ಭಾರತದಲ್ಲಿನ ಸುಧಾರಣೆಗಳು ಜಗತ್ತನ್ನೇ ಬದಲಾಯಿಸುತ್ತವೆ

ನ್ಯೂಯಾರ್ಕ್, ಸೆ. ೨೫: ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯ ಸಭೆಯ ೭೬ನೇ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ್ದು ಉಗ್ರವಾದವನ್ನು ಬೆಂಬಲಿಸುತ್ತಿರುವ ಪಾಕಿಸ್ತಾನಕ್ಕೆ ತಿವಿದಿದ್ದಾರೆ. ಕೋವಿಡ್‌ಗೆ ಬಲಿಯಾದವರಿಗೆ ಗೌರವ ಸಲ್ಲಿಸಿ ಭಾಷಣ ಪ್ರಾರಂಭಿಸಿದ ಮೋದಿ, ಕೋವಿಡ್, ಭಯೋತ್ಪಾದನೆ, ಭಾರತದ ಪ್ರಜಾಪ್ರಭುತ್ವ, ಆರ್ಥಿಕತೆ, ಅಫ್ಘಾನಿಸ್ತಾನ ಸೇರಿದಂತೆ ಹತ್ತು ಹಲವು ವಿಷಯಗಳ ಬಗ್ಗೆ ಮಾತನಾಡಿದರು. ಭಾರತದಲ್ಲಿನ ಸುಧಾರಣೆಗಳು ಜಗತ್ತನ್ನು ಬದಲಾವಣೆ ಮಾಡುವುದಕ್ಕೆ ಸಹಕಾರಿಯಾಗಿವೆ. ಭಾರತ ಬೆಳೆದರೆ ಜಗತ್ತೂ ಬೆಳೆಯಲಿದೆ. ಭಾರತದಲ್ಲಿನ ಸುಧಾರಣೆಗಳು ಜಗತ್ತನ್ನು ಬದಲಾಯಿಸುತ್ತವೆ ಎಂದು ಮೋದಿ ಹೇಳಿದರು. ಅಭಿವೃದ್ಧಿ ಎಲ್ಲರನ್ನೂ ಒಳಗೊಳ್ಳುವಂತಿರಬೇಕು, ಸರ್ವರನ್ನೂ ತಲುಪುವಂತಿರಬೇಕು ಇದು ನಮ್ಮ ಆದ್ಯತೆ. ಭಾರತವೂ ಸೇರಿದಂತೆ ಜಗತ್ತಿನ ವಿವಿಧ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದನ್ನು ಉಲ್ಲೇಖಿಸಿದ ಮೋದಿ, ಮಲಿನಗೊಂಡಿರುವ ನೀರಿನ ಸಮಸ್ಯೆ ಭಾರತಕ್ಕೆ ಅಷ್ಟೇ ಸೀಮಿತವಾಗಿಲ್ಲ. ಬಡ ಹಾಗೂ ಅಭಿವೃದ್ಧಿಯಾಗುತ್ತಿರುವ ದೇಶಗಳಲ್ಲೂ ಈ ಸಮಸ್ಯೆ ಇದೆ. ಈ ಸಮಸ್ಯೆಯನ್ನು ಕೊನೆಗಾಣಿಸುವುದಕ್ಕಾಗಿ ೧೭ ಕೋಟಿ ಮನೆಗಳಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆ ಮಾಡುವ ಅಭಿಯಾನ ಕೈಗೊಂಡಿದ್ದೇವೆ ಎಂದು ಮೋದಿ ಮಾಹಿತಿ ನೀಡಿದರು. ಇದೇ ವೇಳೆ ಕೋವಿಡ್ ಲಸಿಕೆಗಳನ್ನು ಭಾರತದಲ್ಲಿ ಉತ್ಪಾದಿಸಲು ಮೋದಿ ಜಾಗತಿಕ ಸಮುದಾಯಕ್ಕೆ ಕರೆ ನೀಡಿದ್ದಾರೆ. ಇನ್ನು ತಮ್ಮ ಭಾಷಣದಲ್ಲಿ ಪಾಕಿಸ್ತಾನವನ್ನು ಬಿಡದ ಮೋದಿ, ಕೆಲವು ರಾಷ್ಟçಗಳು ಭಯೋತ್ಪಾದನೆಯನ್ನು ರಾಜಕೀಯ ಸಾಧನವಾಗಿ ಬಳಕೆ ಮಾಡಿಕೊಳ್ಳುತ್ತಿವೆ ಎಂದು ಟೀಕಿಸಿದರು. ಅಫ್ಘಾನ್‌ನ ಭೂ ಭಾಗವನ್ನು ಭಯೋತ್ಪಾದನೆ, ಭಯೋತ್ಪಾದಕ ಚಟುವಟಿಕೆಗಳಿಗಾಗಿ ಬಳಕೆ ಮಾಡದಂತೆ ಖಾತ್ರಿಪಡಿಸಿಕೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ.