ಗೋಣಿಕೊಪ್ಪ ವರದಿ, ಅ. ೩: ಕುಟ್ಟ-ಬಾಡಗ ಗ್ರಾಮದ ಈಚುಮಾರು ಪರಂಬು ಪೈಸಾರಿ ಜಾಗವನ್ನು ಆದಿ ವಾಸಿಗಳಿಗೆ ವಸತಿ ಯೋಜನೆಗೆ ಮಂಜೂರು ಮಾಡ ಬೇಕು ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತ ಆದಿವಾಸಿಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಕೆ. ಅಪ್ಪು ಒತ್ತಾಯಿಸಿದ್ದಾರೆ. ಹಲವು ವರ್ಷದಿಂದ ಈ ಬಗ್ಗೆ ಹೋರಾಟ ನಡೆಸುತ್ತಿದ್ದರೂ, ಸರ್ಕಾರ ಈ ಬಗ್ಗೆ ಆದಿವಾಸಿ ಪರವಾಗಿ ಸ್ಪಂದನ ನೀಡುತ್ತಿಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ೨೦ ವರ್ಷದಿಂದ ಸುಮಾರು ೨೦ ಆದಿವಾಸಿ ಕುಟುಂಬ ವಾಸವಿದ್ದು, ಕಾರಣಾಂತರದಿAದ ಜಾಗದಿಂದ ಕೆಲವರು ಹೊರಗೆ ಹೋಗಿ ಜೀವಿಸುತ್ತಿದ್ದಾರೆ. ಸುಮಾರು ೧೮ ಎಕರೆ ಜಾಗ ಬೇರೆಯವರು ಅತಿಕ್ರಮಿಸಿಕೊಂಡಿದ್ದು, ಇದನ್ನು ಹಿಂಪಡೆದು ಸ್ಥಳೀಯ ಫಲಾನುಭವಿಗಳಿಗೆ ವಿತರಿಸಲು ಸಾಕಷ್ಟು ಬಾರಿ, ಕಂದಾಯ ಇಲಾಖೆ, ಜಿಲ್ಲಾಧಿಕಾರಿಗೂ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಇಲ್ಲಿಗೆ ಸ್ಥಳೀಯ ಗ್ರಾಮ ಪಂಚಾಯಿತಿ ಕುಡಿಯುವ ನೀರು, ವಿದ್ಯುತ್, ರಸ್ತೆ ಸಂಪರ್ಕ ಕೂಡ ಅಭಿವೃದ್ಧಿಪಡಿಸಿದೆ. ಇಲ್ಲಿ ೨೦ ಕುಟುಂಬಕ್ಕೆ ವಸತಿ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ವೀರಾಜಪೇಟೆ ತಾಲೂಕು ಅಧ್ಯಕ್ಷ ಉದಯ, ಸದಸ್ಯ ಶರಣ್ ಇದ್ದರು.