ನಾಪೋಕ್ಲು, ಸೆ. ೧೫: ಎಲ್ಲರೂ ಕೊರೊನಾ ಬಗ್ಗೆ ಎಚ್ಚರಿಕೆ ವಹಿಸಬೇಕು. ಆದರೆ ಭಯಪಡುವ ಅಗತ್ಯವಿಲ್ಲ ಎಂದು ಲಯನ್ಸ್ ಕ್ಲಬ್‌ನ ಪ್ರಾಂತೀಯ ಅಧ್ಯಕ್ಷ ಪಿ.ಧನು ಉತ್ತಯ್ಯ ಹೇಳಿದರು.

ನಾಪೋಕ್ಲು ಕೊಡವ ಸಮಾಜದಲ್ಲಿ ನಾಪೋಕ್ಲು ಲಯನ್ಸ್ ಕ್ಲಬ್ ವತಿಯಿಂದ ಏರ್ಪಡಿಸಲಾಗಿದ್ದ ಪ್ರಾದೇಶಿಕ ಅಧ್ಯಕ್ಷರ ಭೇಟಿ ಮತ್ತು ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಕೊರೊನಾ ಸಂದರ್ಭದಲ್ಲಿ ಹಾಗೂ ಪ್ರಕೃತಿ ವಿಕೋಪ ಸಂದರ್ಭದಲ್ಲಿ ನಾಪೋಕ್ಲು ಲಯನ್ಸ್ ಕ್ಲಬ್ ವತಿಯಿಂದ ನಡೆಸಿದ ಸಮಾಜ ಸೇವೆ ಶ್ಲಾಘನೀಯ ಎಂದರು.

ಶಿಕ್ಷಕರ ದಿನಾಚರಣೆ ಬಗ್ಗೆ ಮಾತನಾಡಿದ ಅವರು ಗುರು ಸಾಕ್ಷಾತ್ ಪರಬ್ರಹ್ಮ ಎಂದು ಗುರುವನ್ನು ದೇವರಿಗೆ ಹೋಲಿಸಲಾಗಿದೆ. ಎಲ್ಲರೂ ಗುರುವಿಗೆ ಗೌರವ ಸಲ್ಲಿಸಿದಾಗ ಮಾತ್ರ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.

ಶಿಕ್ಷಕರ ದಿನಾಚರಣೆ ಪ್ರಯುಕ್ತ ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕಿ ಪಾರ್ವತಿ, ಲಯನ್ಸ್ ಕ್ಲಬ್ ಸಂಸ್ಥೆಯ ಉದ್ದೇಶ ಪರಸ್ಪರ ಗುರುತಿಸಿಕೊಳ್ಳುವದು ಮತ್ತು ಸಹಕಾರ ಮನೋಭಾವದೊಂದಿಗೆ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವದು. ನಾಪೋಕ್ಲು ಲಯನ್ಸ್ ಸಂಸ್ಥೆ ಪರಿಸರ, ಪ್ರಕೃತಿ, ಸ್ವಚ್ಛತೆಗೆ ಹೆಚ್ಚಿನ ಆಧ್ಯತೆ ನೀಡುತ್ತಿರುವದು ಶ್ಲಾಘನೀಯ ಎಂದರು.

ವಿದ್ಯೆ ಮತ್ತು ಬುದ್ದಿ ನಾಣ್ಯದ ಎರಡು ಮುಖಗಳಿದ್ದಂತೆ. ಇದಕ್ಕೆ ಶಿಕ್ಷಣದ ಅಗತ್ಯವಿದೆ ಎಂದರು. ಶಿಕ್ಷಕ ಶಿಸ್ತು, ಕ್ಷಮೆ ಮತ್ತು ಕರುಣೆಯನ್ನು ರೂಢಿಸಿಕೊಳ್ಳಬೇಕು. ಮಕ್ಕಳ ಭವಿಷ್ಯವನ್ನು ಸುಂದರವಾಗಿ ರೂಪಿಸುವದು ಶಿಕ್ಷಕ ಅಥವಾ ಗುರುವಿನ ಜವಾಬ್ದಾರಿಯಾಗಿದೆ ಎಂದರು. ಕುಂಚೆಟ್ಟಿರ ರೇಷ್ಮಾ ಉತ್ತಪ್ಪ ಮತ್ತು ಎಳ್ತಂಡ ಬೋಪಣ್ಣ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಪೋಕ್ಲು ಲಯನ್ಸ್ ಕ್ಲಬ್ ಅಧ್ಯಕ್ಷ ಮುಕ್ಕಾಟಿರ ವಿನಯ್ ವಹಿಸಿದ್ದರು.

ವೇದಿಕೆಯಲ್ಲಿ ಜ್ಯೋತಿ ಉತ್ತಯ್ಯ, ಲಯನ್ಸ್ ವಲಯಾಧ್ಯಕ್ಷ ಡಾ. ಪಂಚಮ್ ತಿಮ್ಮಯ್ಯ, ಶ್ಯಾಮ್ ಅಯ್ಯಪ್ಪ, ಗ್ಲೆನ್ ಮೆನಜಿ಼ಸ್, ನಾಪೋಕ್ಲು ಲಯನ್ಸ್ ಕ್ಲಬ್ ಕಾರ್ಯದರ್ಶಿ ಕೇಟೋಳಿರ ರತ್ನಾ ಚರ್ಮಣ್ಣ ಇದ್ದರು. ಈ ಸಂದರ್ಭದಲ್ಲಿ ಶಿಕ್ಷಕ ವೃತ್ತಿಯಲ್ಲಿದ್ದ ನಾಪೋಕ್ಲು ಲಯನ್ಸ್ ಕ್ಲಬ್ ಸದಸ್ಯರಿಗೆ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು. ಕಾಂಡAಡ ರೇಖಾ ಪೊನ್ನಣ್ಣ ಪ್ರಾರ್ಥನೆ, ಮುಕ್ಕಾಟಿರ ವಿನಯ್ ಸ್ವಾಗತ, ನಾಪೋಕ್ಲು ಲಯನ್ಸ್ ಕ್ಲಬ್ ಖಜಾಂಚಿ ಕೇಟೋಳಿರ ಕುಟ್ಟಪ್ಪ ವಂದಿಸಿದರು.