ಮಡಿಕೇರಿ, ಸೆ. ೩: ದಸರಾ ಹಾಗೂ ತುಲಾ ಸಂಕ್ರಮಣ ಹಿನ್ನೆಲೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಾ. ೭ ರಿಂದ ೧೭ರ ತನಕ ಮಡಿಕೇರಿ ನಗರದ ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಕೋವಿಡ್-೧೯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಗರ ವ್ಯಾಪ್ತಿಯಲ್ಲಿರುವ ಪ್ರವಾಸಿ ತಾಣಗಳಾದ ರಾಜಾಸೀಟ್, ಜನರಲ್ ತಿಮ್ಮಯ್ಯ ಮ್ಯೂಸಿಯಂ, ಗದ್ದಿಗೆ, ಕೋಟೆ, ನೆಹರು ಮಂಟಪಗಳಿಗೆ ಸಾರ್ವಜನಿಕರ ಹಾಗೂ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಆದೇಶದಲ್ಲಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಆದೇಶದ ದುರುಪಯೋಗ ಅಥವಾ ಉಲ್ಲಂಘನೆಯು ಭಾರತ ದಂಡ ಸಂಹಿತೆ ಕಲಂ ೧೮೮, ದಿ ಕರ್ನಾಟಕ ಎಪಿಡಮಿಕ್ ಡಿಸೀಸಸ್ ಆ್ಯಕ್ಟ್ ೨೦೨೦, ಡಿಸಾಸ್ಟರ್ ಮ್ಯಾನೇಜ್ಮೆಂಟ್ ಆಕ್ಟ್ ೨೦೦೫ರಡಿ ಮತ್ತು ವಿವಿಧ ಕಾಯಿದೆಗಳಡಿ ದಂಡನೀಯವಾಗಿದೆ ಎಂದು ಎಚ್ಚರಿಸಿದ್ದಾರೆ.
(ಮೊದಲ ಪುಟದಿಂದ) ದಸರಾ : ಪರಿಷ್ಕೃತ ನಿಯಮ
ಮಡಿಕೇರಿ ದಸರಾ ಸಂಬAಧ ಜಿಲ್ಲಾಧಿಕಾರಿ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದ್ದಾರೆ. ಕರಗಗಳಲ್ಲಿ ಪಾಲ್ಗೊಳ್ಳುವ ಪ್ರತಿ ಕರಗಗಳಲ್ಲಿ ಗರಿಷ್ಠ ೨೫ ಮಂದಿಗೆ ಮಾತ್ರ ಅವಕಾಶ ಇರುತ್ತದೆ. ಕರಗ ಮನೆಮನೆಗೆ ತೆರಳುವ ವೇಳೆ ಗರಿಷ್ಠ ೧೦ ಮಂದಿ ಭಾಗವಹಿಸಬಹುದು. ಈ ೨ ಆಚರಣೆ ವೇಳೆ ಭಾಗವಹಿಸುವವರು ಕನಿಷ್ಟ ೧ ಡೋಸ್ ಲಸಿಕೆ ಮತ್ತು ೭೨ ಗಂಟೆಯೊಳಗಿನ ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ವರದಿ ಕಡ್ಡಾಯವಾಗಿ ಹೊಂದಿರಬೇಕು.
ಕೋವಿಡ್ ಮಾರ್ಗಸೂಚಿ ಜೊತೆಗೆ ದೇವಾಲಯಗಳ ಒಳಭಾಗದಲ್ಲಿ ಧಾರ್ಮಿಕ ಆಚರಣೆಗೆ ಅವಕಾಶವಿರುತ್ತದೆ. ಆದರೂ, ಸರಕಾರ ಕಾಲಕಾಲಕ್ಕೆ ನೀಡುವ ಸುತ್ತೋಲೆ, ಮಾರ್ಗಸೂಚಿ ಪಾಲಿಸತಕ್ಕದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.