ಕಣಿವೆ, ಸೆ. ೨೭ : ‘ಸಾಲ ಸೋಲ ಮಾಡಿ ಹಣ ತಂದು ತಿಂಗಳುಗಟ್ಟಲೆ ಕಷ್ಟಪಟ್ಟು ಬೆಳೆದಿರುವ ನಮ್ಮ ಬೆಳೆಗಳನ್ನು ರಕ್ಷಿಸಿ, ಬೆಳೆ ಉಳಿದರೆ ಮಾಡಿದ ಸಾಲ ತೀರಿಸಿ ನೆಮ್ಮದಿಲಿ ಇರುತ್ತೇವೆ. ಇಲ್ಲವಾದಲ್ಲಿ ನಷ್ಟದ ಮೇಲೆ ನಷ್ಟವಾಗುತ್ತಿ ರುವ ಬೆಳೆನಷ್ಟದ ಸಂಕಷ್ಟಕ್ಕೆ ಸಿಲುಕುವ ನಮ್ಮ ಕುಟುಂಬಗಳನ್ನು ಉಳಿಸಿ....’ ಇದು, ಕಾಡಾನೆಗಳ ಹಾವಳಿಗೆ ತುತ್ತಾಗಿ ಬೆಳೆ ಕಳೆದುಕೊಳ್ಳುತ್ತಿರುವ ಅನ್ನದಾತನ ಅಳಲು.

ಏಕೆಂದರೆ ಕುಶಾಲನಗರ ತಾಲೂಕಿನ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಅಂದರೆ ಹಾರಂಗಿ ನದಿ ದಂಡೆಯ ಗ್ರಾಮಗಳಾದ ಹುಲುಗುಂದ, ಹುದುಗೂರು, ಬೆಂಡೆಬೆಟ್ಟ, ಅತ್ತೂರು, ಯಡವನಾಡು, ಅತ್ತ ಕಾವೇರಿ ನದಿ ದಂಡೆಯ ರಂಗಸಮುದ್ರ, ವಾಲ್ನೂರು, ತ್ಯಾಗತ್ತೂರು, ಅಭ್ಯತ್ ಮಂಗಲ, ನಂಜರಾಯಪಟ್ಟಣ, ಕಬ್ಬಿನಗದ್ದೆ, ಹೊಸಪಟ್ಟಣ, ಕಂಬಿಬಾಣೆ, ಚಿಕ್ಲಿಹೊಳೆ ಹೀಗೆ ಅರಣ್ಯದಂಚಿನಲ್ಲಿ ಕೃಷಿ ಮಾಡುವ ಹಲವು ಕೃಷಿಕರು ದಿನ ನಿತ್ಯವೂ ಘಟಿಸುವ ಕಾಡಾನೆಗಳ ಹಾವಳಿಯಿಂದ ಅಕ್ಷರಶಃ ನಲುಗಿ ಹೋಗಿರುವ ಸಂಕಟದ ಮೊರೆಯಾಗಿದೆ. ಹಾರಂಗಿ ನದಿ ದಂಡೆಯಲ್ಲಿನ ಹುದುಗೂರಿನ ರುದ್ರಪ್ಪ, ನಾಗೇಂದ್ರ, ಅಶೋಕ್, ಕಿಶೋರ್ ಮೊದಲಾದ ಕೃಷಿಕರಿಗೆ ಸೇರಿದ ಭತ್ತದ ಗದ್ದೆಗಳನ್ನು ಕಾಡಾನೆಗಳು ತುಳಿದು ನಾಶಪಡಿಸಿವೆ. ಹಾಗೆಯೇ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿನ್ನೇನಹಳ್ಳಿ, ಆರನೇಹೊಸಕೋಟೆ, ಮರೂರು ಮೊದಲಾದ ಗ್ರಾಮಗಳ ಕೃಷಿಕರು ಬೆಳೆದಿರುವ ಮುಸುಕಿನ ಜೋಳದ ಫಸಲನ್ನು ಕಾಡಾನೆಗಳು ತಿಂದು ನಾಶಪಡಿಸುತ್ತಿವೆ.

ಇದರಿಂದಾಗಿ ಕೃಷಿಕರಿಗೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಹಾನಿಯಾಗಿರುವ ಕೃಷಿ ಫಸಲು ಬೆಳೆಯಲು ಮಹಿಳೆಯರು ಹಾಗೂ ಮಕ್ಕಳ ಮೈ ಮೇಲಿದ್ದ ಚಿನ್ನಾಭರಣಗಳನ್ನು ಗಿರವಿಯಿಟ್ಟು ಕೆಲವು ಕೃಷಿಕರು ಹಣ ತಂದಿದ್ದರೆ, ಮತ್ತೆ ಕೆಲವರು ಬಡ್ಡಿಗೆ ಹಣ ತಂದು ಕೃಷಿ ಮಾಡಿದ್ದಾರೆ. ಆದರೆ ಕಷ್ಟಪಟ್ಟು ಬೆಳೆದ ಫಸಲು ರೈತರ ಕೈಸೇರುವ ಮೊದಲೇ ಕಾಡಾನೆಗಳ ಪಾಲಾಗುತ್ತಿರುವುದು ರೈತರ ನೆಮ್ಮದಿ ನುಚ್ಚು ನೂರು ಮಾಡಿದೆ. ಹಾಗಾಗಿ ಬಹುತೇಕ ರೈತರು ಕಷ್ಟ ಪಟ್ಟು ಬೆಳೆಸಿದ ಬೆಳೆಗಳನ್ನು ಕಾಡಾನೆಗಳಿಂದ ರಕ್ಷಿಸಿ. ನಾವು ನೆಮ್ಮದಿಯಿಂದ ಉಳಿಯುವಂತೆ ಮಾಡಿ ಎಂದು ಅರಣ್ಯಾಧಿಕಾರಿಗಳಲ್ಲಿ ಅಂಗಲಾಚುತ್ತಿದ್ದಾರೆ.

ಆದರೆ ‘ನರಿ ಕೂಗು ಗಿರಿ ಮುಟ್ಟೀತೆ’ ಎಂಬAತೆ ಶ್ರಮಿಕ ಕೃಷಿಕರ ಕೂಗು ಮಂದ ಕಿವಿಯ ಅರಣ್ಯ ಇಲಾಖೆಗೆ ಕೇಳಿಸದೇ ಕೇವಲ ಅರಣ್ಯರೋಧನದಂತಾಗಿದೆ. ಹಾಗಾಗಿ ತಾವು ಬಿತ್ತನೆ ಮಾಡುವಾಗ ಕಾಡಾನೆ ಗಳ ಪಾಲಿಷ್ಟು. ಇನ್ನು ಅವು ತಿಂದು ತುಳಿದು ಉಳಿಸುವ ನಮ್ಮ ಪಾಲು ಎಷ್ಟು? ಎಂದು ಮೊದಲೇ ಭೂಮಿತಾಯಿಯಲ್ಲಿ ಪ್ರಶ್ನಿಸುವುದೂ ಉಂಟು.

ಕಾಡಾನೆಗಳಿAದ ಬೆಳೆ ಹಾನಿಗೆ ತುತ್ತಾಗುವ ಕೃಷಿಕರ ನೆರವಿಗೆ ಕೊಡಗು ಮಾನವ ವನ್ಯ ಪ್ರಾಣಿ ಸಂಘರ್ಷ ಉಪಶಮನ ಪ್ರತಿಷ್ಠಾನ ರಚಿಸಲಾಗಿದ್ದು, ಕಾಡಾನೆಗಳಿಂದ ಬಾಧಿತರಾದ ಕೃಷಿಕರಿಗೆ ಸಾಮಾಜಿಕ ಹಾಗೂ ಆರ್ಥಿಕ ಬೆಂಬಲ ನೀಡುವು ದರ ಜೊತೆಗೆ ಅರಣ್ಯಗಳ ಮೇಲೆ ಮಾನವನ ಒತ್ತಡ ಕಡಿಮೆ ಮಾಡುವ ಕಾರ್ಯವನ್ನು ಈ ಪ್ರತಿಷ್ಠಾನ ಮಾಡುತ್ತಿದೆ. ಅರಣ್ಯಗಳ ಮೇಲೆ ಮಾನವನ ಒತ್ತಡ ಜೈವಿಕ ಅಡೆ- ತಡೆಗಳಿಂದ ಅರಣ್ಯ ಪ್ರದೇಶ ಕ್ಷೀಣಿಸುತ್ತಿದ್ದು ಕಾಡಾನೆಗಳ ಆವಾಸ ಸ್ಥಾನದ ಮೇಲೆ ಒತ್ತಡ ಉಂಟಾಗುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯ ಒತ್ತಡ, ನಗರೀಕರಣ, ಅಭಿವೃದ್ಧಿ ಕಾರ್ಯಗಳಿಗೆ ಅರಣ್ಯ ಇಲಾಖೆಯ ಜಾಗ ನೀಡುವುದರಿಂದಲೂ ಕಾಡಾನೆಗಳ ಆವಾಸಸ್ಥಾನ ಕ್ಷೀಣಿಸುತ್ತಿದೆ. ಅರಣ್ಯದಂಚಿನ ಖಾಸಗಿ ಜಮೀನುಗಳಲ್ಲಿ ರೈತರು ಬೆಳೆಯುತ್ತಿರುವ ಭತ್ತ, ತೆಂಗು, ಬಾಳೆ, ಹಲಸು, ಅಡಿಕೆ ಮೊದಲಾದ ಬೆಳೆಗಳ ಆಕರ್ಷಣೆಗೆ ಒಳಗಾಗಿ ಕಾಡಾನೆಗಳು ನಾಡಿಗೆ ಮುಖ ಮಾಡುತ್ತಿವೆ ಎಂಬುದು ಅರಣ್ಯ ಇಲಾಖೆಯ ವಾದವಾಗಿದೆ. ಒಟ್ಟಾರೆ ಇಲಾಖೆ ಏನೇ ಹೇಳಿಕೊಂಡರೂ ಕೂಡ ವನ್ಯಪ್ರಾಣಿಗಳಿಂದ ರೈತರಿಗಾಗುವ ನಷ್ಟವನ್ನು ಭರಿಸುವಲ್ಲಿ ಸಂಪೂರ್ಣವಾಗಿ ಸೋತಿದೆ.

ಕಾಡಂಚಿನ ಕೃಷಿಕರು ದಶಕಗಳಿಂದಲೂ ಅನುಭವಿಸಿಕೊಂಡು ಬರುತ್ತಿರುವ ನರಕ ಯಾತನೆ ಕುರುಡಾಗಿರುವ ಇಲಾಖೆಯ ಮೇಲಧಿಕಾರಿ ಗಳಿಗೆ ಕಾಣಿಸುತ್ತಿಲ್ಲ. ಸರ್ಕಾರದ ಬಿಳಿಯಾನೆಗಳೆಂಬ ಅಧಿಕಾರಿಗಳು ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಕಾಡಂಚಿನ ಕೃಷಿಕರಿಗೆ ಮಾರಕವಾಗುವಂತಹ ಅವೈಜ್ಞಾನಿಕ ಯೋಜನೆಗಳನ್ನು ಜಾರಿ ಮಾಡುವುದು ನಿಂತಿಲ್ಲ.

‘ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ’ ಎಂಬ ನಾಣ್ಣುಡಿಯಂತೆ ಕಾಡಂಚಿನ ರೈತರ ಅನುಕೂಲಕ್ಕೆ ತಕ್ಕಂತೆ ಪ್ರತೀ ಕೃಷಿಕರಿಗೆ ವೈಯಕ್ತಿಕವಾದ ನೆಲೆಗಟ್ಟಿನಲ್ಲಿ ಸೋಲಾರ್ ತಂತಿ ಅಳವಡಿಕೆ, ಕಾಡಂಚಿನ ಉದ್ದಕ್ಕೂ ರೈಲ್ವೆ ಕಂಬಿ ಹಳಿ ಅಳವಡಿಸಿ ಕಾಡಾನೆಗಳನ್ನು ನಿಯಂತ್ರಿಸುವುದು ಸೇರಿದಂತೆ ಇನ್ನೂ ಮೊದಲಾದ ಕ್ರಮಗಳ ಬಗ್ಗೆ ಯೋಜನೆ ರೂಪಿಸದೇ ಕೇವಲ ತಮಗೆ ಆರ್ಥಿಕವಾಗಿ ಅನುಕೂಲವಾಗುವಂತಹ ಅವೈಜ್ಞಾನಿಕವಾದ ಕಂದಕ ನಿರ್ಮಾಣ, ಗುಣಮಟ್ಟವಿಲ್ಲದ ಸೋಲಾರ್ ತಂತಿ ಖರೀದಿಸಿ ಕಾಟಾಚಾರಕ್ಕೆ ಅಳವಡಿಸುವುದು ಸೇರಿದಂತೆ ಇನ್ನಿತರ ಮಾರಕವಾದ ಯೋಜನೆಗಳನ್ನು ರೂಪಿಸುವಲ್ಲಿ ಇಲಾಖೆಯ ಮೇಲಧಿಕಾರಿಗಳು ಚಿಂತನೆಯಲ್ಲಿದ್ದಾರೆ. ಆದರೆ ಇಲ್ಲಿ ‘ಮಾಡಿದ ಬೆಳೆಯೂ ಹೋಯ್ತು. ಸಾಲ ತಂದ ಹಣವೂ ಹೋಯ್ತಲ್ಲ’ ಎಂಬ ಚಿಂತೆಯಲ್ಲಿ ಕೃಷಿಕರು ದಿನೇ ದಿನೇ ಕೃಷವಾಗುತ್ತಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಅನ್ನದಾತನ ಸ್ಥಿತಿ ದೇವರೇ ಗತಿ...!

- ಕೆ.ಎಸ್.ಮೂರ್ತಿ