ಬೆಳೆನಷ್ಟ - ಆತಂಕದಲ್ಲಿ ರೈತರು

ಮಡಿಕೇರಿ, ಸೆ. ೧೭: ಹೊಸಕೋಟೆ ಸಮೀಪದ ಅಂದಗೋವೆ ಪೈಸಾರಿ ವಿಭಾಗದಲ್ಲಿ ಕಾಡಾನೆಗಳ ಹಾವಳಿ ತೀವ್ರವಾಗಿದ್ದು, ರೈತರ ಕಾಫಿ - ಕರಿಮೆಣಸು, ಅಡಿಕೆ ತೋಟಗಳನ್ನು ಆನೆಗಳು ನಾಶಗೊಳಿಸಿರುವುದಾಗಿ ಈ ವಿಭಾಗದ ರೈತರು ತಿಳಿಸಿದ್ದಾರೆ.

ಇಲ್ಲಿನ ಬಿ.ಎಂ. ಉಮ್ಮರ್ ಅವರ ಕಾಫಿ ತೋಟಕ್ಕೆ ನುಗ್ಗಿದ ಕಾಡಾನೆ, ಗಿಡಗಳನ್ನು ನಾಶಪಡಿಸಿ ನಷ್ಟ ಉಂಟು ಮಾಡಿದೆ. ಅಂತೆಯೇ ಆಹಾರ ದೊರಕದಾದಾಗ ಬಲಿತ ಮಾವಿನ ಮರದ ತೊಗಟೆಯನ್ನು ಕೋರೆಯಲ್ಲಿ ತಿವಿದು ತಿಂದು ಹಾನಿ ಉಂಟು ಮಾಡಿದೆ. ಗ್ರಾಮದ ಸುದರ್ಶನ್‌ನಾಯ್ಡು ಹಾಗೂ ಮಂಜುನಾಥ್ ಎಂಬವರ ತೋಟಗಳನ್ನು ಕಾಡಾನೆಗಳು ಪುಡಿಗಟ್ಟಿ ನಾಶ ಉಂಟು ಮಾಡಿರುವುದಾಗಿ ತಿಳಿದು ಬಂದಿದೆ.

ಇತ್ತೀಚಿನ ದಿನಗಳಲ್ಲಿ ಆನೆಕಾಡು ಅರಣ್ಯದಿಂದ ಜನನಿಬಿಡ ಪ್ರದೇಶಗಳಿಗೆ ಕಾಡಾನೆಗಳ ಸವಾರಿ ಹೆಚ್ಚತೊಡಗಿದ್ದು, ಕತ್ತಲಾಗುತ್ತಾ ಬಂದAತೆ ಸಾರ್ವಜನಿಕ ರಸ್ತೆಯಲ್ಲೂ ಆನೆಗಳು ಕಾಣಿಸತೊಡಗಿರುವುದರಿಂದ ಜನರು ಭಯಭೀತರಾಗಿದ್ದಾರೆ. ಆನೆ ಹಾವಳಿ ತಡೆಗೆ ಅರಣ್ಯ ಇಲಾಖೆಯು ತ್ವರಿಗತಿಯಲ್ಲಿ ಸೂಕ್ತ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಕೋರಿಕೊಂಡಿದ್ದಾರೆ.