ಪಟಾಕಿ ಸಂಗ್ರಹಿಸಿಟ್ಟಿದ್ದ ಗೋದಾಮಿನಲ್ಲಿ ಸ್ಫೋಟ; ಮೂವರು ಸಾವು
ಬೆಂಗಳೂರು, ಸೆ. ೨೩: ವಿ.ವಿ. ಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ನ್ಯೂ ತರಗುಪೇಟೆಯ ಶ್ರೀ ಪತ್ರಕಾಳಿ ಲಾರಿ ಸರ್ವಿಸಸ್ ಒಳಗಡೆ ಇಂದು ಮಧ್ಯಾಹ್ನ ಸ್ಫೋಟ ಸಂಭವಿಸಿ ಮೂವರು ಮೃತಪಟ್ಟಿದ್ದು, ಐವರು ತೀವ್ರ ಗಾಯಗೊಂಡಿದ್ದಾರೆ. ಮೃತದೇಹಗಳು ಛಿದ್ರ ಛಿದ್ರಗೊಂಡಿದ್ದು, ಸ್ಫೋಟದಿಂದಾಗಿ ನಿಲ್ಲಿಸಲಾಗಿದ್ದ ೧೦ ಬೈಕ್ಗಳಿಗೂ ಹಾನಿಯಾಗಿದೆ. ಹಿರಿಯ ಪೊಲೀಸರು ಹಾಗೂ ಎಫ್ಎಸ್ಎಲ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ೬೦ ಪಟಾಕಿ ಪೆಟ್ಟಿಗೆಗಳನ್ನು ಗೋದಾಮಿನ ಒಳಗಡೆ ಸಂಗ್ರಹಿಸಿಡಲಾಗಿತ್ತು. ಅವುಗಳೇ ಸ್ಫೋಟಕ್ಕೆ ಕಾರಣವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಗೋದಾಮಿನ ಒಳಗಡೆ ಕೈಗಾರಿಕಾ ಸರಕುಗಳು ಕಂಡುಬAದಿವೆ, ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳ ಅಭಿಪ್ರಾಯಕ್ಕಾಗಿ ಕಾಯುತ್ತಿದ್ದೇವೆ, ಪಟಾಕಿಗಳನ್ನು ಕಾನೂನು ಪ್ರಕಾರ ಸಂಗ್ರಹಿಸಿಡಲಾಗಿತ್ತೇ, ಅಥವಾ ಅಕ್ರಮವಾಗಿ ಸಂಗ್ರಹಿಸಿಡಲಾಗಿತ್ತೆ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉಗ್ರರ ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ ಸೇನೆ
ಶ್ರೀನಗರ, ಸೆ. ೨೩: ಭಾರತೀಯ ಸೇನೆ ಜಮ್ಮು-ಕಾಶ್ಮೀರದ ಬಾರಾಮುಲ್ಲಾದ ಉರಿಯ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ಭಯೋತ್ಪಾದಕರ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಿದೆ. ಉಗ್ರರು ಸಂಗ್ರಹಿಸಿದ್ದ ಅಪಾರ ಪ್ರಮಾಣದ ಶಸ್ತಾçಸ್ತçಗಳನ್ನು ಸೇನೆ ವಶಪಡಿಸಿಕೊಂಡಿದೆ. ಎಲ್ಒಸಿ ಬಳಿ ಹತ್ಲಾಂಗದಲ್ಲಿ ಅನುಮಾನಾಸ್ಪದ ಚಲನವಲನಗಳನ್ನು ಗಮನಿಸುತ್ತಿದ್ದೆವು ಒಳನುಸುಳುವವರನ್ನು ತಡೆದು ಈ ಪೈಕಿ ಮೂವರನ್ನು ಹೊಡೆದುರುಳಿಸಲಾಗಿದೆ. ೫ ಅಸಾಲ್ಟ್ ರೈಫಲ್ಗಳು, ೭ ಪಿಸ್ತೂಲ್ಗಳು, ಗ್ರೆನೇಡ್ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸೇನಾ ಅಧಿಕಾರಿ ಲೆಫ್ಟಿನೆಂಟ್ ಜನರಲ್ ಡಿಪಿ ಪಾಂಡೆ ತಿಳಿಸಿದ್ದಾರೆ.
ಮೃತನ ಕುಟುಂಬಕ್ಕೆ ರೂ. ೧ ಲಕ್ಷ ನೆರವು ನೀಡಿದ ಪೊಲೀಸರು
ಮೈಸೂರು, ಸೆ. ೨೩: ಮೈಸೂರಿನಲ್ಲಿ ನಡೆದಿದ್ದ ಶೂಟೌಟ್ ಪ್ರಕರಣ ಭೇದಿಸಿದ ಪೊಲೀಸರಿಗೆ ಐದು ಲಕ್ಷ ರೂಪಾಯಿ ಬಹುಮಾನ ಘೋಷಣೆಯಾಗಿತ್ತು. ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದ ದಡದಹಳ್ಳಿ ಯುವಕನ ಕುಟುಂಬಕ್ಕೆ ಬಹುಮಾನದ ಹಣದಲ್ಲಿ ಒಂದು ಲಕ್ಷ ರೂಪಾಯಿ ನೆರವು ನೀಡಿ ಮೈಸೂರಿನ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ವಿದ್ಯಾರಣ್ಯಪುರಂ ಠಾಣಾ ವ್ಯಾಪ್ತಿಯಲ್ಲಿ ಶೂಟೌಟ್ ನಡೆದಿತ್ತು. ಈ ವೇಳೆ ದರೋಡೆಕೋರರ ಗುಂಡಿನ ದಾಳಿಗೆ ದಡದಹಳ್ಳಿ ಯುವಕ ಚಂದ್ರು ಬಲಿಯಾಗಿದ್ದ. ಪೊಲೀಸರು ಶೀಘ್ರವಾಗಿ ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರು ಪೊಲೀಸರಿಗೆ ರಾಜ್ಯ ಸರ್ಕಾರ ರೂ. ೫ ಲಕ್ಷ ಬಹುಮಾನ ಘೋಷಿಸಿತ್ತು. ಇದೀಗ ಬಹುಮಾನದ ಹಣದಲ್ಲಿ ಚಂದ್ರು ಕುಟುಂಬಕ್ಕೆ ಪೊಲೀಸರು ಒಂದು ಲಕ್ಷ ರೂಪಾಯಿ ನೆರವು ನೀಡಿದ್ದಾರೆ. ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ನಗದು ಹಸ್ತಾಂತರ ಮಾಡಿದರು.