ಧಾರವಾಡ, ಸೆ. ೧೫: ಕೋವಿಡ್ ದ್ವಿತೀಯ ಅಲೆಯಿಂದ ಮುಂದೂಡಿದ ಕನ್ನಡ ಸಾಹಿತ್ಯ ಪರಿಷತ್ನ ಚುನಾವಣೆ ಪ್ರಕ್ರಿಯೆ ಮುಂದಿನ ಎರಡು ತಿಂಗಳುಗಳ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಧಾರವಾಡ ಹೈಕೋರ್ಟ್, ಸರ್ಕಾಕ್ಕೆ ಹಾಗೂ ಚುನಾವಣೆ ಆಯೋಗಕ್ಕೆ ನಿರ್ದೇಶನ ನೀಡಿ ಬುಧವಾರ ಆದೇಶ ಹೊರಡಿಸಿದೆ. ೨೦೨೧ರರ ಮೇ ೯ರಂದು ನಿಗದಿಯಾಗಿದ್ದ ಕಸಾಪ ಚುನಾವಣೆ ಕೊರೊನಾ ೨ನೇ ಅಲೆ ತೀವ್ರ ಹಿನ್ನೆಲೆ ಅನಿರ್ದಿಷ್ಟಾವಧಿಗೆ ಮುಂದೂಡಿತ್ತು. ನಂತರ ಸಹಕಾರ ವಲಯ, ವಿವಿಧ ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಂತರ ಕಸಪಾ ಚುನಾವಣೆಯನ್ನು ಸರ್ಕಾರ ಪ್ರಕಟಿಸಲಿಲ್ಲ. ಹೀಗಾಗಿ ಕೇಂದ್ರ ಕಸಾಪ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಶೇಖರಗೌಡ ಮಾಲಿಪಾಟೀಲ ಅವರು, ರಾಜ್ಯ ಚುನಾವಣಾಧಿಕಾರಿಗೆ ಮನವಿ ಸಲ್ಲಿಸಿ, ಕಸಾಪ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು ಕೋರಿದ್ದರು. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಧಾರವಾಡ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.
ಅಲ್ಲದೇ, ಚುನಾವಣೆ ನಡೆಸಲು ಸೂಕ್ತ ನಿರ್ದೇಶನ ನೀಡುವಂತೆ ಕೋರಿದ್ದರು. ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್ನ ಏಕಸದಸ್ಯ ಪೀಠ, ಶೇಖರಗೌಡ ಮಾಲಿಪಾಟೀಲ ಅರ್ಜಿ ಪುರಸ್ಕರಿಸಿ, ಕಸಾಪ ಚುನಾವಣಾ ಪ್ರಕ್ರಿಯೆ ಎರಡು ತಿಂಗಳಲ್ಲಿ ಪೂರ್ಣಗೊಳಿಸಲು ಸರ್ಕಾರ ಹಾಗೂ ಚುನಾವಣೆ ಆಯೋಗಕ್ಕೆ ನಿರ್ದೇಶನ ನೀಡಿದೆ.