ಮಡಿಕೇರಿ, ಅ. ೧: ಐತಿಹಾಸಿಕ ಮಡಿಕೇರಿ ದಸರಾ ನಾಡಹಬ್ಬಕ್ಕೆ ರಾಜ್ಯ ಸರಕಾರ ರೂ. ೧ ಕೋಟಿ ಅನುದಾನ ಮಂಜೂರು ಮಾಡಿದ್ದು, ಈ ಹಣ ಸಂಪೂರ್ಣವಾಗಿ ದಸರಾ ಉತ್ಸವಕ್ಕೆ ಬಳಕೆಯಾಗಬೇಕೆಂದು ನಗರಸಭಾ ಮಾಜಿ ಸದಸ್ಯ ದಸರಾ ಸಮಿತಿ ಗೌರವ ಅಧ್ಯಕ್ಷ ಪ್ರಕಾಶ್ ಆಚಾರ್ಯ ಒತ್ತಾಯಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಾಸಕರ ಮನವಿ ಮೇರೆಗೆ ಮುಖ್ಯಮಂತ್ರಿಗಳು ರೂ. ೧ ಕೋಟಿ ಅನುದಾನ ಮಂಜೂರು ಮಾಡಿರುವದು ಸ್ವಾಗತಾರ್ಹ. ಆದರೆ, ೧ ಕೋಟಿಯಲ್ಲಿ ರೂ. ೭೫ ಲಕ್ಷ ಅಭಿವೃದ್ಧಿ ಕಾರ್ಯಗಳಿಗೆ ಹಾಗೂ ಕೇವಲ ೨೫ ಲಕ್ಷ ಮಾತ್ರ ದಸರಾ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುವಂತೆ ಶಾಸಕರು ಸೂಚಿಸಿರುವದು ಸರಿಯಲ್ಲ. ನಗರದ ರಸ್ತೆ ದುರಸ್ತಿ, ಅಭಿವೃದ್ಧಿ ಕಾರ್ಯಗಳಿಗೆ ಈಗಾಗಲೇ ನಗರಸಭೆ ಆಯುಕ್ತರು ಮೂರನೇ ಹಂತದ ನಿಧಿಯಡಿ ರೂ. ೭೫ ಲಕ್ಷ ವೆಚ್ಚದ ಕಾಮಗಾರಿಗಳಿಗೆ ಕ್ರಿಯಾಯೋಜನೆ ತಯಾರಿಸಿದ್ದಾರೆ. ರಸ್ತೆ, ದುರಸ್ತಿ ಅಭಿವೃದ್ಧಿ ಕೆಲಸಗಳನ್ನು ನಗರಸಭಾ ಅನುದಾನದಿಂದಲೇ ಮಾಡಬಹುದಾಗಿದೆ.
ದಸರಾಗೆ ಮಂಜೂರಾಗಿರುವ ರೂ. ೧ ಕೋಟಿ ಹಣವನ್ನು ಸಂಪೂರ್ಣ ದಸರಾ ಕಾರ್ಯಕ್ರಮಗಳಿಗೆ ಒದಗಿಸಿದರೆ, ಅನುಕೂಲವಾಗಲಿದೆ. ದಶಮಂಟಪ ತಯಾರಿ ಸೇರಿದಂತೆ ಕಾರ್ಯಕ್ರಮ ನಡೆಸಲು ಸಾಕಷ್ಟು ಶ್ರಮವಿದ್ದು, ಹಣದ ಅವಶ್ಯಕತೆಯೂ ಇದೆ. ನಗರವನ್ನು ಅಲಂಕಾರ ಮಾಡಿದಷ್ಟೂ ಉತ್ಸವಕ್ಕೆ ಕಳೆ ಬರಲಿದೆ. ಕೋವಿಡ್ ನಿಯಮದೊಂದಿಗೆ ಸರಳ - ಸುಂದರ ದಸರಾ ಆಚರಣೆಯೊಂದಿಗೆ ನಾಡಿನ ಜನತೆಗೆ ಒಂದಿಷ್ಟು ರಂಜನೆ ದೊರೆತಂತಾಗುತ್ತದೆ ಎಂದು ಅಭಿಪ್ರಾಯಿಸಿದ್ದಾರೆ.