ವೀರಾಜಪೇಟೆ, ಸೆ. ೨೫: ಅಪರೂಪದ ವನ್ಯಜೀವಿಯಾದ ಪ್ಯಾಂಗೋಲಿನ್ (ಚಿಪ್ಪುಹಂದಿ) ಪ್ರಾಣಿಯನ್ನು ಕಳ್ಳಸಾಗಾಣಿಕೆ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ವೀರಾಜಪೇಟೆ ತಾಲೂಕು ಸಿ.ಐ.ಡಿ. ಪೊಲೀಸ್ ಅರಣ್ಯ ಸಂಚಾರಿ ದಳ ಯಶಸ್ವಿಯಾಗಿದೆ.
ಹಮ್ಮಿಯಾಲದ ತಂಬುಕುತ್ತೀರ ಕೆ. ರಾಮಪ್ಪ (೨೮), ೭ನೇ ಹೊಸಕೋಟೆಯ ನಡುಮನೆ ಎಲ್. ವಸಂತ್ ಕುಮಾರ್, ಹಾಸನ ಜಿಲ್ಲೆಯ ಕೆಂಚಮ್ಮನ ಹೊಸಕೋಟೆಯ ಕೆ.ಬಿ. ಸುರೇಶ್ (೩೯) ಬಂಧಿತ ಆರೋಪಿಗಳು.
(ಮೊದಲ ಪುಟದಿಂದ)
ಸುAಟಿಕೊಪ್ಪದಿAದ ಸಿದ್ಧಾಪರ ಮಾರ್ಗವಾಗಿ ವೀರಾಜಪೇಟೆ ನಗರದ ಕಡೆಗೆ ಮಾರುತಿ ಓಮ್ನಿ ಕಾರಿನಲ್ಲಿ (ಕೆಎ-೧೨-ಎನ್-೬೧೮೬) ಆರೋಪಿಗಳು ಗೋಣಿಚೀಲದ ಒಳಗೆ ಅಳಿವಿನಂಚಿನಲ್ಲಿರುವ ಒಂದು ಪ್ಯಾಂಗೋಲಿನ್ (ಚಿಪ್ಪುಹಂದಿ) ಅನ್ನು ಅಕ್ರಮವಾಗಿ ಕಳ್ಳಸಾಗಾಣಿಕೆ ಮಾಡಿ ಮಾರಾಟ ಮಾಡಲು ಬರುತ್ತಿರುವುದಾಗಿ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಬ್ಬಂದಿಗಳು ಪ್ಯಾಂಗೋಲಿನ್ ಸಹಿತ ಆರೋಪಿಗಳನ್ನು ಬಂಧಿಸಿ ವೀರಾಜಪೇಟೆ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗಳನ್ನು ೧೫ ದಿನಗಳ ನ್ಯಾಯಾಂಗ ಬಂಧನದಲ್ಲಿಡಲು ಆದೇಶಿಸಿದೆ.
ಸಿಐಡಿ ಪೊಲೀಸ್ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕರಾದ ಕೆ.ವಿ. ಶರತ್‌ಚಂದ್ರ ನಿರ್ದೇಶನ, ಮಡಿಕೇರಿ ಘಟಕದ ಅಧೀಕ್ಷಕ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಂಚಾರಿದಳದ ಉಪನಿರೀಕ್ಷಕಿ ವೀಣಾ ನಾಯಕ್, ಸಿಬ್ಬಂದಿಗಳಾದ ಟಿ.ಪಿ. ಮಂಜುನಾಥ್, ಕೆ.ಎಸ್. ದೇವಯ್ಯ, ಸಿ.ಬಿ. ಬೀನ, ಎಸ್.ಎಂ. ಯೋಗೇಶ್ ಇದ್ದರು.
ಏನಿದು ಪ್ಯಾಂಗೋಲಿನ್?
ದಕ್ಷಿಣ ಚೀನಾ ಮತ್ತು ವಿಯೆಟ್ನಾಂನಲ್ಲಿ ಸಾಂಪ್ರದಾಯಿಕ ಚೈನೀಸ್ ಮತ್ತು ವಿಯೆಟ್ನಾಮೀಸ್ ಔಷಧಿಗಳಿಗೆ ಪ್ಯಾಂಗೋಲಿನ್ ಬಳಕೆಯಾಗುತ್ತದೆ. ಇದಕ್ಕೆ ಹೆಚ್ಚಿನ ಬೇಡಿಕೆ ಇದೆ. ಏಕೆಂದರೆ ಅವುಗಳ ಮಾಪಕಗಳು ಔಷಧೀಯ ಗುಣಗಳನ್ನು ಹೊಂದಿವೆ. ಮಾಂಸವನ್ನು ಸಹ ಒಂದು ಪದಾರ್ಥವೆಂದು ಪರಿಗಣಿಸಲಾಗುತ್ತದೆ. ಕಳೆದ ದಶಕದಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಅಂದರೆ ಇದು ಪ್ರಪಂಚದಲ್ಲಿ ಅತಿ ಹೆಚ್ಚು ಸಾಗಾಣಿಕೆಯ ಪ್ರಾಣಿಯಾಗಿ ಮಾರ್ಪಟ್ಟಿದೆ. ಇದೊಂದು ಅಪರೂಪದ ವನ್ಯಜೀವಿಯಾಗಿದ್ದು, ಭಾರತದಲ್ಲಿ ಇದು ಕಂಡುಬರುವುದು ವಿರಳವಾಗಿದೆ. ಆಫ್ರಿಕಾದಲ್ಲಿ ಈ ಪ್ರಾಣಿ ಹೆಚ್ಚಾಗಿ ಕಂಡುಬರುತ್ತದೆ. ಕೊಡಗಿನಲ್ಲಿ ದಟ್ಟಾರಣ್ಯ ಪ್ರದೇಶದಲ್ಲಿ ವನ್ಯಜೀವಿ ಇದೆ ಎಂದು ಅರಣ್ಯ ಅಧಿಕಾರಿಗಳು ಹೇಳುತ್ತಾರೆ.
ಕೊಡಗಿನಲ್ಲಿ ಪ್ಯಾಂಗೋಲಿನ್ ಮಾಂಸ ದೊರೆತ ಪ್ರಕರಣಗಳು ಇವೆ. ಆದರೆ, ಜೀವಂತ ಪ್ಯಾಂಗೋಲಿನ್ ಪತ್ತೆಯಾಗಿರುವುದು ಇದೇ ಮೊದಲಾಗಿದೆ. -ಕಿಶೋರ್ ಶೆಟ್ಟಿ