ಮಡಿಕೇರಿ, ಅ. ೩ : ಮಡಿಕೇರಿ ನಗರಸಭೆಯ ಆಡಳಿತ ಮಂಡಳಿ ರಚನೆಗೆ ಕೊನೆಗೂ ಮುಹೂರ್ತ ಸಮೀಪವಾಗುತ್ತಿದೆ. ಕೆಲವು ಕಾರಣಾಂತರಗಳಿAದ ಜಿಲ್ಲೆಯ ಏಕೈಕ ನಗರಸಭೆಯಾಗಿರುವ ಮಡಿಕೇರಿಯಲ್ಲಿ ಚುನಾಯಿತ ಜನಪ್ರತಿನಿಧಿಗಳ ಆಡಳಿತವಿಲ್ಲದೆ ಬಹುತೇಕ ಎರಡೂವರೆ ವರ್ಷಗಳ ಸುದೀರ್ಘ ಅವಧಿ (೩೦ ತಿಂಗಳು) ಕಳೆದು ಹೋಗಿದೆ. ಇದೀಗ ಆಡಳಿತ ಮಂಡಳಿ ರಚನೆಗೆ ಹಸಿರು ನಿಶಾನೆ ಹೊರಬಿದ್ದಿದ್ದು ಮುಂದಿನ ಕೆಲವು ದಿನಗಳಲ್ಲಿ ನೂತನ ಅಧ್ಯಕ್ಷ - ಉಪಾಧ್ಯಕ್ಷರು ಪಟ್ಟ ಅಲಂಕರಿಸಲಿದ್ದಾರೆ. ಈ ನಿಟ್ಟಿನಲ್ಲಿ ಇದೀಗ ಮಡಿಕೇರಿ ನಗರದಲ್ಲಿ ಈ ವಿಚಾರಕ್ಕೆ ಸಂಬAಧಿಸಿದAತೆ ಬಿಸಿಬಿಸಿ ಚರ್ಚೆ ಆರಂಭವಾಗಿವೆ.

೨೦೧೯ರ ಬಳಿಕ ನಗರಸಭೆಗೆ ಚುನಾವಣೆಯೇ ನಡೆದಿರಲಿಲ್ಲ. ಇದರ ಹಿಂದೆ ಹಲವಾರು ಕಾರಣಗಳು ಇದ್ದು ಜನತೆ ಗೊಂದಲದಲ್ಲಿದ್ದರು. ಬಳಿಕ ಸುದೀರ್ಘ ಪ್ರಯತ್ನಗಳ ಬಳಿಕ ಕಳೆದ ಏಪ್ರಿಲ್ ಅಂತ್ಯದಲ್ಲಿ ನಗರಸಭಾ ಚುನಾವಣೆ ನಡೆದಿತ್ತು. ೨೩ ವಾರ್ಡ್ಗಳಿಗೆ ಸದಸ್ಯರುಗಳು ಚುನಾಯಿತರಾದ ಬೆನ್ನಲ್ಲೇ ಎದುರಾದ ಕೊರೊನಾ ಪರಿಸ್ಥಿತಿಯಿಂದಾಗಿ ಚುನಾವಣೆ ನಡೆದರೂ ಆಡಳಿತ ಮಂಡಳಿ ಮಾತ್ರ ರಚನೆಗೊಳ್ಳಲಿಲ್ಲ. ಇದೀಗ ಇದಕ್ಕೆ ಸರಕಾರ ಹಾಗೂ ಚುನಾವಣಾ ಆಯೋಗ ‘ಅಸ್ತು’ ಎಂದಿದ್ದು ಮುಂದಿನ ಕೆಲ ದಿನದಲ್ಲಿ ಅಧ್ಯಕ್ಷ - ಉಪಾಧ್ಯಕ್ಷರ ಆಯ್ಕೆ ಅಂತಿಮವಾಗಲಿದೆ.

ಈಗಾಗಲೇ ಸರಕಾರದಿಂದ ಬಂದಿರುವ ಸೂಚನೆಯಂತೆ ಜಿಲ್ಲಾಧಿಕಾರಿಗಳು ಚುನಾವಣಾಧಿಕಾರಿಯನ್ನಾಗಿ ಉಪವಿಭಾಗಾಧಿಕಾರಿ ಈಶ್ವರ್‌ಕುಮಾರ್ ಖಂಡು ಅವರನ್ನು ನೇಮಕ ಮಾಡಿದ್ದಾರೆ. ಇವರು ಇದಕ್ಕೆ ಅಧಿಕೃತವಾದ ದಿನಾಂಕವನ್ನು ನಿಗದಿಪಡಿಸುವುದಷ್ಟೆ ಬಾಕಿ ಉಳಿದಿದೆ.

ಮೀಸಲಾತಿ : ಅಧ್ಯಕ್ಷ ಸ್ಥಾನದ ಮೀಸಲಾತಿ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಬಿ.ಸಿ.ಎ. ಮಹಿಳೆಗೆ ನಿಗದಿಯಾಗಿದೆ.

ಸದಸ್ಯರ ಬಲ : ನಗರಸಭೆಯ ೨೩ ವಾರ್ಡ್ಗಳ ಪೈಕಿ ಬಿ.ಜೆ.ಪಿ. ೧೬, ಎಸ್.ಡಿ.ಪಿ.ಐ ೫, ಕಾಂಗ್ರೆಸ್ ಹಾಗೂ ಜೆ.ಡಿ.ಎಸ್. ಪಕ್ಷ ತಲಾ ಒಂದು ಸ್ಥಾನದಲ್ಲಿ ಜಯಗಳಿಸಿವೆ.

ಬಹುಮತ ಹೊಂದಿರುವ ಬಿ.ಜೆ.ಪಿ. ಪಕ್ಷ ಅಧಿಕಾರ ನಡೆಸುವುದು ಖಚಿತವಾಗಿದ್ದು, ಈ ಪಕ್ಷದ ಚುನಾಯಿತ ಸದಸ್ಯರಲ್ಲಿ ಯಾರು ಅವಕಾಶ ಪಡೆಯಲಿದ್ದಾರೆ ಎಂಬದಷ್ಟೆ ಪ್ರಶ್ನೆಯಾಗಿದೆ.

ಸಾಮಾನ್ಯ ಮಹಿಳೆ ಮೀಸಲಾತಿಯಲ್ಲಿ ನೆರವಂಡ ಅನಿತಾ ಪೂವಯ್ಯ ಹಾಗೂ ಬಾಳೆಯಡ ಸಬಿತಾ ಅವರು ಜಯಗಳಿಸಿದ್ದಾರೆ. ಆದರೆ ಈ ಮೀಸಲಾತಿಗೆ ಇನ್ನಿತರರೂ ಸ್ಪರ್ಧೆ ಮಾಡಬಹುದಾಗಿದ್ದು, ಇವರುಗಳೊಂದಿಗೆ ಇತರ ಮಹಿಳಾ ಸದಸ್ಯರಾದ ಸವಿತಾ ರಾಕೇಶ್, ಶಾರದಾ ನಾಗರಾಜು, ಉಷಾಕುಮಾರಿ, ಚಿತ್ರಾವತಿ, ಮಂಜುಳಾ, ಶ್ವೇತಾ ಹಾಗೂ ಕಲಾವತಿ ಅವರುಗಳು ಇದ್ದಾರೆ.