ಸೋಮವಾರಪೇಟೆ, ಸೆ. ೨೫: ಶನಿವಾರಸಂತೆಯಿAದ ಸೋಮವಾರಪೇಟೆ ಪಟ್ಟಣಕ್ಕೆ ಪ್ರವೇಶ ಕಲ್ಪಿಸುವಲ್ಲಿ ಸ್ಮಾರಕದಂತಿರುವ ಶತಮಾನೋತ್ಸವ ಭವನ ಆಡಳಿತಗಾರರ ದಿವ್ಯ ಅನಾದರಕ್ಕೆ ಒಳಗಾಗಿದೆ. ಅನುದಾನದೊಂದಿಗೆ ಇಚ್ಛಾಶಕ್ತಿಯ ಕೊರತೆಯಿಂದಾಗಿ ಭವನ ಶಿಥಿಲಾವಸ್ಥೆಗೆ ತಲುಪಿದ್ದು, ೧೪ ವರ್ಷವಾದರೂ ವನವಾಸದಿಂದ ಶತಮಾನೋತ್ಸವ ಭವನ ಹೊರಬಂದಿಲ್ಲ.

ಹಲವಷ್ಟು ಬಾರಿ ಶಾಸಕರು, ಅಧಿಕಾರಿಗಳ ಗಮನ ಸೆಳೆದರೂ ಸಹ ಶತಮಾನೋತ್ಸವ ಭವನಕ್ಕೆ ಹಿಡಿದ ಗ್ರಹಣ ಇಂದಿಗೂ ಬಿಟ್ಟಂತೆ ಕಾಣುತ್ತಿಲ್ಲ. ಶತಮಾನೋತ್ಸವ ಭವನ ಎರಡು ಗುಂಪುಗಳ ನಡುವಿನ ಪ್ರತಿಷ್ಠೆಗೆ ಬಲಿಯಾಗುತ್ತಿದ್ದು, ಪಾಳುಬಿದ್ದ ಗೋಪುರದಂತಾಗಿದೆ.

ಕಳೆದ ೨೦೦೭ ರಲ್ಲಿ ಶಾಸಕರಾಗಿದ್ದ ಮಾಜಿ ಸಚಿವ ಬಿ.ಎ. ಜೀವಿಜಯ ಅವರ ಅಭಿಲಾಷೆಯಂತೆ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ೧೦೦ ವರ್ಷಗಳು ತುಂಬಿದ ಸವಿನೆನಪಿಗಾಗಿ ಶತಮಾನೋತ್ಸವ ಭವನ ನಿರ್ಮಿಸಲು ಕಾರ್ಯಯೋಜನೆ ರೂಪಿಸಲಾಗಿತ್ತು. ೨೦೦೭ರಲ್ಲಿಯೇ ರೂ. ೧.೨೫ ಕೋಟಿ ವೆಚ್ಚದ ಭವನಕ್ಕೆ ಉತ್ಸಾಹದಿಂದ ಚಾಲನೆ ನೀಡಿದ ಜೀವಿಜಯ ಅವರು, ನಂತರದ ಚುನಾವಣೆಗಳಲ್ಲಿ ಸತತವಾಗಿ ಸೋಲು ಕಂಡಿದ್ದರಿAದ, ಶತಮಾನೋತ್ಸವ ಭವನವೂ ಸಹ ಸೋಲು ಕಾಣುವಂತಾಯಿತು.

೨೦೦೭ರಲ್ಲಿ ಎಂಎಲ್‌ಎ ಆಗಿದ್ದ ಬಿ.ಎ.ಜೀವಿಜಯ ಅವರು ಭವನ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷರೂ ಆಗಿದ್ದರಿಂದ ತಮ್ಮ ಶಾಸಕರ ನಿಧಿಯಿಂದ ರೂ. ೧೮ ಲಕ್ಷ, ಮಲೆನಾಡು ಅಭಿವೃದ್ದಿ ಮಂಡಳಿಯಿAದ ವಿವಿಧ ಹಂತಗಳಲ್ಲಿ ರೂ. ೧೫ ಲಕ್ಷ, ರಾಜ್ಯ ಸಭಾ ಸದಸ್ಯ ರೆಹಮಾನ್‌ಖಾನ್ ಅವರು ತಮ್ಮ ಕ್ಷೇತ್ರಾಭಿವೃದ್ದಿ ನಿಧಿಯಿಂದ ನೀಡಿದ ರೂ ೪ ಲಕ್ಷ, ಕೇಂದ್ರ ಸಚಿವ ಎಂ.ವಿ.ರಾಜಶೇಖರನ್ ತಮ್ಮ ಕ್ಷೇತ್ರಾಭಿವೃದ್ದಿ ನಿಧಿಯಿಂದ ರೂ. ೨.೫ ಲಕ್ಷ ಹಾಗೂ ವಿಧಾನ ಪರಿಷತ್ ಸದಸ್ಯೆ ಮೋಟಮ್ಮರವರು ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ರೂ. ೩ ಲಕ್ಷ ಒದಗಿಸಿದ್ದರಿಂದ ಭವನ ನಿರ್ಮಾಣ ಶೇ. ೪೦ ರಷ್ಟು ಪೂರ್ಣಗೊಂಡಿದೆ.

ಇದಾದ ನಂತರ ಜೀವಿಜಯ ಅವರು ಚುನಾವಣೆಯಲ್ಲಿ ಸೋತು ಅಪ್ಪಚ್ಚು ರಂಜನ್ ಅವರು ಶಾಸಕರಾಗಿ ಗೆಲುವು ಸಾಧಿಸಿದರು. ಈ ಸಂದರ್ಭ ರಾಜಕೀಯ ಪ್ರತಿಷ್ಠೆಯಿಂದಾಗಿ ಶತಮಾನೋತ್ಸವ ಭವನ ನಿರ್ಮಾಣ ಸಮಿತಿಯ ಪದಾಧಿಕಾರಿಗಳು ಹಾಗೂ ಅಪ್ಪಚ್ಚುರಂಜನ್ ನಡುವೆ ಹೊಂದಾಣಿಕೆ ಇಲ್ಲದೇ ಹೋಗಿದ್ದರಿಂದ ಇಂದಿಗೂ ಭವನ ಶಿಥಿಲಾವಸ್ಥೆಯಲ್ಲಿಯೇ ಉಳಿಯುವಂತಾಗಿದೆ.

ಪ.ಪA.ನಿAದ ೧ ಕೋಟಿ ಅನುದಾನಕ್ಕೆ ಕೊಕ್ಕೆ: ೨೦೧೩ರಲ್ಲಿ ಕೇಂದ್ರ ಸರ್ಕಾರ ಪುರಸ್ಕೃತ ಯುಐಡಿಎಸ್‌ಎಸ್‌ಎಂಟಿ ಯೋಜನೆಯಡಿ ಪ್ರತಿ ಪಟ್ಟಣ ಪಂಚಾಯಿತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ೨೦ಕೋಟಿ ರೂ. ಗಳ ಕ್ರಿಯಾಯೋಜನೆಯನ್ನು ರೂಪಿಸಲಾಗಿತ್ತು. ಅದರಲ್ಲಿ ಶತಮಾನೋತ್ಸವ ಭವನ ಕಾಮಗಾರಿ ಪೂರ್ಣಗೊಳಿಸಲು ಒಂದು ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು.

ಆದರೆ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕೆಲ ಸದಸ್ಯರು ಶತಮಾನೋತ್ಸವ ಭವನ ಕಾಮಗಾರಿಗೆ ಮೀಸಲಿಟ್ಟಿದ್ದ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳುವಂತೆ ಸಲಹೆ ನೀಡಿದ್ದರಿಂದ, ಅಲ್ಲಿಯೂ ಭವನಕ್ಕೆ ಸೋಲಾಯಿತು.

ಶತಮಾನೋತ್ಸವ ಭವನ ಕಾಮಗಾರಿ ಪೂರ್ಣಗೊಂಡರೆ, ಪಟ್ಟಣದ ಜನರಿಗೆ, ಸಂಘ-ಸAಸ್ಥೆಗಳಿಗೆ ಉಪಯೋಗವಾಗುತ್ತದೆ. ಭವನ ಪಟ್ಟಣಕ್ಕೆ ಸಮೀಪದಲ್ಲಿದ್ದು, ಮುಂದೆ ಪಟ್ಟಣ ಪಂಚಾಯಿತಿ ವ್ಯಾಪ್ತಿ ವಿಸ್ತಾರವಾದರೆ ಉದ್ದೇಶಿತ ಭವನ ಪಟ್ಟಣಕ್ಕೆ ಸೇರ್ಪಡೆಯಾಗಲಿದೆ. ಅಭಿವೃದ್ಧಿ ವಿಷಯದಲ್ಲಿ ತಾರತಮ್ಯ ಬೇಡ, ಕೇಂದ್ರ ಸರ್ಕಾರದ ಹಣವನ್ನು ಸದುದ್ದೇಶದ ಕಾಮಗಾರಿಗಳಿಗೆ ಉಪಯೋಗಿಸಲು ಯಾವದೇ ಅಡೆತಡೆಗಳಿಲ್ಲ ಎಂದು ಕೆಲ ಸದಸ್ಯರು ವಾದಿಸಿದರೂ ಸಹ ಈ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳುವಲ್ಲಿ ಪಂಚಾಯಿತಿ ವಿಫಲವಾಯಿತು.

ಮಾಜಿ ಸಚಿವ ಬಿ.ಎ. ಜೀವಿಜಯ ಪ್ರಾರಂಭ ಮಾಡಿದ, ಕಾಮಗಾರಿಯನ್ನು ಪೂರ್ಣಗೊಳಿಸಲು, ಇನ್ನೊಂದು ಪಕ್ಷದವರಿಗೆ ಇಷ್ಟವಿಲ್ಲ. ಈ ಕಾರಣದಿಂದ ಕಳೆದ ೧೪ ವರ್ಷಗಳಿಂದ ಶತಮಾನೋತ್ಸವ ಭವನಕ್ಕೆ ಸರ್ಕಾರದಿಂದ ಹಣ ಒದಗಿಸಲು ಯಾರೂ ಮುಂದಾಗಿಲ್ಲವೆAಬ ಆರೋಪಗಳು ಸಾರ್ವಜನಿಕ ವಲಯದಲ್ಲಿದೆ.

ದಾಖಲೆ ನೀಡಿದರೆ ಕ್ರಮ: ಶತಮಾನೋತ್ಸವ ಭವನ ಸಂಬAಧಿತ ಎಲ್ಲಾ ದಾಖಲೆಗಳು ಮಾಜಿ ಶಾಸಕ ಬಿ.ಎ. ಜೀವಿಜಯ ಅವರ ಬಳಿಯಿದ್ದು, ಯೋಜನೆಗೆ ಸಂಬAಧಿಸಿದ ಯಾವದೇ ದಾಖಲೆಗಳು ತನ್ನ ಬಳಿಯಿಲ್ಲ. ಈ ಹಿಂದೆ ಅನೇಕ ಬಾರಿ ದಾಖಲೆಗಳನ್ನು ಒದಗಿಸುವಂತೆ ಕೇಳಿಕೊಂಡಿದ್ದರೂ ಹಸ್ತಾಂತರಿಸಿಲ್ಲ. ಶತಮಾನೋತ್ಸವ ಭವನದ ಕಾರ್ಯಾಧ್ಯಕ್ಷರೂ ಸಹ ಜೀವಿಜಯ ಅವರೇ ಆಗಿದ್ದು, ಅದಕ್ಕೆ ಸಂಬAಧಿಸಿದ ಅನುದಾನದ ವಿವರ, ಕ್ರಿಯಾಯೋಜನೆ, ನೀಲನಕ್ಷೆ ಸೇರಿದಂತೆ ಇದುವರೆಗಿನ ಎಲ್ಲಾ ದಾಖಲೆ ನೀಡಿದರೆ ಶತಮಾನೋತ್ಸವ ಭವನವನ್ನು ಪೂರ್ಣಗೊಳಿಸಲಾಗುವದು ಎಂದು ಶಾಸಕ ಅಪ್ಪಚ್ಚುರಂಜನ್ ಹೇಳುತ್ತಿದ್ದು, ಈ ಬಗ್ಗೆ ವ್ಯವಹರಿಸಲು ಸಮಿತಿಯ ಪದಾಧಿಕಾರಿಗಳು ಮುಂದಾಗಿಲ್ಲ. ಪರಿಣಾಮ ಶತಮಾನೋತ್ಸವ ಭವನ ಪಾಳುಬಿದ್ದ ಕೊಂಪೆಯಾಗುತ್ತಿದೆ.

ಈಗಾಗಲೇ ಒಂದೂಕಾಲು ಕೋಟಿ ವೆಚ್ಚದಲ್ಲಿ ಜಾನುವಾರುಗಳಿಗೆ ಕೊಟ್ಟಿಗೆ(!?) ನಿರ್ಮಿಸಿದ ಕೀರ್ತಿ ಯಾರಿಗೆ ಸಲ್ಲಬೇಕು? ಎಂಬ ಪ್ರಶ್ನೆ ಸಹಜವಾಗಿ ಸಾರ್ವಜನಿಕರನ್ನು ಕಾಡುತ್ತಿದೆ. ನಮಗೆ ಕಟ್ಟಡವನ್ನು ವಹಿಸಿಕೊಟ್ಟರೆ ತಾಲೂಕು ಮಟ್ಟದ ಗುರುಭವನ ನಿರ್ಮಾಣ ಮಾಡುತ್ತೇವೆ. ಅನುದಾನವನ್ನು ನಾವೇ ತರುತ್ತೇವೆ ಎಂದು ಶಿಕ್ಷಕರ ಸಂಘದವರು ಮುಂದಿಟ್ಟಿದ್ದ ಪ್ರಸ್ತಾಪವನ್ನೂ ಕೆಲವರು ತಿರಸ್ಕರಿಸಿದ್ದಾರೆ.

ಅತ್ತ ಬೇರೆಯವರಿಗೂ ಕೊಡೋದಿಲ್ಲ; ಇತ್ತ ಭವನವನ್ನೂ ಪೂರ್ಣಗೊಳಿಸುತ್ತಿಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿದೆ. ಈ ಬಗ್ಗೆ ಸಮಿತಿಯ ಪದಾಧಿಕಾರಿಗಳು ಎಚ್ಚೆತ್ತುಕೊಂಡು ಭವನ ನಿರ್ಮಾಣಕ್ಕೆ ಬೇಕಾದ ಕಾರ್ಯಯೋಜನೆ ತಯಾರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. - ವಿಜಯ್ ಹಾನಗಲ್