ಮಡಿಕೇರಿ, ಸೆ. ೧೭: ಇಂದು ರಾಜ್ಯಾದ್ಯಂತ ಏರ್ಪಡಿಸಿದ್ದ ಮೆಗಾ ಲಸಿಕಾ ಮೇಳದ ಮುಖೇನ ೩೦ ಲಕ್ಷದಷ್ಟು ಲಸಿಕಾ ಡೋಸ್‌ಗಳನ್ನು ನೀಡುವ ಗುರಿಯನ್ನು ರಾಜ್ಯ ಸರಕಾರ ಹೊಂದಿದ್ದು, ಕೊಡಗು ಜಿಲ್ಲೆಗೆ ಸರಬರಾಜಾಗಿದ್ದ ೨೦,೦೦೦ ಲಸಿಕಾ ಡೋಸ್‌ಗಳ ಪೈಕಿ ೧೭,೯೩೭ ರಷ್ಟು ಡೋಸ್‌ಗಳನ್ನು ಸಾರ್ವಜನಿಕರು ಪಡೆದುಕೊಂಡಿದ್ದಾರೆ.

ಜಿಲ್ಲೆಯ ೧೮ ವರ್ಷ ಮೇಲ್ಪಟ್ಟ ಒಟ್ಟು ೪,೦೨,೫೬೦ ಮಂದಿಯ ಪೈಕಿ ಇದುವರೆಗೆ ಒಟ್ಟು ೩,೬೦,೭೦೨ ಮಂದಿ ಮೊದಲನೆಯ ಡೋಸ್ ಹಾಗೂ ೧,೫೨,೮೪೧ ಮಂದಿ ಎರಡನೆಯ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ ಎಂದು ಜಿಲ್ಲಾ ಲಸಿಕಾ ಅಧಿಕಾರಿ ಡಾ.ಗೋಪಿನಾಥ್ ಅವರು ಮಾಹಿತಿ ನೀಡಿದ್ದಾರೆ.

ಈ ಹಿಂದೆ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸುತ್ತಿದ್ದ ಹಾಡಿ ನಿವಾಸಿಗಳು ಕೂಡ ಲಸಿಕೆ ಪಡೆದುಕೊಂಡಿದ್ದಾರೆ. ಪಂಚಾಯಿತಿ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರು ಇಂತಹವರ ಮನೆಮನೆಗಳಿಗೆ ತೆರಳಿ ಲಸಿಕೆ ಹಾಕಿಸಿಕೊಳ್ಳುವಂತೆ ಜಾಗೃತಿ ಮೂಡಿಸಿದ ಫಲವಾಗಿ ಲಸಿಕಾ ಅಭಿಯಾನ ಯಶಸ್ವಿಯಾಗಿ ಸಾಗಿದೆ. ಇದಲ್ಲದೆ ತೋಟದ ಕಾರ್ಮಿಕರು, ಕಟ್ಟಡ ಕಾರ್ಮಿಕರ ಮನವೊಲಿಸಿ ಲಸಿಕೆ ನೀಡುವ ಪ್ರಯತ್ನ ಕೂಡ ಸಫಲವಾಗಿದ್ದು, ಅಭಿಯಾನ ಯಶಸ್ವಿಯಾಗಿದೆ.

ಇಂದು ನಡೆದ ಬೃಹತ್ ಲಸಿಕಾ ಮೇಳದಲ್ಲಿ ಜಿಲ್ಲೆಯಲ್ಲಿ ೧೭೨ ಆರೋಗ್ಯ ಕಾರ್ಯಕರ್ತರು, ೧೦ ಶುಶ್ರೂಷಕಿಯರು ಸೇರಿದಂತೆ ಒಟ್ಟು ಇಲಾಖೆಯ ೨೦೨ ಸಿಬ್ಬಂದಿಗಳು ಭಾಗಿಯಾಗಿ ಸುಸೂತ್ರವಾಗಿ ಲಸಿಕೆ ನೀಡುವ ಕಾರ್ಯಕ್ಕೆ ಕೈಜೋಡಿಸಿದರು. ಇದಲ್ಲದೆ ವೈದ್ಯಕೀಯ ಕಾಲೇಜಿನ ೩೦ ವಿದ್ಯಾರ್ಥಿಗಳು ಲಸಿಕಾ ಅಭಿಯಾನಕ್ಕೆ ಸಹಕರಿಸಿದರು.