ಬ್ರಹ್ಮನ ಮಾನಸ ಪುತ್ರಿ, ಕವೇರ ಮುನಿಯ ದತ್ತ ಪುತ್ರಿ ಲೋಪಾಮುದ್ರೆ ಭೂಲೋಕಕ್ಕೆ ಬಂದ ಬಳಿಕ ಎರಡು ಅವತಾರ ತಾಳುತ್ತಾಳೆ. ಸ್ಕಂದ ಪುರಾಣ ಮೊದಲಾದ ಪೌರಾಣಿಕ ಗ್ರಂಥಗಳ ಆಧಾರದಲ್ಲಿ ಅವಳು ಲೋಕಕಲ್ಯಾಣಕ್ಕೋಸ್ಕರ ಕವೇರನ ದತ್ತ ಪುತ್ರಿಯಾದುದರಿಂದ ಕಾವೇರಿ ಎನ್ನುವ ಹೆಸರು ಪಡೆದು ಪುಣ್ಯ ನದಿಯಾಗಿ ಕೋಟ್ಯಂತರ ಜನರ ಭಾಗ್ಯ ನಿಧಿಯಾಗಿ ಜಲ ರೂಪಿಣಿಯಾಗಿ ಹರಿಯುತ್ತಾಳೆ. ಆದರೆ, ತಪಸ್ವೀ ಮಹರ್ಷಿ ಅಗಸ್ತö್ಯರು ಲೋಪಾಮುದ್ರೆಯನ್ನು ವಿವಾಹವಾದುದು ತನಗೆ ಪುತ್ರನೊಬ್ಬನ ಸಂತಾನ ಪ್ರಾಪ್ತಿಗೋಸ್ಕರ. ತನ್ನ ಪಿತೃ-ಪಿತಾಮಹರು ಅಧೋಮುಖರಾಗಿ ನರಳಾಡುತ್ತಿರುವದನ್ನು ಗಮನಿಸಿ ಬ್ರಹ್ಮಚಾರಿಯಾಗಿದ್ದ ಅಗಸ್ತö್ಯರು ಕೊನೆಗೂ ತನ್ನ ತಪಸ್ಸಿಗೆ ಅನುಗುಣಳಾದ ಕನ್ಯೆಯನ್ನು ಅರಸಿಕೊಂಡು ಬಂದು ಲೋಪಾಮುದ್ರೆಯನ್ನು ವಿವಾಹವಾಗುತ್ತಾರೆ. ವಿಶ್ವ ಸುಂದರಿಯಾದ ಲೋಪಾಮುದ್ರೆ ಜಟಾಜಟಧಾರಿಯಾಗಿದ್ದ ಅಗಸ್ತö್ಯನನ್ನು ವಿವಾಹವಾಗಲು ಒಪ್ಪುವದಕ್ಕೂ ಕಾರಣವಿದೆ. ಅವಳ ಉದ್ದೇಶವೇ ಲೋಕಲ್ಯಾಣಕ್ಕಾಗಿ ನದಿಯಾಗಿ ಹರಿಯುವುದಾಗಿದ್ದು ತಪಸ್ವೀ ಅಗಸ್ತö್ಯರ ಮೂಲಕ ಈ ಕಾರ್ಯ ಸಾಧಿಸುವದಕ್ಕೊಸ್ಕರ ತನ್ನನ್ನು ಅಗಸ್ತö್ಯ ಕ್ಷಣ ಕಾಲವೂ ಬಿಟ್ಟು ಹೋಗಬಾರದೆಂದು ಷರತ್ತು ವಿಧಿಸುತ್ತಾಳೆ. ಅಗಸ್ತö್ಯರು ಸ್ನಾನ ಜಪತಪಾದಿಗೆಂದು ಆಕೆಯನ್ನು ಜಲ ರೂಪಿಣಿಯಾಗಿ ಕಮಂಡಲುವಿನಲ್ಲಿರಿಸಿ ತನ್ನ ಶಿಷ್ಯರ ಬಳಿ ಕಮಂಡಲುವನ್ನು ನೀಡಿ ಕೆಲ ಕಾಲ ತೆರಳುತ್ತಾರೆ. ಅದೇ ಸಂದರ್ಭದಲ್ಲಿ ಸಕಾಲವೆಂದು ಭಾವಿಸಿ ಲೋಪಾಮುದ್ರೆ ಕಾವೇರಿ ನದಿಯಾಗಿ ಕಮಂಡಲುವಿನಿAದ ಉಕ್ಕಿ ಹರಿಯುತ್ತಾಳೆ.
ಇಲ್ಲಿ ಮುಖ್ಯವಾದುದೆಂದರೆ ಅಗಸ್ತö್ಯರು ಕೂಡ ಮಹಾತಪಸ್ವಿ. ಲೋಪಾಮುದ್ರೆ ಕೂಡ ಲೋಕಮಾತೆ ಪಾರ್ವತಿಯ ಅವತಾರಿಣಿ, ಮಹಾಲಕ್ಷಿö್ಮಯ ಶಕ್ತಿಯನ್ನೂ ಪಡೆದಿದ್ದವಳು. ಅವಳು ಭೂಮಂಡಲದಲ್ಲಿ ಜೀವ ನದಿಯಾಗಿ ಹರಿಯಲು ಇದೆಲ್ಲ್ಲ ಕಾರಣವೇ ಹೊರತು ಆಕೆ ತನ್ನ ಮಾಯಾ ಲೀಲೆಯನ್ನಷ್ಟೇ ತೋರಿದ್ದಾಳೆ. ಅಗಸ್ತö್ಯ ಮಹರ್ಷಿ ಅದಕ್ಕೆ ಸಹಕರಿಸಿದ್ದಾರೆ. ಸಾಮಾನ್ಯ ಮಾನವನ ಹೊರ ನೋಟಕ್ಕೆ ಇದು ಕಥಾ ರೂಪದಂತೆ ಕಂಡು ಬಂದರೂ ಒಳಗಣ್ಣಿನ ಅಧ್ಯಾತ್ಮಿಕ ನೋಟದಲ್ಲಿ ಇದೆಲ್ಲ ದೈವ ನಿಯಾಮಕವಾದುದು.
ಆದರೆ, ಮಹಾಭಾರತ ಮೊದಲಾದ ಉದ್ಗçಂಥಗಳ ಪ್ರಕಾರ ಲೋಪಾಮುದ್ರೆಯೂ ಕೂಡ ವಿವಾಹ ಸಂದರ್ಭ ಅಗಸ್ತö್ಯನ ಸಂತಾನಾಪೇಕ್ಷೆಯ ಅಭಿಲಾಷೆಗೆ ಒಪ್ಪಿರುತ್ತಾಳೆ. ಬ್ರಹ್ಮಚಾರಿಯಾಗಿದ್ದ ಅಗಸ್ತö್ಯ ವಿವಾಹವಾಗಬೇಕಾದರೂ ಒಂದು ಬಲವಾದ ಕಾರಣವಿತ್ತು. ಒಂದು ಮುಖ್ಯ ಕಾರಣ ವಿವಾಹವಾದ ಬಳಿಕ ಪತ್ನಿ ಲೋಪಾಮುದ್ರೆ ನದಿಯಾಗಿ ಹರಿಯಬೇಕೆನ್ನುವ ಬಯಕೆ. ಆದರೆ, ಮತ್ತೊಂದೆಡೆ ಅಗಸ್ತö್ಯ ಸಂಚಾರ ಮಾಡುತ್ತಿರುವಾಗ ತನ್ನ ಪೂರ್ವ ಪಿತೃಗಳು ಅಧೋಗತಿಯಲ್ಲಿ ನೇತಾಡುತ್ತ ದು:ಖ ಅನುಭವಿಸುತ್ತಿರುವುದನ್ನು ನೋಡುತ್ತಾರೆ. ತನ್ನ ಪಿತೃಗಳಲ್ಲಿ ಈ ಬಗ್ಗೆ ಕೇಳುವಾಗ “ನಮ್ಮ ಪೀಳಿಗೆಯವನಾದ ನೀನು ವಿವಾಹವಾಗಿ ಪುತ್ರನೊಬ್ಬ್ಬನನ್ನು ಪಡೆಯದಿದ್ದರೆ ನಮಗೆ ಸದ್ಗತಿಯು ಸಿಗದೆ ಇದೇ ರೀತಿ ತ್ರಿಶಂಕು ಸ್ಥಿತಿಯಿರುತ್ತದೆ” ಎಂದು ತಮ್ಮ ಅಳಲು ತೋಡಿಕೊಳ್ಳುತ್ತಾರೆ. ಆಗ ಅಗಸ್ತö್ಯರು ವಿವಾಹವಾಗಲು ನಿಶ್ಚಯಿಸುತ್ತಾರೆ. ಭಾರತದ ಉತ್ತರಭಾಗದಿಂದ ದಕ್ಷಿಣ ಭಾಗಕ್ಕೆ ಆಗಮಿಸುವ ಅವರು ಸಹ್ಯಾದ್ರಿ ಪರ್ವತಗಳ ಸಾಲಿನಲ್ಲಿ ಸಂಚರಿಸಿ ಬಳಿಕ ಬ್ರಹ್ಮಗಿರಿಯತ್ತ ಬರುತ್ತಾರೆ. ಬ್ರಹ್ಮ ಮಾನಸ ಪುತ್ರಿ ಲೋಪಾಮುದ್ರೆ ಹಾಗೂ ಬಳಿಕ ಕವೇರ ಮುನಿಯ ಪುತ್ರಿಯಾಗಿ ಕಾವೇರಿ ಎಂದು ಖ್ಯಾತಿಗೊಂಡ ಲೋಪಾಮುದ್ರೆಯನ್ನು ವಿವಾಹವಾಗುತ್ತಾರೆ. ಆಕೆ ಲೋಕಕಲ್ಯಾಣಕ್ಕಾಗಿ ಕಾವೇರಿಯು ನದಿಯಾಗಿ ಹರಿಯುತ್ತಿರುವಾಗ ಗುಹ್ಯದಲ್ಲಿ ಅಗಸ್ತö್ಯನ ಬೇಡಿಕೆಗೆ ಮನ್ನಣೆ ನೀಡಿ ಮೊದಲಿನ ಮೂಲರೂಪವಾಗಿದ್ದ ಲೋಪಾಮುದ್ರೆಯ ಸ್ವರೂಪದಲ್ಲಿ ಅಗಸ್ತö್ಯನ ಪತ್ನಿಯಾಗಿರಲು ಒಪ್ಪುತ್ತಾಳೆ. ಒಂದೆಡೆ ಪುಣ್ಯ ಜಲ ಸ್ವರೂಪದಿಂದ ನದಿಯಾಗಿ ಹರಿದ ಆಕೆ ಇನ್ನೊಂದೆಡೆ ದೈಹಿಕ ರೂಪದಲ್ಲಿ ಅಗಸ್ತö್ಯನ ಪತ್ನಿಯಾಗಿರುತ್ತಾಳೆ. ಅಂದರೆ, ಈ ವಿಚಾರ ಕಲ್ಪನೆಗೂ ಮೀರಿದುದು. ಸಾಮಾನ್ಯರಿಂದ ಅಸಾಧ್ಯವಾದುದು. ಆಕೆ ದೈವೀರೂಪಿಣಿಯಾಗಿದ್ದುದರಿಂದ ಮಾತ್ರ ಎರಡು ಅವತಾರಗಳನ್ನು ಹೊಂದುವ ಅದ್ಭುತ, ಅನೂಹ್ಯ, ಅಪ್ರಮೇಯ ಶಕ್ತಿ ಹೊಂದಿದ್ದಳು. ಹೀಗಾಗಿ, ಇಲ್ಲಿ ಕಾವೇರಿಯ ಚರಿತ್ರೆ ಒಂದೆಡೆಯಾದರೆ, ಇನ್ನೊಂದೆಡೆ ಲೋಪಾಮುದ್ರೆಯ ಚರಿತ್ರೆ ಬೇರೆಯದ್ದೇ ಆಗಿರುತ್ತದೆ. ಮೂಲ ಲೋಪಾಮುದ್ರೆ ಕಾವೇರಿ ನದಿಯಾಗಿ ಹರಿಯುವವರೆಗೆ ತಾನೂ ತಪಸ್ವಿನಿಯಂತೆ ಬ್ರಹ್ಮಚಾರಿಣಿಯಾಗಿದ್ದು ಬ್ರಹ್ಮಗಿರಿ ಹಾಗೂ ಸಹ್ಯಾದ್ರಿ ಪರ್ವತ ತಪ್ಪಲುಗಳಲ್ಲಿ ಆಕೆಯೂ ಅದ್ಭುತ ತಪೋ ಸಾಧನೆ ನಡೆಸಿರುತ್ತಾಳೆ. ಅಧ್ಯಾತ್ಮಿಕದ ಉತ್ತುಂಗ ಸಾಧನೆಯಲ್ಲಿ ಅಗಸ್ತö್ಯರೊಂದಿಗೆ ಅವರ ತಪಸ್ಸಿ ನಲ್ಲಿಯೂ ಸಹಕರಿಸುತ್ತಿರುತ್ತಾಳೆ. ದೈವೀ ನಿರ್ಣಯದಂತೆ ಬಳಿಕ ಆಕೆ ಕಾವೇರಿಯಾಗಿ ನದಿಯಾಗಿ ಯಾವದೇ ದೋಷಗಳಿಲ್ಲದೆ ಅತೀ ಪುಣ್ಯವತಿ ಯಾಗಿ, ಪುನೀತೆಯಾಗಿ, ಭಕ್ತರ ಪಾಪ ಪರಿಹರಿಸುವ ಸ್ಫಟಿಕ ಶುದ್ಧತೆಯ ಗುಣದವಳಾಗಿ ಉದ್ಬವಿಸಿ ಭಾರತ ಮಾತೆಯ ನೆಲವನ್ನು ಪಾವನಗೊಳಿಸು ತ್ತಾಳೆ. ಇನ್ನೊಂದೆಡೆ ತನ್ನ ಮೂಲ ರೂಪವಾಗಿದ್ದ ಲೋಪಾಮುದ್ರೆಯ ಸ್ವರೂಪದೊಂದಿಗೆ ಅಗಸ್ತö್ಯರ ಪತ್ನಿಯಾಗಿ ನೆಲೆಗೊಳ್ಳುತ್ತಾಳೆ.
ಹೀಗಾಗಿ ಕಾವೇರಿಯ ದ್ವಿತೀಯ ಭಾಗದ ಕಥನ ಆಕೆ ನದಿಯಾಗಿ ತಲಕಾವೇರಿಯಲ್ಲಿ ಉಗಮಗೊಂಡು ಲೋಕಕಲ್ಯಾಣಾರ್ಥವಾಗಿ ಪವಿತ್ರ ಸ್ವರೂಪದಲ್ಲಿ ಹರಿಯುತ್ತ ಜನರ ಪಾಪಗಳನ್ನು ಪರಿಹರಿಸುತ್ತಾ ಬಳಿಕ ಸಮುದ್ರವನ್ನು ಸೇರುವ ಮಹತ್ವದ ಚರಿತ್ರೆಯಾಗಿದೆ. ಅದೇ ರೀತಿ ಲೋಪಾಮುದ್ರೆಯ ದ್ವಿತೀಯ ಭಾಗದ ಕಥನ ಆಕೆ ಅಗಸ್ತö್ಯನ ಪತ್ನಿಯಾಗಿ ಆತನೊಂದಿಗೆ ಜೀವಿಸಿ, ಧರ್ಮಕಾರ್ಯಗಳಲ್ಲಿ ಪಾಲ್ಗೊಳ್ಳುವ ಮತ್ತೊಂದು ಚರಿತ್ರೆಯಾಗಿ ರೂಪ ಪಡೆಯುತ್ತದೆ. ಅಗಸ್ತö್ಯನ ಅಭೀಷ್ಟ ಪ್ರಾಪ್ತಿಗಾಗಿ ಅವರ ಮೂಲಕ ಆಕೆಗೆ ಪುತ್ರ ರತ್ನನೊಬ್ಬ ಪ್ರಾಪ್ತಿಯಾಗುತ್ತಾನೆ. ಅವನೇ ದೃಢಸ್ಯು. ಆತನನ್ನು ಋಷಿಮುನಿಗಳೆಲ್ಲ ಇಧ್ಮವಾಹ ಎಂದು ಕರೆಯುತ್ತಿರುತ್ತಾರೆ. ಏಕೆಂದರೆ ಯಜ್ಞಕ್ಕೆ ಅಗತ್ಯವಾದ ಸಮಿತ್ತು, ಸಾಮಗ್ರಿಗಳನ್ನು ಒಯ್ದು ಅಗಸ್ತö್ಯರಿಗೆ ಹಾಗೂ ಇತರ ಋಷಿಗಳಿಗೆ ನೆರವಾಗುತ್ತಿದ್ದುದರಿಂದ ಆ ಹೆಸರು ಬರುತ್ತದೆ. ಆ ಮೂಲಕ ಅಗಸ್ತö್ಯರ ಪಿತೃ-ಪಿತಾಮಹರಿಗೂ ಸದ್ಗತಿ ಲಭ್ಯವಾಗುತ್ತದೆ. ಹೀಗಾಗಿ ಅನೇಕ ಆಧಾರ ಗ್ರಂಥಗಳ ಅವಲೋಕನದ ಬಳಿಕ ಗೊತ್ತಾಗುವ ಪ್ರಮುಖಾಂಶವೆAದರೆ. ನದೀರೂಪಿಣಿಯಾದ ಕಾವೇರಿ ಸಕಲ ಸಂಸಾರ ಬಂಧಗಳಿAದ ಮುಕ್ತಳಾದ ಅತೀ ಪುಣ್ಯವತೀ ಜಲರೂಪಿಣಿ. ಆಕೆ ನದಿಯಾಗಿ ಹರಿಯಲು ಅಗಸ್ತö್ಯರ ನೆರವು ಅಗತ್ಯವಿತ್ತು. ಅದಕ್ಕೋಸ್ಕರ ತಾನು ಅವರನ್ನು ವರಿಸುವ ಸಂದರ್ಭ ಸಂತಾನ ಪ್ರಾಪ್ತಿಯಾಗುವ ಅವರ ಬಯಕೆಗೆ “ಅಸ್ತು” ಎಂದಿದ್ದಳು. ಆದರೆ, ಒಂದೆಡೆ ನದಿಯಾಗಿ ಹರಿಯವ ತನ್ನ ಅದಮ್ಯ ಪರೋಪಕಾರಿ ಇಚ್ಛೆಯನ್ನು ಸಾಧಿಸಿದ ಆಕೆ ಮತ್ತೊಂದು ರೂಪದಲ್ಲಿ ಗೃಹಿಣಿಯಾಗಿ ಉಳಿದು ಅಗಸ್ತö್ಯರಿಗೆ ನೀಡಿದ ವಚನವನ್ನು ಈಡೇರಿಸಿಕೊಟ್ಟಂತಹ ಜಗತ್ತಿನಲ್ಲೇ ಅಪರೂಪದ ಏಕಕಾಲಕ್ಕೆ ಎರಡು ಅವತಾರ ತಾಳಿದ ಅಸಾಧಾರಣ ಪವಾಡ ಸದೃಶ ಕಾರ್ಯವನ್ನು ಸಿದ್ಧಿಸಿ ಸಾಧಿಸಿದ್ದಾಳೆ. ಇದರಿಂದಾಗಿ ಲೋಪಾಮುದ್ರೆಯ ಕತೆ ಕಾವೇರಿ ಕತೆಯಿಂದ ಬೇರ್ಪಟ್ಟ ಮತ್ತೊಂದು ಭಾಗವಾಗಿದೆ. ಕಾವೇರಿ ನದಿಯಾಗಿ ಹರಿದ ಬಳಿಕ ಲೋಪಾಮುದ್ರೆಯಾಗಿ ಉಳಿದ ಆಕೆ ಅಗಸ್ತö್ಯರಿಂದ ಪುತ್ರನೊಬ್ಬನನ್ನು ಪಡೆಯಲು ಮಾತ್ರ ಸೀಮಿತವಾಗಿರಲಿಲ್ಲ ಅಗಸ್ತö್ಯರ ಧಾರ್ಮಿಕ ಜಗತ್ತಿನಲ್ಲ್ಲಿ ಅತ್ಯಂತ ಪ್ರಾಚೀನವಾದ ನಾಲ್ಕು ವೇದಗಳಲ್ಲಿ ಪ್ರಥಮ ಹಾಗೂ ಮುಖ್ಯಭಾಗವಾದ ಋಗ್ವೇದಕ್ಕೆ ಅಗಸ್ತö್ಯರು ನೀಡಿದ ಕೊಡುಗೆಗೆ ಸಂಸ್ಕೃತ ವಿದ್ವತ್ತಿನ ಪರಿಜ್ಞಾನ ಹೊಂದಿದ್ದ ಲೋಪಾಮುದ್ರೆ ಸಂಪೂರ್ಣ ಸಹಕಾರ ನೀಡಿರುವದು ಋಗ್ವೇದಗಳ ಗ್ರಂಥಾಧಾರದಲ್ಲಿ ಸುಸ್ಪಷ್ಟವಾಗಿದೆ.
ಋಗ್ವೇದ ಭಾಷ್ಯ ಭಾಗ-೨ ರಲ್ಲಿ ೧೬೫ ನೇ ಸೂಕ್ತದಿಂದ ೧೯೧ ನೇ ಸೂಕ್ತದವರೆಗಿನ ಬರಹ ಅಗಸ್ತö್ಯ ಋಷಿಗಳ ಮಹಾನ್ ಕೊಡುಗೆಯಾಗಿದೆ. ಆ ಪೈಕಿ ೧೭೯ ನೇ ಸೂಕ್ತದಲ್ಲಿ ಆಶ್ಚರ್ಯಕರವಾಗಿ ಲೋಪಾಮುದ್ರೆ ಅಗಸ್ತö್ಯರೊಡಗೂಡಿ ತನ್ನ ಸ್ವಂತಿಕೆಯಲ್ಲಿ ಬರೆದ ಭಾಗವನ್ನು ಋಗ್ವೇದದಲ್ಲಿ ಅಳವಡಿಸಲಾಗಿದೆ. ಸಾಮಾನ್ಯರಿಗೆ ಅರ್ಥ ಮಾಡಿಕೊಳ್ಳಲು ಅತ್ಯಂತ ಕ್ಲಿಷ್ಟವಾಗಿದ್ದ ದೈವಿಕ ರಹಸ್ಯದ ವೇದವನ್ನು ವೇದವ್ಯಾಸ ಮಹರ್ಷಿಗಳು ನಾಲ್ಕು ಭಾಗಗಳಾಗಿ ವಿಂಗಡಿಸಿ ಸರಳೀಕರಣಗೊಳಿಸುತ್ತಾರೆ. ಹೀಗೆ ವಿಂಗಡಿಸಲ್ಪಟ್ಟುದರ ಪೈಕಿ ಪ್ರಥಮ ಭಾಗವೇ ಋಗ್ವೇದ ಎಂದು ಕರೆಸಿಕೊಂಡಿದೆ. ಬಳಿಕ ಯಜುರ್ವೇದ, ಸಾಮವೇದ ಹಾಗೂ ಅಥರ್ವ ವೇದಗಳಿವೆ. ಋಗ್ವೇದದ ಮೂಲ ಸಂಸ್ಕೃತ ಸೂಕ್ತಗಳನ್ನು ಬೆಂಗಳೂರು ವಿಶ್ವೇಶ್ವರಪುರದ ಸ್ವಾಮೀ ಶ್ರದ್ಧಾನಂದ ಭವನದಲ್ಲಿರುವ ವೇದ ಭಾಷ್ಯ ಪ್ರಕಾಶನ ಸಮಿತಿಯವರು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದ್ದಾರೆ. ಸುಮಾರು ೧೨೨ ವರ್ಷಗಳ ದೀರ್ಘಕಾಲ ಬಾಳಿ ೨೦೨೦ ರ ಫೆಬ್ರವರಿಯಲ್ಲಿ ದೈವಾಧೀನರಾದ ಪಂಡಿತ ಸುಧಾಕರ ಚತುರ್ವೇದಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಈ ಅನುವಾದ ಗ್ರಂಥ ಮುದ್ರಣಗೊಂಡಿದೆ. ಶ್ರ್ರುತಿಪ್ರಿಯ ಅವರು ಈ ಸಂಪುಟಗಳ ಸಂಪಾದಕರು. ಸ್ವ್ವಾಮೀ ದಯಾನಂದ ಸರಸ್ವತೀ ಅವರು ಭಾಷ್ಯಕಾರರು, ವಿದ್ವಾನ್ ವಾಸುದೇವ ಪರಾಂಜಪೆ ಅವರು ಭಾಷ್ಯಾನುವಾದಕರು. ಈ ಅನುವಾದಿತ ಋಗ್ವೇದ ಗ್ರಂಥದಲ್ಲಿರುವ ಲೋಪಾಮುದ್ರೆ ಬರೆದಿರುವ ಒಂದು ಸೂಕ್ತದ ಕೆಲವು ಪ್ರಮುಖ ಅಂಶಗಳನ್ನು ಹಾಗೂ ಅಗಸ್ತö್ಯರು ಬರೆದಿರುವ ೨೬ ಸೂಕ್ತಗಳಲ್ಲಿರುವ ಪ್ರಮುಖ ಅಂಶಗಳನ್ನೂ ಮುಂದೆ ಸರಣಿ ರೂಪದಲ್ಲಿ ಪ್ರಕಟಿಸಲಾಗುವದು. ಲೋಪಾಮುದ್ರೆ ಬರೆದಿರುವ ಒಂದು ಸೂಕ್ತದ ಪ್ರಾರಂಭದಲ್ಲಿಯೇ “ಲೋಪಾಮುದ್ರಾಗಸ್ತೌö್ಯ ಋಷಿ:” ಎಂದು ಆಕೆಯೇ ಬರೆದುದಕ್ಕೆ ಸಾಕ್ಷಿಯನ್ನು ಒದಗಿಸುತ್ತದೆ. ಅದರಲ್ಲಿ ಮುಖ್ಯವಾಗಿ ಗೃಹಸ್ಥ ಧರ್ಮದ ಕುರಿತು, ದಂಪತಿ ಯಾವ ರೀತಿ ಅನ್ಯೋನ್ಯತೆಯಿಂದ ಇರಬೇಕು ಎನ್ನುವ ಬಗ್ಗೆ ಸುಸ್ಪಷ್ಟ ಮಾರ್ಗದರ್ಶನವನ್ನು ಲೋಪಾಮುದ್ರೆ ತನ್ನ ಸಂಸ್ಕೃತ ರಚನೆಯ ಸೂಕ್ತದಲ್ಲಿ ಅಳವಡಿಸಿದ್ದಾಳೆ.
ಕಾವೇರಿ ನದಿಯಾಗಿ ಹರಿದ ಬಳಿಕ ಲೋಪಾಮುದ್ರ್ರೆಯಾಗಿ ಅಗಸ್ತö್ಯರೊಂದಿಗೆ ಆಕೆ ಉಳಿದ ಮತ್ತೊಂದು ಅವತಾರದಲ್ಲಿನ ಸಾಧನೆಯ ಮಹತ್ವವನ್ನು ಅದರಲ್ಲಿ ಸಾಮಾನ್ಯ ಜನತೆಯ ಜೀವನಕ್ಕೆ ಬೇಕಾದ ಮಾರ್ಗದರ್ಶನವನ್ನು ನೀಡಲಿಕ್ಕಾಗಿ ಇದನ್ನು ಪ್ರಕಟಿಸಲಾಗುತ್ತಿದೆ. ಅಲ್ಲದೆ, ಲೋಪಾಮುದ್ರೆಯ ಪತಿ ಅಗಸ್ತö್ಯರು ಋಗ್ವೇದದಲ್ಲಿನ ಹಲವು ಸೂಕ್ತ ರಚನೆ ಮೂಲಕ ಜಗತ್ತಿಗೆ ನೀಡಿದ ಕೊಡುಗೆ ಹಾಗೂ ಅದರ ಮಹತ್ವದ ಮಹತ್ತರ ಪ್ರಯೋಜನವನ್ನು ತಿಳಿಯುವದಕ್ಕೋಸ್ಕರವೂ ಇದನ್ನು ಪ್ರಕಟಿಸಲಾಗುತ್ತಿದೆ. ಕಾವೇರಿ ಕಥನದ ಬಳಿಕ ಇದು ಮತ್ತೊಂದು ಅವತಾರವಾದ ಲೋಪಾಮುದ್ರೆಯ ಸಾಧನೆಗೂ ಹಿಡಿದ ಕೈಗನ್ನಡಿಯಾಗಿ ಮೂಡಿಬರಲಿದೆ.
(ಮುಂದುವರಿಯುವುದು)
-ಜಿ. ರಾಜೇಂದ್ರ,
ಮಡಿಕೇರಿ.