ನೋಟಿಸ್ ನೀಡಿ ನಂತರ ಸಹಕಾರ ಕಾಯ್ದೆ, ಸರ್ಫೆಸ್ ಆಕ್ಟ್, ಸಿವಿಲ್, ಕ್ರಿಮಿನಲ್ ಧಾವೆಯನ್ನು ಹೂಡಿ ಬೆಳೆಗಾರರನ್ನು ಶೋಷಣೆಗೆ ಗುರಿ ಪಡಿಸುತ್ತಿವೆ. ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಬದಲು ನ್ಯಾಯಾಲಯಗಳಲ್ಲಿ ವಿಚಾರಣೆ ಎದುರಿಸುವ ಪರಿಸ್ಥಿತಿ ಬಂದೊದಗಿದೆ ಎಂದು ದೂರಿದ್ದಾರೆ.
ತಕ್ಷಣ ಶಾಸಕರುಗಳು ಹಾಗೂ ಸಂಸದರು ಬೆಳೆಗಾರರ ನೆರವಿಗೆ ಬರಲಿ ಎಂದು ಪವನ್ ಪೆಮ್ಮಯ್ಯ ಒತ್ತಾಯಿಸಿದ್ದಾರೆ. ಸಾಲ ಮರುಪಾವತಿಗೆ ಸಹಕಾರ ಸಂಘಗಳು ಕನಿಷ್ಟ ೬ ರಿಂದ ೮ ತಿಂಗಳ ಕಾಲಾವಕಾಶ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.