ಸೋಮವಾರಪೇಟೆ, ಸೆ. ೨೪: ರೈತರ ಕೃಷಿ ಭೂಮಿಗೆ ಒದಗಿಸಿರುವ ೧೦ ಹೆಚ್.ಪಿ. ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕವನ್ನು ಸೆಸ್ಕ್ ಸಿಬ್ಬಂದಿಗಳು ಕಡಿತಗೊಳಿಸುತ್ತಿದ್ದು, ಇದಕ್ಕೆ ಸ್ಥಳೀಯ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಗಣಗೂರು, ನೇರುಗಳಲೆ, ಆಲೂರುಸಿದ್ದಾಪುರ ವ್ಯಾಪ್ತಿಯಲ್ಲಿ ಸೆಸ್ಕ್ ಸಿಬ್ಬಂದಿಗಳು ಬಿಲ್ ಪಾವತಿಸದ ರೈತರಿಗೆ ಮಾಹಿತಿ ನೀಡಿ, ಪಂಪ್‌ಸೆಟ್‌ಗಳಿಗೆ ನೀಡಿರುವ ಸಂಪರ್ಕವನ್ನು ಕಡಿತಗೊಳಿಸುತ್ತಿದ್ದು, ಇದು ಖಂಡನೀಯ ಎಂದು ಗಣಗೂರು ರೈತ ಹೋರಾಟ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಗದ್ದೆಗಳಲ್ಲಿ ಭತ್ತ ಕೃಷಿ ಕೈಗೊಂಡಿದ್ದು, ಕೆಲವು ಕಡೆಗಳಲ್ಲಿ ಗೆಣಸು ಬೆಳೆಯಲಾಗುತ್ತಿದೆ. ಬಿಸಿಲಿನ ವಾತಾವರಣ ಇರುವುದರಿಂದ ಗದ್ದೆಗಳಿಗೆ ನೀರು ಹರಿಸುವುದು ಅವಶ್ಯವಾಗಿದೆ. ಇಂತಹ ಸಂದರ್ಭದಲ್ಲಿ ಸೆಸ್ಕ್ ಸಿಬ್ಬಂದಿಗಳು ದಿಢೀರಾಗಿ ಆಗಮಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿದ್ದಾರೆ. ನೀರು ಹರಿಸದೇ ಇದ್ದರೆ ಗದ್ದೆಯಲ್ಲಿರುವ ಫಸಲು ಒಣಗುತ್ತದೆ. ವಿದ್ಯುತ್ ಕಡಿತಗೊಳಿಸದಂತೆ ಸರ್ಕಾರವೇ ಹೇಳಿದ್ದರೂ ಅಧಿಕಾರಿಗಳು ಮಾತ್ರ ಉಡಾಫೆಯಿಂದ ವರ್ತಿಸುತ್ತಿದ್ದಾರೆ ಎಂದು ಚಂದ್ರಶೇಖರ್ ದೂರಿದ್ದಾರೆ.

ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿದ್ಯುತ್ ಕಡಿತ ಮಾಡುತ್ತಿದ್ದ ಸಂದರ್ಭ ಸ್ಥಳೀಯರು ಸೆಸ್ಕ್ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭ ಸಾವಿರಾರು ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳನ್ನು ಪತ್ತೆಹಚ್ಚಿ, ಮೇಲಧಿಕಾರಿಗಳ ಆದೇಶದಂತೆ ವಿದ್ಯುತ್ ಕಡಿತ ಮಾಡುತ್ತಿದ್ದೇವೆ ಎಂದರು.

ಕೃಷಿ ಕಾರ್ಯಗಳು ಪ್ರಗತಿಯಲ್ಲಿರುವ ಪ್ರಸ್ತುತತೆಯಲ್ಲಿ ವಿದ್ಯುತ್ ಕಡಿತ ಮಾಡಿದರೆ ಫಸಲನ್ನು ಉಳಿಸಿಕೊಳ್ಳುವುದು ಹೇಗೆ? ಇಂತಹ ಕಷ್ಟಕರ ಪರಿಸ್ಥಿತಿಯಲ್ಲಿ ನಮಗೆ ಹಣ ಕಟ್ಟಲು ಸಾಧ್ಯವಿಲ್ಲ. ತಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದನ್ನು ನಿಲ್ಲಿಸಬೇಕು. ಒಂದು ವೇಳೆ ರೈತರು ಆತ್ಮಹತ್ಯೆಗೆ ಶರಣಾದರೆ ಸೆಸ್ಕ್ ಇಲಾಖೆಯೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಗಣಗೂರು ರೈತ ಹೋರಾಟ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಎಚ್ಚರಿಸಿದರಲ್ಲದೇ, ಈ ಬಗ್ಗೆ ತಾಲೂಕಿನಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದರು.

ಈ ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದು, ವಿದ್ಯುತ್ ಕಡಿತಗೊಳಿಸದಂತೆ ಇಲಾಖೆಗೆ ಸೂಚನೆ ನೀಡುವುದಾಗಿ ತಿಳಿಸಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲಿ ಕೃಷಿ ಕಾರ್ಯಗಳಿಗೆ ೧೦ ಹೆಚ್‌ಪಿ ವರೆಗಿನ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಒದಗಿಸಿದ್ದಾರೆ. ಕೊಡಗಿನಲ್ಲಿ ಮಾತ್ರ ಲಕ್ಷಾಂತರ ರೂಪಾಯಿ ಬಿಲ್ ನೀಡುತ್ತಿದ್ದಾರೆ. ಇಂತಹ ತಾರತಮ್ಯದ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಚಂದ್ರಶೇಖರ್ ಎಚ್ಚರಿಸಿದರು.