ಕಣಿವೆ, ಅ. ೧: ಅರೆ ನೀರಾವರಿ ಪ್ರದೇಶದ ರೈತರ ಪ್ರಮುಖ ಬೆಳೆಯಾದ ಮುಸುಕಿನ ಜೋಳಕ್ಕೆ ಮಾರುಕಟ್ಟೆಯಲ್ಲಿ ದಿಢೀರನೇ ದರ ಕುಸಿತ ಕಂಡಿದೆ.

ಹಾಗಾಗಿ ಜೋಳ ಬೆಳೆದ ರೈತರಲ್ಲಿ ಮತ್ತೆ ನಷ್ಟದ ಆತಂಕ ತಲೆದೋರಿದ್ದು, ಕೂಡಲೇ ಸರ್ಕಾರ ಮುಸುಕಿನ ಜೋಳಕ್ಕೆ ಬೆಂಬಲ ಬೆಲೆ ಘೋಷಿಸಬೇಕು. ಕಳೆದ ಎರಡು ವರ್ಷಗಳಿಂದ ಸತತವಾಗಿ ದರ ಕುಸಿತದಿಂದಾಗಿ ನೊಂದು ಬೆಂದಿರುವ ಕೃಷಿಕನ ನೆರವಿಗೆ ಸರ್ಕಾರ ಕೂಡಲೇ ಧಾವಿಸಬೇಕು ಎಂಬುದು ರೈತರ ಆಗ್ರಹ ಪೂರ್ವಕ ಕೋರಿಕೆಯಾಗಿದೆ.

೧೦೦ ಕೆ.ಜಿ. ತೂಕದ ಒಂದು ಕ್ವಿಂಟಾಲ್ ಹಸಿ ಜೋಳಕ್ಕೆ ಮಾರುಕಟ್ಟೆಯಲ್ಲಿ ಕೇವಲ ರೂ. ೧೧೫೦ ರಿಂದ ೧೨೦೦ ಇದೆ. ಹಾಗಾಗಿ ರೈತರು ಸರಿ ಸುಮಾರು ೧೨೦ ರಿಂದ ೧೩೦ ದಿನಗಳ ಕಾಲ ಕಷ್ಟಪಟ್ಟು ಹಣ ಸುರಿದು ಬೆಳೆದ ಜೋಳದ ಬೆಳೆಗೆ ಪೂರಕ ಬೆಲೆ ಸಿಗದ ಕಾರಣ ಬೇಸತ್ತಿದ್ದಾರೆ.

ಖರ್ಚು ಮಾಡಿದ ಹಣವೂ ಕೂಡ ಕೈಗೆ ಸಿಗುತ್ತಿಲ್ಲ. ಹಾಗಾಗಿ ಸರ್ಕಾರ ಕೂಡಲೇ ಮುಸುಕಿನ ಜೋಳಕ್ಕೆ ಬೆಲೆ ನೀತಿ ಅಥವಾ ಬೆಂಬಲ ಬೆಲೆ ಪ್ರಕಟಿಸಬೇಕು ಎಂದು ರೈತರಾದ ಚಿಕ್ಕಹೊಸೂರು ಮರಿಯಪ್ಪ, ಬಸವರಾಜು, ಚಿಕ್ಕವೀರಪ್ಪ, ಸದಾಶಿವ ಮೊದಲಾದವರು ಆಗ್ರಹಿಸಿದ್ದಾರೆ.

ಒಂದು ಎಕರೆ ಭೂಮಿಯಲ್ಲಿ ಮುಸುಕಿನ ಜೋಳ ಬೆಳೆಯಲು ಆರಂಭದ ಉಳುಮೆ, ಬಿತ್ತನೆ, ರಸಗೊಬ್ಬರ, ಆಳು - ಕಾಳು, ನೇಗಿಲು ಬಿಡುವುದು, ಕೀಟನಾಶಕ ಅಳವಡಿಕೆ, ನೀರು ನಿರ್ವಹಣೆ ಸೇರಿದಂತೆ ಇನ್ನಿತರ ವೆಚ್ಚಗಳಿಗೆ ರೂ. ೧೫ ರಿಂದ ೨೦ ಸಾವಿರ ವ್ಯಯವಾಗುತ್ತದೆ. ಬಳಿಕ ಫಸಲು ಕಟಾವಿಗೆ ಬಂದ ನಂತರ ಜೋಳದ ಗಿಡದಿಂದ ಫಸಲು ತುಂಬಿದ ಗೊಂಚಲು ಬಿಡಿಸಿ ರಾಶಿ ಮಾಡಲು ರೂ. ೪ ರಿಂದ ೫ ಸಾವಿರ ವ್ಯಯವಾಗುತ್ತದೆ. ನಂತರ ಜೋಳದ ಕಾಳು ಬಿಡಿಸುವ ಯಂತ್ರಕ್ಕೆ ಚೀಲವೊಂದಕ್ಕೆ ರೂ. ೮೦ ನಂತೆ ಒಂದು ಎಕರೆಯ ಫಸಲು ಬಿಡಿಸಲು ಕನಿಷ್ಟ ೨ ರಿಂದ ೩ ಸಾವಿರ ವ್ಯಯವಾಗುತ್ತದೆ. ಹೀಗೆ ಒಂದು ಎಕರೆಗೆ ೨೦ ರಿಂದ ೨೫ ಸಾವಿರ ವ್ಯಯವಾಗುತ್ತದೆ.

ಆ ಒಂದು ಎಕರೆ ಭೂಮಿಯಲ್ಲಿ ಕನಿಷ್ಟ ೨೫ ರಿಂದ ೩೦ ಕ್ವಿಂಟಾಲ್ ಜೋಳದ ಫಸಲು ಸಿಗುತ್ತದೆ. ಈಗ ಮಾರುಕಟ್ಟೆಯಲ್ಲಿ ಇರುವ ಕನಿಷ್ಟ ದರ ರೂ. ೧೨೦೦ ರಂತೆ ೨೫ ಕ್ವಿಂಟಾಲ್‌ಗೆ ೩೨ ಸಾವಿರಗಳು ದೊರಕುತ್ತದೆ. ಆದರೆ ಮಾಡಿದ ಖರ್ಚು ಹಾಗೂ ಶ್ರಮ ಆನೆಯ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆಯಂತಾಗುತ್ತಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಒಂದು ಕ್ವಿಂಟಾಲ್ ಜೋಳಕ್ಕೆ ರೂ. ೧೪೦೦ ಇತ್ತು. ಹಾಗೆಯೇ ಒಣಗಿಸಿದ ಜೋಳಕ್ಕೆ ಒಂದು ಕ್ವಿಂಟಾಲ್‌ಗೆ ರೂ. ೧೭೦೦ ಇತ್ತು.

ಒಟ್ಟಾರೆ ಕಳೆದ ಎರಡೂ ವರ್ಷಗಳಿಂದಲೂ ಅನ್ನದಾತ ಬೆಳೆಯುತ್ತಿರುವ ಯಾವುದೇ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೇ ಇರುವುದು ಮಾತ್ರ ಕೃಷಿಕರಲ್ಲಿ ಭ್ರಮನಿರಸನ ಉಂಟುಮಾಡಿದೆ.

ಸರ್ಕಾರ ಕೂಡಲೇ ಜೋಳಕ್ಕೆ ಬೆಂಬಲ ಬೆಲೆ ಘೋಷಿಸಿ ರೈತ ಸಮುದಾಯಕ್ಕೆ ನೆರವಾಗಬೇಕಿದೆ. ರಾಗಿ, ಭತ್ತ, ದ್ವಿದಳ ಧಾನ್ಯಗಳ ಮಾದರಿಯಲ್ಲಿ ಈ ಜೋಳದ ಫಸಲನ್ನು ಯಾವ ರೈತರೂ ಕೂಡ ಮನೆಗಳಲ್ಲಿ ಸಂಗ್ರಹಿಸಿಟ್ಟು ಬೆಲೆಗಾಗಿ ಕಾಯುವಂತಹ ಪರಿಸ್ಥಿತಿ ಈಗ ಇಲ್ಲ. ಈಗಷ್ಟೇ ಶಾಲೆಗಳು ಆರಂಭವಾಗಿದ್ದು ಮಕ್ಕಳಿಗೆ ಶಾಲಾ ಶುಲ್ಕ ತುಂಬಬೇಕಿದೆ. ಅಲ್ಲದೇ ಸಾಲ ಸೋಲ ಮಾಡಿ ತಂದ ಹಣವನ್ನು ಹಿಂದಿರುಗಿಸಬೇಕಿದೆ.

ಕೊರೊನಾ ಸಂಕಷ್ಟದಿAದ ಬಹಳಷ್ಟು ಮಂದಿ ಇನ್ನೂ ಕೂಡ ಹೊರಬಾರದ ವಿಷಮ ಪರಿಸ್ಥಿತಿ ಇರುವುದರಿಂದ ಸರ್ಕಾರ ಅಥವಾ ಜಿಲ್ಲಾಡಳಿತ ಕೂಡಲೇ ರೈತರ ನೆರವಿಗೆ ಬರಬೇಕಿದೆ ಎಂಬುದು ರೈತರ ಆಗ್ರಹವಾಗಿದೆ.

- ಕೆ.ಎಸ್. ಮೂರ್ತಿ