ಶನಿವಾರಸಂತೆ, ಅ. ೧: ದುಂಡಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯಿತಿ ಮಾಸಿಕ ಸಭೆಯನ್ನು ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮ ಕಿರಣ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ದುಂಡಳ್ಳಿ ಗ್ರಾ.ಪಂ. ಅಮೃತ ಗ್ರಾಮ ಯೋಜನೆಯಲ್ಲಿ ಆಯ್ಕೆಯಾಗಿದ್ದು, ಗ್ರಾ.ಪಂ.ನಲ್ಲಿ ಬರುವ ಎಲ್ಲಾ ಗ್ರಾಮಗಳ ಮನೆಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ತೀರ್ಮಾನಿಸಲಾಯಿತು. ಡಿಜಿಟಲ್ ಗ್ರಂಥಾಲಯ ಕೆಲಸ ತುರ್ತಾಗಿ ಮಾಡಿಸುವಂತೆ ಹಾಗೂ ಎಲ್ಲಾ ಗ್ರಾಮಗಳಿಗೆ ಬೀದಿ ದೀಪ ಅಳವಡಿಸಲು ಸಭೆ ತೀರ್ಮಾನಿಸಿತು. ತಾ. ೨ ರಂದು (ಇಂದು) ದುಂಡಳ್ಳಿ ಕಸವಿಲೇವಾರಿ ಘಟಕವನ್ನು ಶಾಸಕರು ಉದ್ಘಾಟನೆ ಮಾಡಲಿರುವರು ಎಂದು ಮಾಹಿತಿ ನೀಡಲಾಯಿತು.
ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಅಂಗನವಾಡಿ ಕೇಂದ್ರದ ಸುತ್ತಮುತ್ತ ಕಸ ಹಾಕಿ ಅವ್ಯವಸ್ಥೆ ಆಗಿರುವ ಬಗ್ಗೆ ಸದಸ್ಯರುಗಳಾದ ಭವಾನಿ, ಸತ್ಯವತಿ, ಜಾನಕಿ ಅವರುಗಳು ಪ್ರಸ್ತಾಪ ಮಾಡಿ ಇದರ ಬಗ್ಗೆ ಸೂಕ್ತ ಕ್ರಮಕೈಗೊಂಡು ಸರಿಪಡಿಸುವಂತೆ ಆಗ್ರಹ ಮಾಡಿದರು.
ಸದಸ್ಯ ಡಿ.ಪಿ. ಬೋಜಪ್ಪ ಮಾತನಾಡಿ, ಬೆಳಗಾವಿ ಜಿಲ್ಲೆಯ ನಾಗನೂರು ಗ್ರಾ.ಪಂ. ಸದಸ್ಯ ಬಸವರಾಜು ಅವರು ತಾ. ೧೬ ರಂದು ಗ್ರಾ.ಪಂ. ಕಚೇರಿಯಲ್ಲಿ ಗ್ರಾಮಸ್ಥರ ಆಸ್ತಿಗೆ ಸಂಬAಧಿಸಿದ ದಾಖಲೆಗಳ ಬಗ್ಗೆ ವಿಚಾರಿಸಿದಾಗ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸದಸ್ಯರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕಪಾಳ ಮೋಕ್ಷ ಮಾಡಿರುವ ಘಟನೆ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಈ ಬಗ್ಗೆ ಸಭೆಯಲ್ಲಿ ಪ್ರಸ್ತಾಪ ಮಾಡಿ ಎಲ್ಲ ಸದಸ್ಯರ ಒಪ್ಪಿಗೆ ಪಡೆದು ಖಂಡನಾ ನಿರ್ಣಯ ಮಂಡಿಸಿದರು. ಸದಸ್ಯ ಸಿ.ಜೆ. ಗಿರೀಶ್ ಅವರು ಮಾತನಾಡಿ, ಅಪ್ಪಶೆಟ್ಟಳ್ಳಿ ಕೆರೆಗುಂಡಿ ಪ್ರದೇಶವನ್ನು ಸಾರ್ವಜನಿಕರಿಗಾಗಿ ವಾಕಿಂಗ್ ಪಾರ್ಕ್ ಮಾಡುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು.
ಸಭೆಯಲ್ಲಿ ಸದಸ್ಯರುಗಳಾದ ಕೆ.ಎಸ್. ಜಾನಕಿ, ಎಸ್.ಬಿ. ಭಾಗ್ಯ, ಸತ್ಯವತಿ, ಹೆಚ್.ಆರ್. ಭವಾನಿ, ಡಿ.ಪಿ. ಬೋಜಪ್ಪ, ಸಿ.ಜೆ. ಗಿರೀಶ್ ಉಪಸ್ಥಿತರಿದ್ದು, (ಉಪಾಧ್ಯಕ್ಷ ಎಸ್.ಸಿ. ನಿತಿನ್, ಸದಸ್ಯರುಗಳಾದ ನಂದಿನಿ, ಗೋಪಿಕಾ ಎಸ್.ಸಿ. ಕಾಂತರಾಜ್, ಬಿ.ಎಸ್. ಮಹಂತೇಶ್, ಎಂ.ಡಿ. ದೇವರಾಜ್; ಈ ಆರು ಮಂದಿ ಗೈರು ಹಾಜರಾಗಿದ್ದರು) ಪಿಡಿಓ ವೇಣುಗೋಪಾಲ್ ಸ್ವಾಗತಿಸಿ, ವಂದಿಸಿದರು.