*ವೀರಾಜಪೇಟೆ, ಸೆ. ೧೫: ಇಂಜಿನಿಯರ್ ದಿನದ ಅಂಗವಾಗಿ ವೀರಾಜಪೇಟೆಯ ಪುರಭವನದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ದಿನದ ವಿಶೇಷದ ಬಗ್ಗೆ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷೆ ದೇಚಮ್ಮ ಕಾಳಪ್ಪ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ, ವಿಶ್ವೇಶ್ವರಯ್ಯ ಅಭಿಯಂತರರು ಮಾತ್ರವಲ್ಲದೇ ಮೈಸೂರಿನ ದಿವಾನರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಆಧುನಿಕ ಭಾರತವನ್ನು ಔದ್ಯೋಗಿಕರಣದ ಮೇಲೆ ಕಟ್ಟಬೇಕು ಎನ್ನುವುದು ಅವರ ಆಸೆಯಾಗಿತ್ತು. ದೇಶಕ್ಕಾಗಿ ಅವರನ್ನು ಮುಡಿಪಾಗಿ ಇಟ್ಟುಕೊಂಡಿದ್ದರು. ಮಾತು ಕಡಿಮೆ ಕೆಲಸ ಜಾಸ್ತಿ ಎನ್ನುವ ತತ್ವದಲ್ಲಿ ನಂಬಿಕೆ ಇರಿಸಿದ್ದರು ಎಂದರು.

ಪಟ್ಟಣ ಪಂಚಾಯತ್ ಹಿರಿಯ ಸದಸ್ಯ ಮತೀನ್ ಎಸ್.ಹೆಚ್ ಮಾತನಾಡುತ್ತಾ, ಹೈದರಾಬಾದಿನಲ್ಲಿ ಪ್ರವಾಹ ಬಂದಾಗ, ಅಲ್ಲಿನ ನಿಜಾಂರ ಕೋರಿಕೆಯ ಮೇರೆಗೆ ವಿದೇಶದಿಂದ ಆಗಮಿಸಿ ಹೈದರಾಬಾದ್ ನಗರಿಗೆ ಉತ್ತಮವಾದ ಒಳಚರಂಡಿ ವ್ಯವಸ್ಥೆ ಮಾಡುವ ಮೂಲಕ ಆ ನಗರವನ್ನು ಪ್ರವಾಹ ಮುಕ್ತ ಮಾಡಿದ ಕೀರ್ತಿ ನಮ್ಮ ವಿಶ್ವೇಶ್ವರಯ್ಯನವರಿಗೆ ಸಲ್ಲುತ್ತದೆ. ಅವರಲ್ಲಿದ್ದ ಪ್ರಾಮಾಣಿಕತೆ, ವೃತ್ತಿ ನಿಷ್ಠೆ ಮತ್ತು ದೂರದರ್ಶಿ ಗುಣಗಳನ್ನು ಜನಪ್ರತಿನಿಧಿಗಳಾಗಿ ನಾವೂ ರೂಢಿಸಿಕೊಂಡು ನಗರಕ್ಕೆ ಅಗತ್ಯವಾದ ಯೋಜನೆಗಳನ್ನು ಮಾಡಬೇಕು ಎನ್ನುವ ಸಲಹೆಯಿತ್ತರು.

ಪ.ಪಂ ಮುಖ್ಯಾಧಿಕಾರಿ ಚಂದ್ರಕುಮಾರ್ ಮಾತನಾಡುತ್ತಾ, ಸರ್.ಎಂ.ವಿ ಯವರು ರಾಜ-ಮಹಾರಾಜರುಗಳ ಆಸ್ಥಾನದಲ್ಲಿ ದಿವಾನರಾಗಿ ಕರ್ತವ್ಯ ನಿರ್ವಹಿಸಿ ದವರು. ಮೈಸೂರಿನ ರಸ್ತೆಗಳು ಅಷ್ಟು ವಿಶಾಲವಾಗಿರಲು ಇವರೇ ಕಾರಣ. ವಿಶ್ವೇಶ್ವರಯ್ಯನವರ ಹಾಗೇ ಪಟ್ಟಣ ಪಂಚಾಯತಿಯಲ್ಲಿಯೂ ಸಂಬAಧ ಪಟ್ಟ ಯಾವುದೇ ಯೋಜನೆ ಅನುಷ್ಠಾನ ಮಾಡುವಾಗ ಆ ಯೋಜನೆಯ ಭವಿಷ್ಯವನ್ನು ನೆನಪಿನ್ನಲ್ಲಿಟ್ಟುಕೊಂಡು ಕಾರ್ಯ ರೂಪಕ್ಕೆ ತರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಟ್ಟಣ ಪಂಚಾಯತ್ ಹಿರಿಯ ಅಭಿಯಂತರ ಹೇಮ ಕುಮಾರ್ ಎನ್.ಪಿ ಮಾತನಾಡುತ್ತಾ, ನಮ್ಮಲ್ಲಿ ಹಲವು ಬಗೆಯ ದಿನಾಚರಣೆಯನ್ನು ಮಾಡುತ್ತೇವೆ. ಆದರೆ ಇಡೀ ಸಮಾಜಕ್ಕೆ ಹುಟ್ಟಿ ದಲ್ಲಿಂದ ಸಾಯುವವರೆಗೆ ಮೂಲ ಭೂತ ಸೌಕರ್ಯ ಮಾಡಿಕೊಡುವ ಇಂಜಿನಿಯರ್‌ಗಳನ್ನು ಮಾತ್ರ ನಮ್ಮ ಸಮಾಜ ಕಡೆಗಣನೆ ಮಾಡಿದೆ ಎಂದೇ ಅನಿಸುತ್ತದೆ.

ಸಮಾಜ ನಮ್ಮನ್ನು ನೋಡುವ ದೃಷ್ಟಿ ಬದಲಾಗಬೇಕು. ವಿಶ್ವೇಶ್ವರಯ್ಯ ನವರು ಅವರ ಬದುಕಿನುದ್ದಕ್ಕೂ ಒಬ್ಬ ಇಂಜಿನಿಯರ್ ಹೇಗೆ ಶ್ರೇಷ್ಠ ಆಡಳಿತ ಗಾರನಾಗಬಲ್ಲ ಎಂದು ತೋರಿಸಿ ಕೊಟ್ಟರು ಎಂದು ಅವರ ಸಂಬAಧಿತ ಹಲವು ವಿಚಾರಗಳನ್ನು ನೆನಪು ಮಾಡಿಕೊಂಡರು. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಶ್ಮಿತಾ, ಎಲ್ಲಾ ಚುನಾಯಿತ ಸದಸ್ಯರುಗಳು, ಪ.ಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಸುನೀತಾ, ಇಂಜಿನಿಯರ್‌ಗಳು, ಪೌರಕಾರ್ಮಿಕರು, ಪ.ಪಂ ಕಚೇರಿ ಸಿಬ್ಬಂದಿಗಳು ಹಾಜರಿದ್ದರು.