ಮಡಿಕೇರಿ, ಸೆ. ೨೫: ಗ್ರಾಮ ಲೆಕ್ಕಿಗರ ಹುದ್ದೆಗೆ ನೇಮಿಸಲು ಮತ್ತು ಸಿಂಧುತ್ವ ಪ್ರಮಾಣ ಪತ್ರ ನೀಡಲು ಜಿಲ್ಲಾಡಳಿತದ ಲಾಂಛನದೊAದಿಗೆ ಜಿಲ್ಲಾಧಿಕಾರಿಗಳು ಪತ್ರ ಕಳುಹಿಸಿದಂತೆ ನಕಲಿ ಪತ್ರ ಕಳುಹಿಸಿ ಲಂಚದ ಬೇಡಿಕೆ ಇಟ್ಟಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಜಿಲ್ಲಾ ಅಪರಾಧ ಪತ್ತೆದಳದವರು ಮೂವರನ್ನು ಸೆರೆಹಿಡಿದು ನಗರ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಜಿಲ್ಲಾಡಳಿತದ ಲಾಂಛನವನ್ನು ಮುದ್ರಿಸಿ, ಜಿಲ್ಲಾಧಿಕಾರಿಗಳ ಸಹಿಯನ್ನು ನಕಲು ಮಾಡಿ ಜಿಲ್ಲಾಧಿಕಾರಿಗಳು ನೇಮಕಾತಿ ಪತ್ರ ಕಳುಹಿಸಿದಂತೆ ನಂಜರಾಯಪಟ್ಟಣದ ಕೆ.ಎಂ. ಯಶ್ವಿತಾ ಎಂಬರಿಗೆ ಮನೆ ವಿಳಾಸ ಸಹಿತ ಅಂಚೆ ಮೂಲಕ ನಕಲಿ ನೇಮಕಾತಿ ಪತ್ರ ಕಳುಹಿಸಿದ್ದಲ್ಲದೆ ಆಕೆಗೆ ಕರೆ ಮಾಡಿ ರೂ. ೧.೫೦ ಲಕ್ಷದ ಹಣದ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಯಶ್ವಿತಾ ಜಿಲ್ಲಾಡಳಿತದ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸಾರ್ವಜನಿಕ ಪ್ರಕಟಣೆ ಹೊರಡಿಸಿ ಎಚ್ಚರಿಕೆಯ ಸಂದೇಶ ನೀಡಿದ್ದರು. ಈ ಸಂಬAಧ ಜಿಲ್ಲಾಧಿಕಾರಿಗಳ ಸೂಚನೆ ಮೇರೆ ಕಚೇರಿಯಲ್ಲಿ ಶಿರಸ್ತೇದಾರರಾಗಿರುವ ಪ್ರಕಾಶ್ ಅವರು ಮಡಿಕೇರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಅಲ್ಲದೆ, ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾ ಅಪರಾಧ ಪತ್ತೆದಳದವರಿಗೆ ಜಿಲ್ಲಾಡಳಿತದಿಂದ ಸೂಚನೆ ಬಂದ ಹಿನ್ನೆಲೆಯಲ್ಲಿ ಅಪರಾಧ ಪತ್ತೆದಳದವರು ಕಾರ್ಯಾಚರಣೆ ನಡೆಸಿ ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಚಂದ್ರಶೇಖರ್, ರಾಜಮಣಿ (ಲೋಕೇಶ್) ಹಾಗೂ ಗಣಪತಿ (ಶಬರಿಶ) ಎಂಬವರುಗಳನ್ನು ವಶಕ್ಕೆ ಪಡೆದು ನಗರ ಪೊಲೀಸರ ಸುಪರ್ದಿಗೆ ವಹಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ಮುಂದುವರಿಸಿದ್ದಾರೆ.
(ಮೊದಲ ಪುಟದಿಂದ)
ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ನಿರ್ದೇಶನದ ಮೇರೆಗೆ ಡಿವೈಎಸ್‌ಪಿ ಗಜೇಂದ್ರ ಪ್ರಸಾದ್ ಮಾರ್ಗದರ್ಶನದಲ್ಲಿ ಅಪರಾಧ ಪತ್ತೆದಳದ ಇನ್ಸ್ಪೆಕ್ಟರ್ ಮೇದಪ್ಪ, ಉಪನಿರೀಕ್ಷಕ ಹಮೀದ್, ಸಿಬ್ಬಂದಿಗಳಾದ ನಿರಂಜನ್, ಯೋಗೇಶ್, ವಸಂತ, ಸುರೇಶ, ಶರತ್, ಗಿರೀಶ್, ರಾಜೇಶ್, ಚಾಲಕ ಶಶಿಕುಮಾರ್, ಮಡಿಕೇರಿ ನಗರ ಠಾಣಾ ಸಿಬ್ಬಂದಿಗಳಾದ ಪ್ರವೀಣ್ ಹಾಗೂ ನಾಗ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಮೂವರು ಆರೋಪಿಗಳನ್ನು ನಗರ ಠಾಣಾಧಿಕಾರಿ ಅಂತಿಮ ಅವರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.