ದಸರಾ ಉದ್ಘಾಟನೆ: ಎಸ್.ಎಂ. ಕೃಷ್ಣಗೆ ಅಧಿಕೃತ ಆಹ್ವಾನ ನೀಡಿದ ಸಿಎಂ

ಬೆAಗಳೂರು, ಅ. ೨: ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಗೌರವ ನೀಡಿರುವುದು ನನ್ನ ಬಾಳಿನ ಸುದೈವ ಎಂದು ಮಾಜಿ ಮುಖ್ಯಮಂತ್ರಿ, ಹಿರಿಯ ಮುತ್ಸದ್ಧಿ ಎಸ್.ಎಂ. ಕೃಷ್ಣ ಪ್ರತಿಪಾದಿಸಿದ್ದಾರೆ. ಸದಾಶಿವನಗರದಲ್ಲಿನ ತಮ್ಮ ನಿವಾಸದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಹಕಾರ ಸಚಿವರು ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಕಂದಾಯ ಸಚಿವ ಅಶೋಕ್ ಅವರಿಂದ ೨೦೨೧ರ ಸಾಲಿನ ಮೈಸೂರು ದಸರಾ ಉದ್ಘಾಟನೆಯ ಆಮಂತ್ರಣ ಸ್ವೀಕರಿಸಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ನಾಡಿನ ಸರ್ವತೋಮುಖ ಅಭಿವೃದ್ಧಿಯಾಗಲಿ. ನನ್ನ ವ್ಯಕ್ತಿತ್ವ ರೂಪಿಸಲು ರಾಮಕೃಷ್ಣ ಆಶ್ರಮ ಬಹಳ ಪ್ರಭಾವ ಬೀರಿದೆ. ನನ್ನ ಶಾಲೆ ಮತ್ತು ಕಾಲೇಜು ದಿನಗಳನ್ನು ಮೈಸೂರಿನಲ್ಲಿ ಕಳೆದಿದ್ದೆ. ಇದೀಗ ದಸರಾ ಉದ್ಘಾಟನೆ ಮಾಡುವ ಸುಯೋಗ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು. ದಸರಾ ಉದ್ಘಾಟನೆಗೆ ಎಸ್.ಎಂ. ಕೃಷ್ಣರನ್ನು ಆಹ್ವಾನಿಸಿದ್ದೇವೆ. ಕನ್ನಡಿಗರಿಗೆ ಪ್ರೀತಿಯ ವ್ಯಕ್ತಿ ಇವರು, ನಮಗೆಲ್ಲಾ ಆದರಣೀಯ. ಎಸ್.ಎಂ. ಕೃಷ್ಣ ನಮ್ಮ ಆಮಂತ್ರಣ ಒಪ್ಪಿಕೊಂಡಿದ್ದಾರೆ. ಹೀಗಾಗಿ ನಾವು ಅವರಿಗೆ ಆಭಾರಿಯಾಗಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಪಂಜಾಬ್, ಹರಿಯಾಣದಾದ್ಯಂತ ರೈತರಿಂದ ಪ್ರತಿಭಟನೆ

ಚಂಡೀಗಢ, ಅ. ೨: ಭತ್ತ ಖರೀದಿ ಮುಂದೂಡುತ್ತಿರುವುದನ್ನು ವಿರೋಧಿಸಿ ಪಂಜಾಬ್ ಮತ್ತು ಹರಿಯಾಣದ ರೈತರು ಅನೇಕ ಸ್ಥಳಗಳಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಭತ್ತ ಖರೀದಿಯಲ್ಲಿನ ವಿಳಂಬ ಖಂಡಿಸಿ ಎರಡೂ ರಾಜ್ಯಗಳ ಶಾಸಕರ ನಿವಾಸಗಳ ಹೊರಗೆ ಪ್ರತಿಭಟನೆ ನಡೆಸುವಂತೆ ಸಂಯುಕ್ತ ಕಿಸಾನ್ ಮೋರ್ಚಾ ಶುಕ್ರವಾರ ಕರೆ ನೀಡಿತ್ತು. ಅದರಂತೆ ಇಂದು ಪಂಜಾಬ್ ಮತ್ತು ಹರಿಯಾಣದ ವಿವಿಧ ಸ್ಥಳಗಳಲ್ಲಿ ರೈತರು ಪ್ರತಿಭಟನೆ ನಡೆಸಿದರು. ಸಾಮಾನ್ಯವಾಗಿ ಅಕ್ಟೋಬರ್ ೧ ರಿಂದ ಭತ್ತ ಖರೀದಿ ಆರಂಭವಾಗುತ್ತದೆ. ಆದರೆ ಕೇಂದ್ರ ಸರ್ಕಾರ ಗುರುವಾರ ಪಂಜಾಬ್ ಮತ್ತು ಹರಿಯಾಣದಲ್ಲಿ ಖಾರಿಫ್ ಭತ್ತ ಖರೀದಿಯನ್ನು ಅಕ್ಟೋಬರ್ ೧೧ ರವರೆಗೆ ಮುಂದೂಡಿದೆ. ಈ ಮಧ್ಯೆ, ಕೇಂದ್ರದ ಹೊಸ ಕಾನೂನುಗಳ ವಿರುದ್ಧದ ರೈತರ ಪ್ರತಿಭಟನೆ ದಿನದಿಂದ ದಿನಕ್ಕೆ ಹಿಂಸಾತ್ಮಕವಾಗುತ್ತಿದೆ ಎಂದು ಹರಿಯಾಣ ಸಚಿವ ಅನಿಲ್ ವಿಜ್ ಅವರು ಶನಿವಾರ ಹೇಳಿದ್ದಾರೆ. ಮಹಾತ್ಮ ಗಾಂಧಿಯವರ ದೇಶದಲ್ಲಿ ಹಿಂಸಾತ್ಮಕ ಚಳುವಳಿಯನ್ನು ಅನುಮತಿಸಲಾಗುವುದಿಲ್ಲ ಎಂದು ಅನಿಲ್ ವಿಜ್ ಟ್ವೀಟ್ ಮಾಡಿದ್ದಾರೆ.

೧೬ ಐಟಿಬಿಪಿ ಸಿಬ್ಬಂದಿ ರಕ್ಷಿಸಿದ ಭಾರತೀಯ ಸೇನೆ

ನವದೆಹಲಿ, ಅ. ೨: ಪ್ರತಿಕೂಲ ಹವಾಮಾನದಿಂದಾಗಿ ಚೀನಾ-ಭಾರತ ಗಡಿಯ ಕುಟಿ ಕಣಿವೆ ಬಳಿ ಸಿಲುಕಿಕೊಂಡಿದ್ದ ೧೬ ಐಟಿಬಿಪಿ ಸಿಬ್ಬಂದಿಯನ್ನು ಭಾರತೀಯ ಸೇನೆಯ ಪಂಚ ಶೂಲ್ ಬ್ರಿಗೇಡ್‌ನಿಂದ ಶನಿವಾರ ರಕ್ಷಿಸಲಾಗಿದೆ. ಬೆಟ್ಟ, ಹಳ್ಳಗಳಿಂದ ಕೂಡಿದ ಒರಟಾದ ಕಣಿವೆಯಲ್ಲಿ ಗಸ್ತು ತಿರುಗುವಾಗ ಐಟಿಬಿಪಿ ಸಿಬ್ಬಂದಿ ಪ್ರತಿಕೂಲ ಹವಾಮಾನದಲ್ಲಿ ಸಿಲುಕಿದ್ದಾಗಿ ಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಮಾಹಿತಿ ತಿಳಿದ ಕೂಡಲೇ ಸೇನೆಯ ಪಂಚಶೂಲ್ ಬ್ರಿಗೇಡ್ ಭಾರತ- ಚೀನಾ ಗಡಿ ಪ್ರದೇಶದ ಕುಟಿ ಕಣವೆ ವಲಯಕ್ಕೆ ಧಾವಿಸಿ, ಕ್ಷಿಪ್ರ ರಕ್ಷಣಾ ಕಾರ್ಯಾಚರಣೆ ನಡೆಸುವ ಮೂಲಕ ಸಂಕಷ್ಟದಲ್ಲಿ ಸಿಲುಕಿದ ಐಟಿಬಿಪಿ ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ಪಂಚಶೂಲ್ ಬ್ರಿಗೇಡ್‌ನ ಕ್ಯಾಪ್ಟನ್ ಕುಲಪೀದ್ ಸಿಂಗ್ ತಿಳಿಸಿದ್ದಾರೆ.

ಏರ್ ಇಂಡಿಯಾ ಕುರಿತು ಯಾವುದೇ ನಿರ್ಧಾರ

ತೆಗೆದುಕೊಂಡಿಲ್ಲ: ಪಿಯೂಷ್ ಗೋಯಲ್

ದುಬೈ, ಅ. ೨: ಏರ್ ಇಂಡಿಯಾ ಕುರಿತು ಕೇಂದ್ರ ಸರ್ಕಾರ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಮತ್ತು ಬಿಡ್‌ನ ಅಂತಿಮ ವಿಜೇತರನ್ನು ಉತ್ತಮವಾದ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗುವುದು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಶನಿವಾರ ಹೇಳಿದ್ದಾರೆ. ನಾನು ಹಿಂದಿನ ದಿನದಿಂದ ದುಬೈನಲ್ಲಿದ್ದೇನೆ. ಹೀಗಾಗಿ ಏರ್ ಇಂಡಿಯಾ ಕುರಿತು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ನಾನು ಭಾವಿಸುತ್ತೇನೆ. ಖಂಡಿತವಾಗಿಯೂ ಬಿಡ್‌ಗಳನ್ನು ಆಹ್ವಾನಿಸಲಾಗಿದೆ ಮತ್ತು ಅದನ್ನು ಅಧಿಕಾರಿಗಳು ಮೌಲ್ಯಮಾಪನ ಮಾಡುತ್ತಾರೆ ಮತ್ತು ಸರಿಯಾದ ಸಮಯದಲ್ಲಿ ಬಿಡ್‌ನ ಅಂತಿಮ ವಿಜೇತರನ್ನು ಆಯ್ಕೆ ಮಾಡಲಾಗುವುದು ಎಂದು ಗೋಯಲ್ ದುಬೈನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.