ಕುಶಾಲನಗರ, ಅ. ೧:ಹಾರಂಗಿ ನದಿಯಲ್ಲಿ ಮಹಶೀರ್ ಮೀನುಗಳಿರುವ ನಿರ್ಬಂಧಿಸಿರುವ ಪ್ರದೇಶದಲ್ಲಿ ಸ್ಪೋಟಕಗಳನ್ನು ಬಳಸಿ ಬಲೆ ಹಾಕಿ ಅಕ್ರಮ ಮೀನುಗಾರಿಕೆ ಮಾಡುತ್ತಿದ್ದ ವೇಳೆ ದಾಳಿ ನಡೆದಿದ್ದು, ಬೇಟೆಗೆ ಬಳಸುತ್ತಿದ್ದ ವಸ್ತುಗಳು, ತೆಪ್ಪವನ್ನು ವಶಪಡಿಸಿಕೊಂಡ ಘಟನೆ ನಡೆದಿದೆ. ಅಕ್ರಮ ಚಟುವಟಿಕೆಯಲ್ಲಿ ತೊಡಗಿದ ವ್ಯಕ್ತಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಕೂಡುಮಂಗಳೂರು ಗ್ರಾಮ ಪಂಚಾಯ್ತಿ ಸದಸ್ಯ ಮಣಿಕಂಠ ನೇತೃತ್ವದಲ್ಲಿ ಹಾರಂಗಿ ಅಣೆಕಟ್ಟು ಭದ್ರತಾ ದಳದ ಪೂಲೀಸರ ಸಹಾಯದೊಂದಿಗೆ ಕಾರ್ಯಾಚರಣೆ ಗುರುವಾರ ತಡರಾತ್ರಿಯಲ್ಲಿ ನಡೆದಿದ್ದು, ಸ್ಥಳದಲ್ಲಿದ್ದ ಬಲೆ, ತೆಪ್ಪ ಮತ್ತಿತರ ವಸ್ತುಗಳನ್ನು ಮೀನುಗಾರಿಕಾ ಇಲಾಖೆಗೆ ಹಸ್ತಾಂತರಿಸಲಾಗಿದೆ. ಮೀನುಗಾರಿಕಾ ಇಲಾಖೆಯಿಂದ ಪ್ರತಿವರ್ಷ ಸಾವಿರಾರು ಸಂಖ್ಯೆಯ ಮಹಶೀರ್ ಮೀನು ಮರಿಗಳನ್ನು ನದಿಗೆ ಬಿಡಲಾಗುತ್ತದೆ.
ಹಾರಂಗಿ ಅಣೆಕಟ್ಟೆ ಕೆಳಭಾಗದ ನದಿಯ ೫ ಕಿಲೋಮೀಟರ್ ವ್ಯಾಪ್ತಿವರೆಗೆ ಮೀನು ಬೇಟೆ ನಿಷೇಧ ಮಾಡಲಾಗಿದ್ದು, ಇತ್ತೀಚೆಗೆ ಹಾರಂಗಿಗೆ ಭೇಟಿ ನೀಡಿದ್ದ ಮೀನುಗಾರಿಕೆ ಮತ್ತು ಒಳ ಬಂದರು ಸಚಿವ ಅಂಗಾರ ಅವರ ಗಮನಕ್ಕೂ ತರಲಾಗಿತ್ತು. ನದಿಯ ಇಕ್ಕೆಲಗಳಲ್ಲಿ ಕಾಡು ತೆರವುಗೊಳಿಸಿ ನಿಗಾವಹಿಸುವ ಭರವಸೆಯನ್ನು ನೀಡಿದ್ದರೂ ತಡರಾತ್ರಿ ಎಗ್ಗಿಲ್ಲದೆ ಅಕ್ರಮ ಮೀನು ಬೇಟೆ ನಡೆಯುತ್ತಿರುವುದು ಸ್ಥಳೀಯರ ಗಮನಕ್ಕೆ ಬಂದು ದಾಳಿ ನಡೆಸಲಾಗಿದೆ. ಅಕ್ರಮ ಬೇಟೆಗೆ ಬಳಸಿದ ವಸ್ತುಗಳನ್ನು ಮೀನುಗಾರಿಕಾ ಕೇಂದ್ರಕ್ಕೆ ಹಸ್ತಾಂತರಿಸಲಾಗಿದ್ದು, ಕುಶಾಲನಗರ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.