ಸೋಮವಾರಪೇಟೆ, ಅ. ೧: ಇಲ್ಲಿನ ರೋಟರಿ ಸಂಸ್ಥೆ ವತಿಯಿಂದ ಮಾನಸ ಸಭಾಂಗಣದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ನೇಷನ್ ಬಿಲ್ಡರ್ ಪ್ರಶಸ್ತಿ ಪ್ರದಾನ ಮತ್ತು ಕೋವಿಡ್ ಸಂದರ್ಭದಲ್ಲಿ ಅವಿರತ ಸೇವೆ ಸಲ್ಲಿಸಿದ ಜಿಲ್ಲೆಯ ವೈದ್ಯರುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ರೋಟರಿ ಸಂಸ್ಥೆಯ ಮಾಜಿ ಗವರ್ನರ್ ಸುರೇಶ್ ಚಂಗಪ್ಪ ಉದ್ಘಾಟಿಸಿದರು. ನಂತರ ಮಾತನಾಡಿ, ಕೊರೊನಾ ಹಿನ್ನೆಲೆ ಎಲ್ಲಾ ಇದ್ದು, ಏನೂ ಇಲ್ಲದ ಸ್ಥಿತಿಯಲ್ಲಿ ಬದುಕಬೇಕಾಗಿದೆ. ಸಮಾಜದಲ್ಲಿ ಪ್ರೀತಿ ವಾತ್ಸಲ್ಯವನ್ನು ಬೇರೆಯವರಿಗೆ ಹಂಚುವ ಮೂಲಕ ಶಾಂತಿ ನೆಲೆಸಲು ಸಾಧ್ಯ. ಮಕ್ಕಳಿಗೆ ಉತ್ತಮ ಆದರ್ಶಗಳನ್ನು ಹೇಳಿಕೊಡುವ ಮೂಲಕ ಮುಂದಿನ ಪೀಳಿಗೆಯನ್ನು ಬೆಳೆಸಬೇಕಿದೆ ಎಂದರು.
ದೇಶಕ್ಕೆ ಉತ್ತಮ ಪ್ರಜೆಗಳನ್ನು ನೀಡುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಅಂತೆಯೇ ಸಾರ್ವಜನಿಕರ ಆರೋಗ್ಯ ರಕ್ಷಣೆಯೊಂದಿಗೆ ಜೀವ ಉಳಿಸುವ ಮಹಾನ್ ಕಾರ್ಯದಲ್ಲಿ ವೈದ್ಯರುಗಳು ತೊಡಗಿಸಿಕೊಂಡಿದ್ದಾರೆ. ಇವರುಗಳಿಗೆ ಸಮಾಜ ಸದಾ ಗೌರವ ನೀಡಬೇಕಿದೆ ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಜಿಲ್ಲಾಸ್ಪತ್ರೆಯ ಆಡಳಿತ ಮಂಡಳಿಯ ಪ್ರಮುಖರಾದ ಡಾ. ಕೆ.ಜೆ. ಲೋಕೇಶ್, ಡಾ. ರಾಜೇಶ್, ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯ ಸ್ತಿçÃರೋಗ ತಜ್ಞ ಶಿವಪ್ರಸಾದ್, ಜನರಲ್ ಸರ್ಜನ್ ಎನ್. ಸತೀಶ್‌ಕುಮಾರ್, ಬೆಂಗಳೂರು ಸಾರ್ವಜನಿಕ ಆರೋಗ್ಯ ಕೇಂದ್ರದ ನಿವೃತ್ತ ಜಂಟಿ ನಿರ್ದೇಶಕ ಓ.ವಿ. ಕೃಷ್ಣಾನಂದ ಅವರುಗಳನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭ ಕಿರಗಂದೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ವಿ.ಎನ್. ವಿನೋದ, ಕಿಬ್ಬೆಟ್ಟ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ವಿಶಾಲಾಕ್ಷಿ ಹಾಗೂ ಕೂಡಿಗೆ ಕ್ರೀಡಾಶಾಲೆಯ ಮುಖ್ಯ ತರಬೇತುದಾರ ಡಿ.ಎಸ್. ವೆಂಕಟೇಶ್ ಅವರುಗಳಿಗೆ ‘ನೇಷನ್ ಬಿಲ್ಡರ್’ ಅವಾರ್ಡ್ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಲ್ಲಿನ ರೊಟರಿ ಸಂಸ್ಥೆಯ ಅಧ್ಯಕ್ಷ ಎಂ.ಎA. ಪ್ರಕಾಶ್‌ಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ವಲಯ ಕಾರ್ಯದರ್ಶಿ ವಸಂತ್‌ಕುಮಾರ್, ವಲಯ ಸೇನಾನಿ ಎಂ.ಡಿ. ಅಶೋಕ್, ರೋಟರಿ ಕಾರ್ಯದರ್ಶಿ ಡಿ.ಪಿ. ಧರ್ಮಪ್ಪ ಉಪಸ್ಥಿತರಿದ್ದರು.