ಮಡಿಕೇರಿ, ಸೆ. ೨: ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟು ಪಾಲನೆ ಜೊತೆಗೆ ಸಾಂಪ್ರದಾಯಿಕವಾಗಿ ನಾಡಹಬ್ಬ ದಸರಾವನ್ನು ಆಚರಣೆ ಮಾಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ದಸರಾ ಆಚರಣೆ ಕುರಿತು ಮಾತನಾಡಿದ ಅವರು, ಮಡಿಕೇರಿ ದಸರಾವನ್ನು ಈ ಬಾರಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸ ಲಾಗುವುದು. ತಾ. ೭ ರಂದು ಪಂಪಿನಕೆರೆಯಲ್ಲಿ ೪ ಶಕ್ತಿದೇವತೆಗಳ ಕರಗ ಮೂಲಕ ಆಚರಣೆಗೆ ಚಾಲನೆ ದೊರೆಯಲಿದೆ. ಈ ಸಂದರ್ಭ ಒಂದು ಕರಗದ ಎದುರು ಕನಿಷ್ಟ ೨೫ ಜನ ಮೀರದಂತೆ ಇರಬೇಕು. ಕಳೆದ ಬಾರಿ ಮನೆ ಮನೆ ಪ್ರದಕ್ಷಿಣೆಗೆ ನಿರ್ಬಂಧ ಹೇರಲಾಗಿತ್ತು. ತಾ. ೮ ರಿಂದ ಈ ಬಾರಿ ಮನೆ ಮನೆಗೆ ತೆರಳಬಹುದು. ಆದರೆ, ಗರಿಷ್ಠ ೧೦ ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದರು.
ದಶಮಂಟಪ ಎದುರು ೧೦೦ ಜನ
ಮಡಿಕೇರಿ ದಸರಾದ ಆಕರ್ಷಣೆಯಲ್ಲಿ ಪ್ರಮುಖವಾಗಿರುವ ದಶಮಂಟಪ ಶೋಭಾಯಾತ್ರೆಗೆ ಕಳೆದ ವರ್ಷಕ್ಕಿಂತ ಕೆಲವೊಂದು ಸಡಿಲಿಕೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.
ಒಂದು ಮಂಟಪದ ಎದುರು ೧೦೦ ಜನರು ಇರಲು ಅವಕಾಶ ನೀಡಲಾಗುತ್ತದೆ. ಒಟ್ಟು ಒಂದು ಸಾವಿರ ಜನ ದಸರಾ ವೀಕ್ಷಿಸಲು ಅನುವು ಮಾಡಿಕೊಡಲಾಗುವುದು ಎಂದರು. ದಶ ಮಂಟಪಗಳು ರಾತ್ರಿಯಿಡೀ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳ ಬಹುದು. ಬಳಿಕ ಬನ್ನಿ ಮಂಟಪದಲ್ಲಿ ಬನ್ನಿ ಕಡಿಯುವುದ ರೊಂದಿಗೆ ಶೋಭಾಯಾತ್ರೆ ಮುಕ್ತಾಯಗೊಳ್ಳುತ್ತದೆ ಎಂದು ಮಾಹಿತಿಯಿತ್ತರು.
ವೇದಿಕೆ ಕಾರ್ಯಕ್ರಮಗಳಿಲ್ಲ
ದಸರಾ ಸಂದರ್ಭ ಆಯೋಜಿಸುವ ವಿವಿಧ ವೇದಿಕೆ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಬಾರಿ ಇಲ್ಲ. ಕೇವಲ ದಶಮಂಟಪ ಶೋಭಾಯಾತ್ರೆ ಮಾತ್ರ ನಡೆಯಲಿದೆ ಎಂದು ಸಚಿವರು ಸ್ಪಷ್ಟವಾಗಿ ತಿಳಿಸಿದರು.
ಶಾಸಕರುಗಳಾದ ಎಂ.ಪಿ. ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯರುಗಳಾದ ಶಾಂತೆಯAಡ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭನ್ವರ್ ಸಿಂಗ್ ಮೀನಾ ಹಾಜರಿದ್ದರು.