ಶ್ರೀಮಂಗಲ, ಸೆ. ೧೫: ಕೊಡಗು ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಉಂಟಾಗಿರುವ ಬೆಳೆ ನಷ್ಟದ ಸಮೀಕ್ಷೆಯನ್ನು ಕೈಗೊಂಡು ವರದಿ ಸಲ್ಲಿಸುವಂತೆ ಕಾಫಿ ಮಂಡಳಿಗೆೆ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಸೂಚಿಸಿದ್ದಾರೆ ಎಂದು ಕಾಫಿ ಮಂಡಳಿಯ ಜಂಟಿ ನಿರ್ದೆಶಕ ತಿಮ್ಮರಾಜು ತಿಳಿಸಿದ್ದಾರೆ.

ಕೊಡಗು ಬೆಳೆಗಾರರ ಒಕ್ಕೂಟವು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರಿಗೆ ಮಂಗಳವಾರ ಸಲ್ಲಿಸಿದ ಮನವಿ ಸಂದರ್ಭ ಕಾಫಿ ಮಂಡಳಿಯ ಅಧಿಕಾರಿಯೊಂದಿಗೆ ಸಭೆ ಕರೆದು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ಯನ್ನು ನೀಡಿದ್ದರು. ಮಂಗಳವಾರ ಅಪರಾಹ್ನ ಕಾಫಿ ಮಂಡಳಿಯ ಅಧಿಕಾರಿಯೊಂದಿಗೆ ಸಭೆ ನಡೆಸಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಬೆಳೆ ನಷ್ಟವಾಗಿರುವ ಸಮೀಕ್ಷೆಯನ್ನು ಕಂದಾಯ ಇಲಾಖೆಯೊಂದಿಗೆ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ಕಾಫಿ ಮಂಡಳಿ ಕೂಡಲೇ ಜಂಟಿಯಾಗಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ತಂಡವನ್ನು ರಚನೆ ಮಾಡಿ ನಷ್ಟ ಸಮೀಕ್ಷೆ ಕೈಗೊಳ್ಳುವುದಾಗಿ ಬುಧವಾರ ಹಾಸನದ ಕಾಫಿ ಮಂಡಳಿಯ ಜಂಟಿ ನಿರ್ದೇಶಕ ತಿಮ್ಮರಾಜು ಅವರು ಗೋಣಿಕೊಪ್ಪ ಕಾಫಿ ಮಂಡಳಿಗೆ ಆಗಮಿಸಿದ ಸಂದರ್ಭ ಅವರನ್ನು ಭೇಟಿ ಮಾಡಿದ ಕೊಡಗು ಬೆಳೆಗಾರರ ಒಕ್ಕೂಟದ ಪ್ರಮುಖರಿಗೆ ಮಾಹಿತಿ ನೀಡಿದರು.

ಕಳೆದ ೧೦ ವರ್ಷದಲ್ಲಿ ಆಗಿರುವ ಮಳೆಯ ಸರಾಸರಿಯನ್ನು ಮತ್ತು ಪ್ರಸಕ್ತ ವರ್ಷ ಆಗಿರುವ ಮಳೆಯ ಅಂಕಿ ಅಂಶವನ್ನು ಪರಿಶೀಲಿಸಿ ಸಮೀಕ್ಷೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಜಿಲ್ಲೆಯಲ್ಲಿ ಕಳೆದ ವರ್ಷದ ಮಳೆಯ ಪ್ರಮಾಣದಷ್ಟೆ ಈ ವರ್ಷವೂ ಆಗಿದ್ದು, ಬೆಳೆ ನಷ್ಟ ಪ್ರಮಾಣ ಹೆಚ್ಚಾಗಿದೆ. ಒಂದೇ ವಾರದಲ್ಲಿ ಎರಡರಿಂದ ಮೂರು ಇಂಚು ಮಳೆ ಸರಾಸರಿ ಸುರಿದಿದೆ. ನಿರಂತರವಾಗಿ ಸುರಿದ ಮಳೆಯಿಂದ ಕಾಫಿ, ಅಡಿಕೆ, ಕಾಳುಮೆಣಸು ಬೆಳೆಗಳು ಕೊಳೆ ರೋಗಕ್ಕೆ ತುತ್ತಾಗಿ ಹೆಚ್ಚಿನ ಪ್ರಮಾಣದಲ್ಲಿ ನಷ್ಟವಾಗಿದೆ ಎಂದು ಜಂಟಿ ನಿರ್ದೇಶಕ ತಿಮ್ಮರಾಜುರವರ ಗಮನಕ್ಕೆ ಅವರನ್ನು ಭೇಟಿ ಮಾಡಿದ ಕೊಡಗು ಬೆಳೆಗಾರರ ಒಕ್ಕೂಟದ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಖಜಾಂಚಿ ಮಾಣೀರ ವಿಜಯ್‌ನಂಜಪ್ಪ ಅವರು ತಂದರು. ಬೆಳೆ ನಷ್ಟದ ಸಮೀಕ್ಷೆಯನ್ನು ಮನವಿ ಮಾಡಿದ ತಕ್ಷಣವೇ ಬೆಳೆ ನಷ್ಟದ ಸಮೀಕ್ಷೆಗೆ ಸೂಚಿಸಿರುವ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರ ತಕ್ಷಣದ ಸ್ಪಂದನೆಗೆ ಬೆಳೆಗಾರರ ಒಕ್ಕೂಟ ಸ್ವಾಗತಿಸಿದೆ. ಈ ಸಂದರ್ಭ ಶ್ರೀಮಂಗಲ ಕಾಫಿ ಮಂಡಳಿಯ ಕಿರಿಯ ಸಂಪರ್ಕ ಅಧಿಕಾರಿ ಸುನೀಲ್ ಕುಮಾರ್ ಹಾಜರಿದ್ದರು.